ಹನೂರು: ಜಿಲ್ಲೆಯ ನಾಲ್ಕು ರಕ್ಷಿತಾರಣ್ಯಗಳಲ್ಲಿ ಒಂದಾಗಿರುವ ಮಲೆಮಹದೇಶ್ವರ ವನ್ಯಧಾಮದಲ್ಲಿ ಇದುವರೆಗೆ ಗೋಚರವಾಗದ ಸ್ಥಳಗಳಲ್ಲಿ ಹುಲಿಗಳು ಕಾಣಿಸಿಕೊಳ್ಳುತ್ತಿದ್ದು ಪ್ರಾಣಿಪ್ರಿಯರ ಸಂತಸಕ್ಕೆ ಕಾರಣವಾಗಿದೆ.
ಮಲೆ ಮಹದೇಶ್ವರ ಅರಣ್ಯ 2013ರಲ್ಲಿ ವನ್ಯಧಾಮವಾಗಿ ಘೋಷಣೆಯಾಗುವ ಮುನ್ನ ಮೀಸಲು ಅರಣ್ಯವಾಗಿತ್ತು. ಆಗ 6 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. 2018ರ ಜನವರಿಯಲ್ಲಿ ವನ್ಯಧಾಮದ ಆರು ವಲಯಗಳಲ್ಲಿ 9 ದಿನಗಳ ಕಾಲ ನಡೆದ ಹುಲಿಗಣತಿಯಲ್ಲಿ 18 ಹುಲಿಗಳು ಪತ್ತೆಯಾಗಿದ್ದವು. ವನ್ಯಧಾಮದ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಚಿತ್ರಗಳು ವ್ಯಾಘ್ರಗಳ ಸಂಖ್ಯೆ ಹೆಚ್ಚಾಗಿರುವುದನ್ನು ದೃಢಪಡಿಸಿದ್ದವು ಎಂದು ಅಧಿಕಾರಿಗಳು ಹೇಳುತ್ತಾರೆ.
ಮಹದೇಶ್ವರ ಬೆಟ್ಟ, ಹನೂರು ಹಾಗೂ ಯಡೆಯಾರಳ್ಳಿ ಮೀಸಲು ರಕ್ಷಿತಾರಣ್ಯವನ್ನು ಒಂದುಗೂಡಿಸಿ 906 ಚದರ ಕಿ.ಮೀ ವಿಸ್ತೀರ್ಣದ ಅರಣ್ಯವನ್ನು ಮಲೆಮಹದೇಶ್ವರ ವನ್ಯಧಾಮ ಎಂದು ಘೋಷಿಸಲಾಗಿದೆ. ವನ್ಯಧಾಮವಾಗಿ ಘೋಷಣೆಯಾದ ಬಳಿಕ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ಸಿಕ್ಕು ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಇತರೆ ಹುಲಿ ರಕ್ಷಿತಾರಣ್ಯಗಳಿಂದ ವಲಸೆ ಬರುವ ಹುಲಿಗಳ ಸಂತಾನೋತ್ಪತ್ತಿಗೆ ವನ್ಯಧಾಮ ಸೂಕ್ತವಾಗಿದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.
ಉತ್ತರಕ್ಕೆ ಕಾವೇರಿ ವನ್ಯಧಾಮ, ದಕ್ಷಿಣಕ್ಕೆ ತಮಿಳುನಾಡಿನ ಸತ್ಯಮಂಗಲ ಹುಲಿ ರಕ್ಷಿತಾರಣ್ಯ, ಪೂರ್ವಕ್ಕೆ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದೊಂದಿಗೆ ಬೆಸೆದುಕೊಂಡಿರುವ ಎಂಎಂ ಹಿಲ್ಸ್ ವನ್ಯಧಾಮವು ಹುಲಿಗಳ ಆವಾಸಕ್ಕೆ ಯೋಗ್ಯವಾದ ವಾತಾವರಣ ಹೊಂದಿದೆ. ಈ ಅಂಶಗಳನ್ನು ಗಮನಿಸಿ 2020–21ರಲ್ಲಿ ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಅನುಮತಿ ನೀಡಿತ್ತು. ಆದರೆ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.
ಪಿ.ಜಿ.ಪಾಳ್ಯ ವನ್ಯಜೀವಿ ವಲಯವು ಸತ್ಯಮಂಗಲ ಹುಲಿ ರಕ್ಷಿತಾರಣ್ಯ ಹಾಗೂ ಬಿಆರ್‌ಟಿ ಹುಲಿ ರಕ್ಷಿ-ತಾರಣ್ಯದೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ, ಇದು ಪ್ರಾಣಿಗಳ ಸಂಚಾರಕ್ಕೆ ಕಾರಿಡಾರ್‌ನಂತಿದೆ. ಎರಡು ಹುಲಿ ಸಂರಕ್ಷಿತ ಪ್ರದೇಶಗಳಿಂದ ಹುಲಿಗಳು ಆಹಾರ ಮತ್ತು ನೀರನ್ನು ಅರಸಿ ಮಲೆಮಹದೇಶ್ವರ ವನ್ಯಧಾಮಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ.
