ADVERTISEMENT

ಮದುವೆ ನಿರಾಕರಣೆ: MLA ಪ್ರಭು ಚವಾಣ್, ಪುತ್ರನ ವಿರುದ್ಧ ಮಹಾರಾಷ್ಟ್ರದ ಯುವತಿ ದೂರು

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 12:24 IST
Last Updated 18 ಜುಲೈ 2025, 12:24 IST
<div class="paragraphs"><p>ಪ್ರಭು ಚವಾಣ್</p></div>

ಪ್ರಭು ಚವಾಣ್

   

ಔರಾದ್ (ಬೀದರ್‌ ಜಿಲ್ಲೆ): ಶಾಸಕ ಪ್ರಭು ಚವಾಣ್, ಅವರ ಮಗ ಪ್ರತೀಕ್ ಚವಾಣ್ ಹಾಗೂ ಕುಟುಂಬ ಸದಸ್ಯರ ವಿರುದ್ಧ ಮದುವೆ ನಿರಾಕರಣೆಯ ಸಂಬಂಧ ಮಹಾರಾಷ್ಟ್ರದ ದೇಗಲೂರ ತಾಲ್ಲೂಕಿನ ಸೇವಾದಾಸ ನಗರ ತಾಂಡಾದ ಯುವತಿಯೊಬ್ಬರು ರಾಜ್ಯ ಮಹಿಳಾ ಆಯೋಗ ಹಾಗೂ ರಾಜ್ಯದ ಗೃಹ ಸಚಿವರಿಗೆ ದೂರು ನೀಡಿದ್ದಾರೆ.

2023ರ ಡಿಸೆಂಬರ್ 25ರಂದು ಔರಾದ್‌ ತಾಲ್ಲೂಕಿನ ಬೋಂತಿಯ ಘಮಸುಬಾಯಿ ತಾಂಡಾದಲ್ಲಿ ಶಾಸಕ ಅವರ ಪುತ್ರ ಪ್ರತೀಕ್ ಚವಾಣ್ ಜತೆ ಎಲ್ಲರ ಸಮ್ಮುಖದಲ್ಲಿ ನನ್ನ ನಿಶ್ಚಿತಾರ್ಥವಾಗಿದೆ. ನಿಶ್ಚಿತಾರ್ಥದ ನಂತರ ನಾವಿಬ್ಬರೂ ಮಹಾರಾಷ್ಟ್ರ ದೇವಸ್ಥಾನ ಸೇರಿ ವಿವಿಧೆಡೆ ಸುತ್ತಾಡಲು ಹೋಗಿದ್ದೇವು. ಈ ವೇಳೆ ಪ್ರತೀಕ್ ನನ್ನ ಜತೆ ದೈಹಿಕ ಸಂಬಂಧ ಬೆಳೆಸಿದ್ದಾರೆ. ನನ್ನ ಪಾಲಕರು ಮದುವೆ ಸಂಬಂಧ ಮಾತನಾಡಲು ಹೋದಾಗ ಅವರೊಂದಿಗೆ ಜಗಳವಾಡಿದ್ದಾರೆ. ದೂರು ಕೊಡಲು ಹೋದರೆ ಪೊಲೀಸರು ಸ್ವೀಕರಿಸಿಲ್ಲ. ನನ್ನ ಹಾಗೂ ನನ್ನ ಕುಟುಂಬಕ್ಕೆ ಅನ್ಯಾಯ ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

‘ವೈಯಕ್ತಿಕ ಮಾನಹಾನಿಗೆ ಷಡ್ಯಂತ್ರ’

‘ನನ್ನನ್ನು ಚುನಾವಣೆಯಲ್ಲಿ ಸೋಲಿಸಲು ಸಫಲರಾಗದವರು ನನ್ನ ಹಾಗೂ ಕುಟುಂಬದ ವೈಯಕ್ತಿಕ ಮಾನಹಾನಿಗೆ ಷಡ್ಯಂತ್ರ ನಡೆಸಿದ್ದಾರೆ. ನಾನು ನಾಲ್ಕು ಬಾರಿ ಶಾಸಕನಾಗಿರುವುದು ಕೆಲವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಿಶ್ಚಿತಾರ್ಥ ವಿಷಯ ಉಭಯ ಕುಟುಂಬದವರು ಕುಳಿತು ಬಗೆಹರಿಸಿಕೊಂಡಿದ್ದೇವೆ. ಆದರೆ, ಕೆಲವರು ಅವರನ್ನು ಎತ್ತಿ ಕಟ್ಟುತ್ತಿದ್ದಾರೆ. ಅವರನ್ನು ಬೆಂಗಳೂರಿನ ತನಕ ಕರೆದೊಯ್ದು ದೂರು ಕೊಡಿಸಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಎಲ್ಲವೂ ಕಾನೂನಿನ ಮೂಲಕ ಎದುರಿಸುತ್ತೇನೆ’ ಎಂದು ಶಾಸಕ ಪ್ರಭು ಚವಾಣ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.