ADVERTISEMENT

ಏನ್ರೀ, ಎಷ್ಟರ ಚಳಿ ಅವಾರೀ, ಮೈ ಗಡಗಡ ನಡುಗಲ್ತುದರೀ.. ಬೆಚ್ಚನೆಯ ಉಡುಪುಗಳ ಮೊರೆ

ಸೂರ್ಯೋದಯಕ್ಕೂ ಮುನ್ನ ಮನೆಯಿಂದ ಹೊರಬರಲು ಹಿಂಜರಿಯುತ್ತಿರುವ ಜನರು

ಪ್ರಜಾವಾಣಿ ವಿಶೇಷ
Published 15 ಡಿಸೆಂಬರ್ 2025, 6:16 IST
Last Updated 15 ಡಿಸೆಂಬರ್ 2025, 6:16 IST
ಭಾಲ್ಕಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಬೆಚ್ಚನೆ ಉಡುಪುಗಳ ಖರೀದಿಯಲ್ಲಿ ನಿರತರಾಗಿರುವ ಗ್ರಾಹಕರು
ಭಾಲ್ಕಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಬೆಚ್ಚನೆ ಉಡುಪುಗಳ ಖರೀದಿಯಲ್ಲಿ ನಿರತರಾಗಿರುವ ಗ್ರಾಹಕರು   

ಭಾಲ್ಕಿ: ಏನ್ರೀ, ಎಷ್ಟರ ಚಳಿ ಅವಾರೀ, ಮೈ ಗಡಗಡ ನಡುಗಲ್ತುದರೀ, ಸ್ವೇಟರ್, ಟೋಪಿ, ಮಫ್ಲರ್ ಇಲ್ದೇನೇ ಮನ್ಯಾಗಿಂದು ಹೊರಗ ಬರಲಾಕ ಮನ್ಸ ಆಗ್ಲತ್ತಿಲ್ಲರಿ, ಸಂಜಿಗಿ ಮನಿ ಸೇರೂರ ಸಾಕ ಅಲ್ಲತುದರಿ ಜೀವ.......

ಇತ್ತೀಚಿನ ದಿನಗಳಲ್ಲಿ ಬಹು ಜನರ ಬಾಯಿಂದ ಹೊರ ಬರುತ್ತಿರುವ ಶಬ್ದಗಳು ಇವು. ನವೆಂಬರ್ ತಿಂಗಳ ಎರಡನೇ ವಾರದಿಂದ ಚಳಿ ಮತ್ತು ತಣ್ಣನೆಯ ಗಾಳಿ ಬೀಸುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಜನರು ಸೂರ್ಯೋದಯಕ್ಕೂ ಮುನ್ನ ಮತ್ತು ಸೂರ್ಯಾಸ್ತದ ನಂತರ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

ಚಳಿ, ಥಂಡಿ ವಾತಾವರಣದಿಂದ ಬೆಚ್ಚಗಿರಿಸಿಕೊಳ್ಳಲು ಬೆಚ್ಚನೆ ಉಡುಪುಗಳ ಮೊರೆ ಹೋಗುತ್ತಿದ್ದಾರೆ. ಹಾಗಾಗಿ, ಈಗ ಎಲ್ಲೆಡೆ ವುಲನ್ ಬಟ್ಟೆಗಳ ಖರೀದಿ ಜೋರಾಗಿದೆ. ಕಳೆದ ಒಂದು ವಾರದಿಂದ ಮೈ ಕೊರೆಯುವ ಭಾರಿ ಚಳಿ ಇದೆ. ಚಳಿಯಾರ್ಭಟಕ್ಕೆ ತತ್ತರಿಸಿರುವ ಜನರು ಸಾಂಪ್ರದಾಯಿಕ ಹಾಗೂ ಆಧುನಿಕ ವಿನ್ಯಾಸದ ಬೆಚ್ಚನೆಯ ಉಡುಪುಗಳ ಖರೀದಿಗೆ ಮುಂದಾಗುತ್ತಿದ್ದಾರೆ.