ವನ್ಯಧಾಮವಾದ ಬಳಿಕ ಹಿಂದಿದ್ದ 34 ಕಳ್ಳ ಬೇಟೆ ತಡೆ ಶಿಬಿರಗಳ ಜೊತೆಗೆ ಮೂರು ಹೊಸ ಶಿಬಿರಗಳನ್ನು ನಿರ್ಮಾಣ ಮಾಡಲಾಗಿದೆ. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಲು ಅರಣ್ಯ ವೀಕ್ಷಕರನ್ನು ನೇಮಿಸಲಾಗಿದೆ. ರಾಮಾಪುರ ವನ್ಯಜೀವಿ ವಲಯದಲ್ಲೂ ಹುಲಿಗಳ ಚಲನವಲನ ಕಂಡಬಂದಿದೆ. ನಾಲ್ಕು ಮರಿಗಳೊಂದಿಗೆ ತಾಯಿ ಹುಲಿ ಕಾಣಿಸಿಕೊಂಡಿದೆ.
ಸಫಾರಿಗರಿಗೆ ನಿರಂತರ ಹುಲಿ ದರ್ಶನ: ಮಲೆಮಹದೇಶ್ವರ ವನ್ಯಧಾಮದಲ್ಲಿ ಆರಂಭಿಸಲಾಗಿರುವ ಲೊಕ್ಕನಹಳ್ಳಿ ಹಾಗೂ ಅಜ್ಜೀಪುರ ಸಫಾರಿಯಲ್ಲಿ ಹೆಚ್ಚಾಗಿ ಹುಲಿಗಳ ದರ್ಶನವಾಗುತ್ತಿವೆ. ಪಿ.ಜಿ ಪಾಳ್ಯ ವನ್ಯಜೀವಿ ವಲಯದ ಲೊಕ್ಕನಹಳ್ಳಿ ಸಫಾರಿ ಕೇಂದ್ರದಲ್ಲಿ ಹಲವು ಬಾರಿ ಹುಲಿಗಳು ಕಾಣಿಸಿಕೊಂಡಿವೆ. ಹನೂರು ಬಫರ್ ವಲಯ ವ್ಯಾಪ್ತಿಯ ಅಜ್ಜೀಪುರ ಸಫಾರಿಯಲ್ಲೂ ಹುಲಿಗಳ ದರ್ಶನವಾಗುತ್ತಿದ್ದು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.
ಬಲಿ ಪ್ರಾಣಿಗಳ ಸಂಖ್ಯೆ ಹೆಚ್ಚು
ವನ್ಯಧಾಮದಲ್ಲಿ ಬಲಿ ಪ್ರಾಣಿಗಳ (ಸಸ್ಯಾಹಾರಿಗಳು) ಸಂಖ್ಯೆ ಹೆಚ್ಚಿರುವುದು ಕೂಡ ಹುಲಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ವನ್ಯಧಾಮದಲ್ಲಿರುವ ಸಸ್ಯಾಹಾರಿ ಪ್ರಾಣಿಗಳ ಸಂತತಿ ಬೆಳವಣಿಗೆ ಅರಿಯುವ ಸಲುವಾಗಿ 2017ರಲ್ಲಿ ಗಣತಿ ನಡೆಸಲಾಗಿತ್ತು. ಕುರುಚಲು ಗಿಡಗಳು ಹಾಗೂ ಹುಲ್ಲುಗಾವಲಿನಿಂದ ಆವೃತವಾಗಿರುವ ಮಲೆಮಹದೇಶ್ವರ ವನ್ಯಧಾಮದಲ್ಲಿ ಜಿಂಕೆ ಕಡವೆ ಕೊಂಡುಕುರಿ ಹಾಗೂ ಕಾಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದವು ಎನ್ನುತ್ತಾರೆ ಅಧಿಕಾರಿಗಳು. ‘ಮಲೆ ಮಹದೇಶ್ವರ ವನ್ಯಧಾಮದಲ್ಲಿ ಬಲಿ ಪ್ರಾಣಿಗಳು ಹೆಚ್ಚಾಗಿರುವುದರಿಂದ ಚಿರತೆ ಹುಲಿಯಂತಹ ಪ್ರಾಣಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಎರಡು ಹುಲಿ ಸಂರಕ್ಷಿತ ಪ್ರದೇಶಗಳೊಂದಿಗೆ ಎಂಎಂ ಹಿಲ್ಸ್ ಅರಣ್ಯ ಗಡಿ ಹಂಚಿಕೊಂಡಿರುವುದರಿಂದ ಹುಲಿಗಳು ಹೊಸ ಆವಾಸ ಸ್ಥಾನವಾಗಿಯೂ ಬದಲಾಗುತ್ತಿದೆ’ ಎನ್ನುತ್ತಾರೆ ಎಂಎಂ ಹಿಲ್ಸ್ ಡಿಸಿಎಫ್ ಭಾಸ್ಕರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.