ADVERTISEMENT

ಬೀದರ್‌ | ಅರಣ್ಯದಲ್ಲಿ ರಸ್ತೆ ನಿರ್ಮಾಣ ಪ್ರಸ್ತಾವ ತಿರಸ್ಕರಿಸಿದ ಪರಿಸರ ಸಚಿವಾಲಯ

ಆರ್‌ಟಿಒ ಕಚೇರಿಯ ಸಂಪರ್ಕ ರಸ್ತೆಗಾಗಿ ಅರಣ್ಯ ಪ್ರದೇಶದ ಜಮೀನು ಪರಭಾರೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 27 ಮೇ 2025, 5:08 IST
Last Updated 27 ಮೇ 2025, 5:08 IST
ಬೀದರ್‌ ತಾಲ್ಲೂಕಿನ ಅಯಾಸಪೂರ ಸಮೀಪದ ನಿರ್ಮಾಣ ಹಂತದ ವಾಹನಗಳ ಚಾಲನಾ ಪರೀಕ್ಷಾ ವಲಯ ಹಾಗೂ ಭಾರಿ ವಾಹನಗಳ ಫಿಟ್‌ನೆಸ್‌ ಸರ್ಟಿಫಿಕೇಶನ್‌ (ಎಫ್‌ಸಿ) ಕೇಂದ್ರ
ಬೀದರ್‌ ತಾಲ್ಲೂಕಿನ ಅಯಾಸಪೂರ ಸಮೀಪದ ನಿರ್ಮಾಣ ಹಂತದ ವಾಹನಗಳ ಚಾಲನಾ ಪರೀಕ್ಷಾ ವಲಯ ಹಾಗೂ ಭಾರಿ ವಾಹನಗಳ ಫಿಟ್‌ನೆಸ್‌ ಸರ್ಟಿಫಿಕೇಶನ್‌ (ಎಫ್‌ಸಿ) ಕೇಂದ್ರ   

ಬೀದರ್‌: ತಾಲ್ಲೂಕಿನ ಅಯಾಸಪೂರ ಸಮೀಪದ ಆರ್‌ಟಿಒ ಕಚೇರಿಗೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಾಣಕ್ಕೆ ಅರಣ್ಯ ಪ್ರದೇಶಕ್ಕೆ ಸೇರಿದ 1.76 ಎಕರೆ ಜಮೀನು ನೀಡಬೇಕೆಂಬ ಬೀದರ್‌ ಜಿಲ್ಲಾ ಅರಣ್ಯ ಇಲಾಖೆಯ ಪ್ರಸ್ತಾವವನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಎಮ್‌ಒಇಎಫ್‌ಸಿಸಿ) ತಿರಸ್ಕರಿಸಿದೆ.

ಆರ್‌ಟಿಒ ₹ 9 ಕೋಟಿ ವೆಚ್ಚದಲ್ಲಿ ಅಯಾಸಪೂರ ಗ್ರಾಮದ ಸಮೀಪ 7 ಎಕರೆ ಜಾಗದಲ್ಲಿ ವಾಹನಗಳ ಚಾಲನಾ ಪರೀಕ್ಷಾ ವಲಯ ಹಾಗೂ ಭಾರಿ ವಾಹನಗಳ ಫಿಟ್‌ನೆಸ್‌ ಸರ್ಟಿಫಿಕೇಶನ್‌ (ಎಫ್‌ಸಿ) ಕೇಂದ್ರ ನಿರ್ಮಿಸುತ್ತಿದೆ. ಆದರೆ, ಇದಕ್ಕೆ ನೇರ ರಸ್ತೆ ಸಂಪರ್ಕದ ವ್ಯವಸ್ಥೆ ಇಲ್ಲ. ಅಯಾಸಪೂರ ಗ್ರಾಮದ ರಸ್ತೆ ಮೂಲಕ ಹೋಗಬೇಕು. ಆದರೆ, ಈ ರಸ್ತೆ ಬಹಳ ಕಿರಿದಾಗಿದ್ದು, ಭಾರಿ ವಾಹನಗಳ ಓಡಾಟಕ್ಕೆ ಅದು ಸೂಕ್ತವಾಗಿಲ್ಲ. ಅದಕ್ಕಾಗಿ ಚಿಟ್ಟಾ ಮೀಸಲು ಅರಣ್ಯ ಪ್ರದೇಶದಲ್ಲಿ 1.5 ಕಿ.ಮೀ ರಸ್ತೆ ನಿರ್ಮಾಣಕ್ಕೆ ಅನುಮತಿ ಕೊಡಬೇಕೆಂದು ಆರ್‌ಟಿಒ, ಅರಣ್ಯ ಇಲಾಖೆಗೆ ಕೋರಿಕೆ ಸಲ್ಲಿಸಿತ್ತು.

