ADVERTISEMENT

ಹನೂರು | ಹುಲಿಗಳ ಸಾವು: ಸಿಬ್ಬಂದಿ ಕೊರತೆಯೂ ಕಾರಣ

ಹೂಗ್ಯಂ ವನ್ಯಜೀವಿ ವಲಯದಲ್ಲಿ ಡಿಆರ್‌ಎಫ್‌, ಅರಣ್ಯ ರಕ್ಷಕರ ಹುದ್ದೆ ಖಾಲಿ

ಬಿ.ಬಸವರಾಜು
Published 2 ಜುಲೈ 2025, 7:05 IST
Last Updated 2 ಜುಲೈ 2025, 7:05 IST
ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯ
ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯ   

ಹನೂರು: ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯದಲ್ಲಿ ಐದು ಹುಲಿಗಳ ಸಾವಿಗೆ ಅಧಿಕಾರಿಗಳ ಹಾಗೂ ಸಿಬ್ಬಂದಿ ಕೊರತೆಯೂ ಪರೋಕ್ಷ ಕಾರಣ ಎನ್ನಲಾಗಿದೆ.

ಹೂಗ್ಯಂ ವನ್ಯಜೀವಿ ವಲಯದಲ್ಲಿ ಎರಡು ಶಾಖೆಗಳಿದ್ದು 9 ಬೀಟ್‌ಗಳಿವೆ. ಓರ್ವ ವಲಯ ಅರಣ್ಯಾಧಿಕಾರಿ, ನಾಲ್ವರು ಉಪ ವಲಯ ಅರಣ್ಯಾಧಿಕಾರಿಗಳು ಹಾಗೂ 9 ಅರಣ್ಯ ರಕ್ಷಕರ ಹುದ್ದೆಗಳು ಹೂಗ್ಯಂ ವನ್ಯಜೀವಿ ವಲಯಕ್ಕೆ ಮಂಜೂರಾಗಿವೆ. ಆದರೆ, ಪ್ರಸ್ತುತ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಇಬ್ಬರು ಉಪ ವಲಯ ಅರಣ್ಯಾಧಿಕಾರಿಗಳು ಹಾಗೂ 6 ಮಂದಿ ಗಾರ್ಡ್‌ಗಳು ಮಾತ್ರ. 

ಉಳಿದಂತೆ ಇಬ್ಬರು ಡಿಆರ್‌ಎಫ್‌ಒ ಹಾಗೂ 3 ಗಾರ್ಡ್‌ ಹುದ್ದೆಗಳು ಖಾಲಿ ಉಳಿದಿವೆ. ಹುಲಿಗಳು ಮೃತಪಟ್ಟಿರುವ ಮೀಣ್ಯಂ ಶಾಖೆಗೆ 5 ಗಾರ್ಡ್‌ಗಳ ಹುದ್ದೆ ಮಂಜೂರಾತಿ ಇದ್ದರೂ ಹಾಲಿ ಇಬ್ಬರು ಗಾರ್ಡ್‌ಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಗಾರ್ಡ್‌ಗಳು ಮೀಣ್ಯಂ ಶಾಖೆಗೆ ಹೊಸಬರಾಗಿದ್ದು ಒಂದು ತಿಂಗಳಿಂದಷ್ಟೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

ಸಾಮಾನ್ಯವಾಗಿ ಅರಣ್ಯದೊಳಗೆ ಗಸ್ತು ಕರ್ತವ್ಯಕ್ಕೆ ನಿಯೋಜನೆ ಮಾಡುವಾಗ ನಿರ್ದಿಷ್ಟ ಶಾಖೆಯ ಸಂಪೂರ್ಣ ಮಾಹಿತಿಯ ಅರಿವು ಇರಬೇಕು. ಪ್ರಾಣಿಗಳ ಚಲನವಲನಗಳ ಮಾಹಿತಿ ಇರಬೇಕು. ಆದರೆ, ಗಾರ್ಡ್‌ಗಳ ಕೊರತೆಯಿಂದ ಅನಿವಾರ್ಯವಾಗಿ ಹೊಸಬರನ್ನು ನಿಯೋಜಿಸಲಾಗುತ್ತಿದೆ ಎನ್ನಲಾಗಿದೆ.

