
ಬೀದರ್: ಸೌದಿ ಅರೇಬಿಯಾದಲ್ಲಿ ಸೋಮವಾರ ಸಂಭವಿಸಿದ ಬಸ್ ಅಪಘಾತದಲ್ಲಿ ಮೃತಪಟ್ಟ ನಗರದ ಮಹಿಳೆಯ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಸೌದಿಯಲ್ಲಿ ಸೋಮವಾರ ಸಂಭವಿಸಿದ ಬಸ್ ಅಪಘಾತದಲ್ಲಿ ನಗರದ ಮೈಲೂರಿನ ಸಿಎಂಸಿ ಕಾಲೊನಿಯ ನಿವಾಸಿ ರಹಮತ್‌ಬೀ (80) ಮೃತಪಟ್ಟಿದ್ದರು. ಇವರು ಹೈದರಾಬಾದ್ ಮೂಲಕ ಸೌದಿಗೆ ಪ್ರಯಾಣ ಬೆಳೆಸಿದ್ದರು. ಸೌದಿ ಅರೇಬಿಯಾದ ಮಕ್ಕಾದಿಂದ ಮದೀನಾಕ್ಕೆ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಟ್ಯಾಂಕರ್ ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ ಅದರೊಳಗಿದ್ದ 45 ಮಂದಿ ಮೃತಪಟ್ಟಿದ್ದರು. ಅದೇ ಬಸ್ಸಿನಲ್ಲಿ ಬೀದರ್ ಮಹಿಳೆ ಕೂಡ ಪ್ರಯಾಣಿಸುತ್ತಿದ್ದರು.
‘ಘಟನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚಿಸಿದ್ದೇನೆ. ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಮೃತರ ಕುಟುಂಬದವರೊಂದಿಗೆ ನಾನು ಮಾತನಾಡಿದ್ದೇನೆ. ಸೌದಿ ಅರೇಬಿಯಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲಾ ರೀತಿಯ ಅಗತ್ಯ ನೆರವು ಕಲ್ಪಿಸಲಾಗುವುದು. ಮೃತದೇಹವನ್ನು ಬೀದರ್‌ಗೆ ತರಲು ಜಿಲ್ಲಾಡಳಿತಕ್ಕೆ ಸೂಚನೆ ಕೊಡಲಾಗಿದೆ’ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಬೀದರ್ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಅವರು ಮಂಗಳವಾರ ಮೃತ ಮಹಿಳೆಯ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಮೃತದೇಹ ತರಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.