ಅದರಂತೆ ಅರಣ್ಯ ಇಲಾಖೆ ಕೆಲವು ಷರತ್ತುಗಳನ್ನು ವಿಧಿಸಿ ಪ್ರಸ್ತಾವ ಸಲ್ಲಿಸಿತ್ತು. ‘ಆರ್‌ಟಿಒ ಚಾಲನಾ ಪರೀಕ್ಷಾ ಕೇಂದ್ರ ಸಿದ್ಧಗೊಂಡ ನಂತರ ಪರೀಕ್ಷೆಗೆ ನಿತ್ಯ ಕನಿಷ್ಠ 200 ಭಾರಿ ವಾಹನಗಳು ಸಂಚರಿಸುತ್ತವೆ. ಇದಕ್ಕಾಗಿ ರಸ್ತೆ ನಿರ್ಮಾಣಕ್ಕೆ ಆರ್‌ಟಿಒ ಅನುಮತಿ ಕೇಳಿದೆ. ಇದಕ್ಕಾಗಿ ಬೇವಿನ ಮರ, ನೀಲಗಿರಿ ಸೇರಿದಂತೆ ಇತರೆ ಜಾತಿಯ 84 ಮರಗಳನ್ನು ತೆರವುಗೊಳಿಸಬೇಕಾಗುತ್ತದೆ. ಕೃಷ್ಣಮೃಗ, ಕಾಡುಹಂದಿಗಳು ಅಧಿಕ ಪ್ರಮಾಣದಲ್ಲಿದ್ದು, ವಾಹನಗಳ ಸಂಚಾರದಿಂದ ಅವುಗಳಿಗೆ ತೊಡಕಾಗಬಹುದು. ಅದಕ್ಕಾಗಿ ರಸ್ತೆಯ ಎರಡೂ ಬದಿಯಲ್ಲಿ 8ರಿಂದ 10 ಅಡಿ ಎತ್ತರದ ಗೋಡೆ ನಿರ್ಮಿಸಬೇಕಾಗುತ್ತದೆ. ಇತರೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಮ್‌.ಎಮ್‌. ಅವರು ಪ್ರಸ್ತಾವದಲ್ಲಿ ವಿವರಿಸಿದ್ದರು.

ADVERTISEMENT

ಈ ಮೀಸಲು ಅರಣ್ಯ ಪ್ರದೇಶವು ಯಾವುದೇ ರಾಷ್ಟ್ರೀಯ ಉದ್ಯಾನ, ಹುಲಿ ಸಂರಕ್ಷಿತ ಪ್ರದೇಶ ಅಥವಾ ಆನೆಗಳ ಕಾರಿಡಾರ್‌ಗೆ ಒಳಪಟ್ಟಿಲ್ಲ. ಅಳಿವಿನಂಚಿನಲ್ಲಿರುವ ಸಸ್ಯ ಸಂಪತ್ತು ಕೂಡ ಇಲ್ಲ. ಷರತ್ತಿಗೆ ಒಳಪಟ್ಟು ರಸ್ತೆ ನಿರ್ಮಿಸಲು ಅನುಮತಿ ಕೊಡಬಹುದು ಎಂಬ ವಿವರಣೆ ಒಳಗೊಂಡಿತ್ತು. ಈ ವಿಷಯವನ್ನು ವಾನತಿ ಅವರು ಭಾನುವಾರ ‘ಪ್ರಜಾವಾಣಿ‘ಗೆ ಖಚಿತಪಡಿಸಿದ್ದಾರೆ.

ಆದರೆ, ಪರಿಸರ ಸಚಿವಾಲಯವು ಅರಣ್ಯ ಪ್ರದೇಶದ ಸಂರಕ್ಷಣೆಯ ಭಾಗವಾಗಿ ಈ ಪ್ರಸ್ತಾವ ತಿರಸ್ಕರಿಸಲಾಗಿದೆ ಎಂದು ತಿಳಿಸಿದೆ. ‘ಈಗಾಗಲೇ ಆರ್‌ಟಿಒ ಕಚೇರಿಗೆ ಒಂದು ರಸ್ತೆ ಇದೆ. ಹೀಗಿರುವಾಗ ಅರಣ್ಯ ಪ್ರದೇಶದೊಳಗೆ ರಸ್ತೆ ನಿರ್ಮಿಸುವುದು ಸೂಕ್ತವಲ್ಲ. ಇದರಿಂದ 84 ಮರಗಳನ್ನು ಕತ್ತರಿಸಬೇಕಾಗುತ್ತದೆ. ಅಲ್ಲಿರುವ ವನ್ಯಜೀವಿಗಳಿಗೂ ಸಮಸ್ಯೆ ಎದುರಾಗುತ್ತದೆ’ ಕಾರಣ ನೀಡಿದೆ.

