ADVERTISEMENT

‘ವೋಟ್ ಚೋರಿ’ ಕಾಂಗ್ರೆಸ್ ಪಕ್ಷಕ್ಕೆ ದಶಕಗಳ ಇತಿಹಾಸ: ಭಗವಂತ ಖೂಬಾ ಟೀಕೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 13:54 IST
Last Updated 25 ಸೆಪ್ಟೆಂಬರ್ 2025, 13:54 IST
   

ಬೀದರ್‌: ‘ಬಿಲ್ಲಿ ಸೌ ಚುವ್ವೆ ಖಾಕೆ ಹಜ್ ಗಯಾ’ ಎನ್ನುವಂತೆ ಈ ದೇಶದಲ್ಲಿ ಮತಗಳ್ಳತನದ ಜನ್ಮದಾತ ಕಾಂಗ್ರೆಸ್ ಪಕ್ಷವಾಗಿದೆ. ಸೋನಿಯಾ ಗಾಂಧಿ ಈ ದೇಶದ ಪ್ರಜೆ ಆಗುವ ಮುನ್ನವೇ ಅನೈತಿಕವಾಗಿ, ಅಧಿಕಾರ ದುರ್ಬಳಕೆ ಮಾಡಿಕೊಂಡು ಅವರ ಹೆಸರು ಮತದಾರ ಪಟ್ಟಿಯಲ್ಲಿ ಸೇರಿಸಿರುವುದು ಈಗಾಗಲೇ ಬಹಿರಂಗವಾಗಿದೆ. ಇಂತಹವರು ಮತಗಳ್ಳತನ ಆರೋಪ ಮಾಡುವುದು ಆಕಾಶಕ್ಕೆ ಮುಖ ಮಾಡಿ ಉಗುಳಿಕೊಂಡಂತೆ’ ಎಂದು ಕೇಂದ್ರದ ಮಾಜಿ ಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ಟೀಕಿಸಿದ್ದಾರೆ.

ಭಾಲ್ಕಿ ಬಿಕೆಐಟಿ ಕಾಲೇಜಿನಲ್ಲಿ ಓದುವ ಹೊರರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ಸಚಿವ ಈಶ್ವರ ಬಿ. ಖಂಡ್ರೆ ಅವರು ಕಳ್ಳ ದಾರಿಯಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ, ಅನೇಕ ಚುನಾವಣೆಗಳಲ್ಲಿ ಮತಗಳನ್ನು ಪಡೆದಿದ್ದಾರೆ. ಬೀದರ್‌ನ ಶಾಹಿನ್ ಕಾಲೇಜಿನಲ್ಲಿಯೂ ಅಕ್ರಮವಾಗಿ ಹೊಸ ಮತದಾರರನ್ನು ಮಾಡಿಸಿದ್ದಾರೆ. ಇಂತಹವರು ‘ಓಟ್ ಚೋರಿ’ ಬಗ್ಗೆ ಮಾತನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತಿದೆ ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಓಟ್ ಚೋರಿ, ಅಕ್ರಮ ಚುನಾವಣೆ ಕಾಂಗ್ರೆಸ್ ಸಂಸ್ಕೃತಿ. ಚುನಾವಣೆ ಅಕ್ರಮ ಪ್ರಕರಣದಡಿ ಈ ಹಿಂದೆ ಈಶ್ವರ ಬಿ. ಖಂಡ್ರೆ ಅವರಿಗೆ ನ್ಯಾಯಾಲಯ ₹5 ಲಕ್ಷ ದಂಡ ಹಾಕಿತ್ತು. ಹೀಗಿರುವಾಗ ಖಂಡ್ರೆಯವರಿಗೆ ಮತ ಕಳ್ಳತನದ ಬಗ್ಗೆ ಮಾತಾಡಲು ನಾಚಿಕೆ ಆಗಬೇಕು. ಕಾಂಗ್ರೆಸ್‌ ಪಕ್ಷದವರಿಗೆ ದೇಶದ ಕಾನೂನಿನ ಮೇಲೆ, ಸಂವಿಧಾನದ ಮೇಲೆ, ಪ್ರಜಾಪ್ರಭುತ್ವದ ಮೇಲೆ ಮತ್ತು ಸ್ವಾಯತ್ತ ಸಂಸ್ಥೆಗಳ ಮೇಲೆ ವಿಶ್ವಾಸವಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ಧಾರೆ. ಪ್ರತಿ ಬಾರಿಯೂ ಚುನಾವಣೆಯಲ್ಲಿ ಅಕ್ರಮ ಮಾಡಿ ಗೆಲ್ಲುತ್ತಿರುವ ಈಶ್ವರ ಖಂಡ್ರೆಯವರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.