ಹುಲಿಗಳು ಮೃತಪಟ್ಟ ಸ್ಥಳದಿಂದ ಮಾರಳ್ಳಿ ಕಳ್ಳಬೇಟೆ ತಡೆ ಶಿಬಿರದ ಮಧ್ಯೆ ಕೇವಲ 870 ಮೀಟರ್ ಅಂತರವಿದೆ. ಹುಲಿಗಳು ಮೃತಪಡುವ ಎರಡು ದಿನಗಳ ಮುನ್ನವಷ್ಟೆ ಶಿಬಿರದ ಸಿಬ್ಬಂದಿ ಅಲ್ಲಿ ಗಸ್ತು ಮಾಡಿದ್ದಾರೆ. ಜೂನ್ 23ರಂದು ಎಲ್ಲ ಸಿಬ್ಬಂದಿಯು ವೇತನಕ್ಕಾಗಿ ಪ್ರತಿಭಟನೆ ನಡೆಸಲು ಕೊಳ್ಳೇಗಾಲದ ಡಿಸಿಎಫ್ ಕಚೇರಿ ಬಳಿ ತೆರಳಿದ್ದರು. ಈ ಅವಧಿಯಲ್ಲಿ ಕಿಡಿಗೇಡಿಗಳು ಹುಲಿಗಳಿಗೆ ವಿಷವಿಕ್ಕಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸೂಕ್ಷ್ಮ ಪ್ರದೇಶ: ಹೂಗ್ಯಂ ವನ್ಯಜೀವಿ ವಲಯವು ತಮಿಳುನಾಡಿನ ಗಡಿಗೆ ಅಂಟಿಕೊಂಡಿದೆ. ದಟ್ಟಾರಣ್ಯವಾಗಿರುವುದರಿಂದ ನಿರಂತರ ಗಸ್ತು ನಿಯೋಜನೆ ಇಲ್ಲಿ ಅತ್ಯವಶ್ಯಕ. ಬೆಳಗಿನ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಗಸ್ತು ಮಾಡಿದರೆ, ರಾತ್ರಿ ವೇಳೆ ಜೀಪ್‌ಗಳಲ್ಲಿ ಗಸ್ತು ಮಾಡಬೇಕು. ಆದರೆ, ಗಸ್ತು ತಿರುಗಲು ಕೆಳಹಂತದ ಸಿಬ್ಬಂದಿಗೆ ಸಮರ್ಪಕ ಸೌಲಭ್ಯಗಳು ಇರಲಿಲ್ಲ ಎಂದು ಕೆಳಹಂತದ ಸಿಬ್ಬಂದಿ ದೂರುತ್ತಾರೆ.

ಹುಲಿಗಳಿಗೆ ವಿಷವಿಕ್ಕಿ ಕೊಂದಿರುವ ಆರೋಪದ ಮೇಲೆ ಬಂಧಿತರಾಗಿರುವ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಪ್ಪ ಗ್ರಾಮದ ಕೋನಪ್ಪ, ಮಾದುರಾಜು ಹಾಗೂ ನಾಗರಾಜು ಜೂನ್ 23ರಂದು ಹಸುಗಳನ್ನು ಮೇಯಿಸಿಲು ಕಾಡಿಗೆ ತೆರಳಿದ್ದರು. ಮಧ್ಯಾಹ್ನ ಕೋನಪ್ಪನಿಗೆ ಸೇರಿದ್ದ ಹಸುವಿನ ಮೇಲೆ ಹುಲಿ ದಾಳಿ ಮಾಡಿದೆ. ಇದರಿಂದ ಕುಪಿತಗೊಂಡ ಮಾದುರಾಜು ಹಾಗೂ ನಾಗರಾಜು ಅರಿಸಿನ ಬೆಳೆಗೆ ಹಾಕಲು ತಂದಿಟ್ಟಿದ್ದ ಪೊರೆಟ್ ವಿಷಕಾರಿ ರಾಸಾಯನಿಕ ಕಾಳುಗಳನ್ನು ಸಂಜೆಯ ಹೊತ್ತಿಗೆ ತಂದು ಹುಲಿ ತಿಂದು ಬಿಟ್ಟಿದ್ದ ಹಸುವಿನ ಕಳೇಬರಕ್ಕೆ ಹಾಕಿದ್ದಾರೆ. ಬಳಿಕ ವಿಷಪ್ರಾಶನವಾಗಿದ್ದ ಮಾಂಸವನ್ನು ತಿಂದ ಹುಲಿಗಳು ಮೃತಪಟ್ಟಿವೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.