ADVERTISEMENT

ತಮಗಿಷ್ಟವಾದ ಬಗೆ ಬಗೆಯ ಬಣ್ಣಗಳ ಆಕರ್ಷಕ ಸ್ಟೇಟರ್, ಜಾಕೆಟ್, ಮಂಕಿ ಕ್ಯಾಪ್, ಹ್ಯಾಂಡ್‌ ಗ್ಲೌಸ್ ಖರೀದಿಯಲ್ಲಿ ತೊಡಗಿದ್ದು, ಸಹಜವಾಗಿಯೇ ಇವುಗಳ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಿ ಹನುಮಂತ.

ಸಂಜೆಯಾಗುತ್ತಲೇ ಬಹುತೇಕ ಬಟ್ಟೆ ಅಂಗಡಿ, ರಸ್ತೆ ಅಕ್ಕ–ಪಕ್ಕದ ಅಂಗಡಿ ಹಾಕಿಕೊಂಡು ಕುಳಿತಿರುವ ಮತ್ತು ತಳ್ಳು ಗಾಡಿಗಳ ಮೇಲೆ ಬೆಚ್ಚನೆಯ ಉಡುಪುಗಳ ಮಾರಾಟದಲ್ಲಿ ತೊಡಗಿರುವವರ ಬಳಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಹಾಗಾಗಿ ಪ್ರತಿದಿನ ಸುಮಾರು ₹15 ಸಾವಿರದಿಂದ ₹20 ಸಾವಿರದವರೆಗೂ ವ್ಯಾಪಾರ ನಡೆಯುತ್ತಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸಿದ ವ್ಯಾಪಾರಿಗಳು.

ಹೆಚ್ಚಿದ ಆರೋಗ್ಯ ಸಮಸ್ಯೆ: ಹವಾಮಾನ ಬದಲಾವಣೆಯಿಂದ ಸಾರ್ವಜನಿಕರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹೆಚ್ಚಿದ ಚಳಿ ಮತ್ತು ಥಂಡಿ ವಾತಾವರಣ, ಕಳಂಡಿಯಿಂದಾಗಿ ಚಿಕ್ಕ ಮಕ್ಕಳು ಹಾಗೂ ವೃದ್ಧರಿಗೆ ಆರೋಗ್ಯ ಸಮಸ್ಯೆ ಕಾಡಲಾರಂಭಿಸಿದೆ.

ಬಹುತೇಕ ಜನ ವೈರಲ್‌ ಫಿವರ್‌, ಕೆಮ್ಮು, ನೆಗಡಿ ಹಾಗೂ ಇತರೆ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದಾರೆ. ಬೆಳಿಗ್ಗೆ 10 ಗಂಟೆಯಾದರೂ ಚಳಿ ಕಡಿಮೆಯಾಗುತ್ತಿಲ್ಲ. ಮೈ ಕೊರೆಯುವ ಚಳಿಯಿಂದ ಮಕ್ಕಳು ಶಾಲೆಗೆ ತೆರಳಲು ಪರದಾಡುತ್ತಿದ್ದರೆ, ಕೃಷಿ ಚಟುವಟಿಕೆಗೆ ಜಮೀನುಗಳಿಗೆ ತೆರಳಲು ರೈತರು ಹಿಂದೇಟು ಹಾಕುತ್ತಿದ್ದಾರೆ. ವಾಯು ವಿಹಾರಕ್ಕೂ ತಾತ್ಕಾಲಿಕ ಬ್ರೇಕ್‌ ಬಿದ್ದಿದೆ. ಬೆಚ್ಚನೆಯ ಉಡುಪು ಧರಿಸಿಕೊಂಡು ಮಕ್ಕಳು, ಹಿರಿಯರು ನಗರದಲ್ಲಿ ತಿರುಗಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.