ಅರಣ್ಯ ಸಚಿವ ಈಶ್ವರ ಖಂಡ್ರೆ
ಬೆಂಗಳೂರು: ‘ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಚುರುಕುಗೊಳಿಸಿ ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಬಳಿಕ ನಿಖರ ಕಾರಣ ತಿಳಿಯಲಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಶನಿವಾರ ರಾಜ್ಯದ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮೈಸೂರು ವಿಭಾಗದ ಅರಣ್ಯಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ ಸಚಿವರು, ‘ಮೂರು ತಿಂಗಳ ಹಿಂದಿನ 5 ಹುಲಿ, ಈಗಿನ ಪ್ರಕರಣದಲ್ಲೂ ಆರೋಪಿಗಳಿಗೆ ಶೀಘ್ರದಲ್ಲಿ ಶಿಕ್ಷೆಯಾಗಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
’ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಮತ್ತೊಂದು ಹುಲಿ ಹತ್ಯೆ ಆಗಿರುವ ಹಿನ್ನೆಲೆಯಲ್ಲಿ ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಪ್ರಕ್ರಿಯೆ ಚುರುಕುಗೊಳಿಸಬೇಕು. ವನ್ಯಜೀವಿ ಮಂಡಳಿ ಇದಕ್ಕೆ ಅನುಮೋದನೆ ನೀಡಿರುವುದರಿಂದ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅಂತಿಮ ವರದಿ ಸಲ್ಲಿಸಿ’ ಎಂದು ತಿಳಿಸಿದರು.
‘ಅರಣ್ಯ ಪ್ರದೇಶದೊಳಗೆ ಇರುವ ಹಾಡಿಗಳ ದನಕರು, ಜನಸಂಖ್ಯೆ ಬಗ್ಗೆ ಸಂಪೂರ್ಣ ದತ್ತಾಂಶ ಕಲೆಹಾಕಬೇಕು. ಹಾಡಿಯ ದನಕರು ವನ್ಯಜೀವಿಯಿಂದ ಮೃತಪಟ್ಟರೆ ಬೇಗನೇ ಪರಿಹಾರ ನೀಡಲು ಕ್ರಮ ವಹಿಸಬೇಕು’ ಎಂದು ಸೂಚಿಸಿದರು.
‘ಹೊರಗುತ್ತಿಗೆಯ ಮುಂಚೂಣಿ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿ ಆಗಬೇಕು. ಕಳ್ಳಬೇಟೆ ನಿಗ್ರಹ ಶಿಬಿರ ಸಿಬ್ಬಂದಿಗೆ ಬೂಟು, ಆಹಾರ ಧಾನ್ಯದಂತ ಮೂಲಸೌಕರ್ಯ ಒದಗಿಸಿ’ ಎಂದು ಸಚಿವರು ಸೂಚನೆ ನೀಡಿದರು
‘ಅರಣ್ಯವಾಸಿಗಳು ಮತ್ತು ಕಾಡಿನಂಚಿನ ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ಭಾಗದಲ್ಲಿ ಗಸ್ತು ಹೆಚ್ಚಿಸಬೇಕು. ಸಿಬ್ಬಂದಿ ಗಸ್ತು ಕುರಿತಂತೆ ಜಿಪಿಎಸ್ ಸಹಿತ ಫೋಟೋ ತೆಗೆಯಲು ಸೂಚಿಸಿ, ಅದನ್ನು ಹಿರಿಯ ಅಧಿಕಾರಿಗಳು ಆಗಾಗ್ಗೆ ಪರಾಮರ್ಶಿಸಬೇಕು. ಎಂಸ್ಟ್ರೈಪ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಪಿ.ಸಿ. ರೇ, ಆನೆ ಯೋಜನೆ ನಿರ್ದೇಶಕ ಮನೋಜ್ ರಾಜನ್, ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್‌ಕುಮಾರ್ ಹಾಜರಿದ್ದರು.
‘ಜೋತು ಬಿದ್ದ ವಿದ್ಯುತ್ ತಂತಿ ತೆಗೆಯಿಸಿ’
ಚನ್ನಪಟ್ಟಣದ ಗೊಲ್ಲರದೊಡ್ಡಿಯ ಬಳಿ ತೆಂಗಿನಮರದ ಹೊಂಬಾಳೆ ತಿನ್ನಲು ಯತ್ನಿಸಿದ ಆನೆಯೊಂದು ವಿದ್ಯುತ್ ಕಂಬದ ತಂತಿ ಸ್ಪರ್ಶದಿಂದ ಮೃತಪಟ್ಟಿರುವ ಕುರಿತೂ ಸಭೆಯಲ್ಲಿ ಪರಾಮರ್ಶಿಸಲಾಯಿತು.
‘ಈ ವರ್ಷದಲ್ಲಿ 7 ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿವೆ. ರೈತರಿಗೆ, ತೋಟದ ಮಾಲೀಕರು ಬೇಲಿಯ ತಂತಿಗೆ ಅಕ್ರಮ ವಿದ್ಯುತ್ ಹರಿಸುವ ತಪಾಸಣೆ ನಡೆಲಾಗುತ್ತಿದೆ’ ಎಂದೂ ಸಭೆಗೆ ಅಧಿಕಾರಿಗಳು ತಿಳಿಸಿದರು.
‘ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗದಂತೆ ಹಾಗೂ ಅರಣ್ಯ ಪ್ರದೇಶ, ಅರಣ್ಯದಂಚಿನಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿಯ ದುರಸ್ತಿ ಮಾಡುವಂತೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪತ್ರ ಬರೆಯಿರಿ’ ಎಂದು ಸಚಿವರು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.