‘ನಾನು ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಿದ್ದೆ. ಅಯಾಸಪೂರ ಗ್ರಾಮದ ಮೂಲಕ ಹಾದು ಹೋಗಿರುವ ರಸ್ತೆ ಬಹಳ ಕಿರಿದಾಗಿದೆ. ಭವಿಷ್ಯದಲ್ಲಿ ದೊಡ್ಡ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಕೆಲವು ಷರತ್ತುಗಳೊಂದಿಗೆ ರಸ್ತೆ ನಿರ್ಮಾಣಕ್ಕೆ ಅನುಮತಿ ಕೊಡಬಹುದು ಎಂದು ತಿಳಿಸಿದ್ದೆ. ಆದರೆ, ಪರಿಸರ ಸಚಿವಾಲಯವು ಉಪಗ್ರಹ ಆಧಾರಿತ ಚಿತ್ರಗಳನ್ನು ಪರಿಶೀಲಿಸಿ, ಪ್ರಸ್ತಾವ ತಿರಸ್ಕರಿಸಿದೆ. ಈ ವಿಷಯವನ್ನು ಸರ್ಕಾರದ ಗಮನಕ್ಕೂ ತರಲಾಗಿದೆ’ ಎಂದು ವಾನತಿ ತಿಳಿಸಿದ್ದಾರೆ.

ಕೇಂದ್ರ ಪರಿಸರ ಸಚಿವಾಲಯದ ಕ್ರಮವನ್ನು ಪರಿಸರವಾದಿಗಳು ಸ್ವಾಗತಿಸಿದ್ದಾರೆ. ‘ಬೀದರ್‌ ಜಿಲ್ಲೆಯಲ್ಲಿ ಹಸಿರು ಕಡಿಮೆಯಾಗುತ್ತಿದೆ. ಹೀಗಿರುವಾಗ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಿಸಲು ಅವಕಾಶ ಕೊಟ್ಟರೆ ಇನ್ನಷ್ಟು ಹಸಿರು ಹೋಗುತ್ತದೆ. ಅರಣ್ಯ ಇಲಾಖೆಯ ಪ್ರಸ್ತಾವ ತಿರಸ್ಕರಿಸಿ ಪರಿಸರ ಸಚಿವಾಲಯ ಉತ್ತಮ ಕೆಲಸ ಮಾಡಿದೆ’ ಎಂದು ಪರಿಸರ ಹೋರಾಟಗಾರರೂ ಆದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ್‌ ಮಾಳಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಈಗಾಗಲೇ ಆರ್‌ಟಿಒ ಕಚೇರಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಅದಕ್ಕೆ ಸೂಕ್ತ ರಸ್ತೆಯಿಲ್ಲ. ರಸ್ತೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿದ್ದೆವು. ಅದು ತಿರಸ್ಕೃತಗೊಂಡಿದೆ.
– ಜಿ.ಕೆ. ಬಿರಾದಾರ ಆರ್‌ಟಿಒ ಬೀದರ್‌
ಸರ್ಕಾರದ ಕೋರಿಕೆ ಮೇರೆಗೆ ನಾನು ಕಳುಹಿಸಿದ್ದ ಪ್ರಸ್ತಾವವನ್ನು ಪರಿಸರ ಸಚಿವಾಲಯ ತಿರಸ್ಕರಿಸಿದೆ. ಪಟ್ಟಾ ಜಮೀನು ಖರೀದಿಸಿ ರಸ್ತೆ ನಿರ್ಮಿಸಿಕೊಳ್ಳಲು ಆರ್‌ಟಿಒಗೆ ಸಲಹೆ ಮಾಡಿದೆ.
– ವಾನತಿ ಎಂ.ಎಂ. ಉಪ ಅರಣ್ಯ ಸಂರಕ್ಷಣಾಧಿಕಾರಿ

Quote -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.