
ಗೌರಿಬಿದನೂರು ತಾಲ್ಲೂಕಿನ ಅಲೀಪುರಕ್ಕೆ ಅಯಾತೊಲ್ಲಾ ಅಲಿ ಖಮೇನಿ ಅವರು ಭೇಟಿ ನೀಡಿದ ಸಂದರ್ಭ
ಚಿಕ್ಕಬಳ್ಳಾಪುರ: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಸೇರಿ ಜಂಟಿ ದಾಳಿ ನಡೆಸಿ ಅಲ್ಲಿನ ಪರಮೊಚ್ಚ ನಾಯಕ ಅಯಾತೊಲ್ಲಾ ಖಮೇನಿಯವರನ್ನು ಹತ್ಯೆಮಾಡಿದೆ.
ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರ ಗ್ರಾಮಸ್ಥರಲ್ಲಿ ದುಗುಡ ಹೆಚ್ಚಾಗುತ್ತದೆ. ಅಲ್ಲಿರುವ ತಮ್ಮವರ ಸುರಕ್ಷತೆಗೆ ಪ್ರಾರ್ಥನೆ ನಡೆಸುತ್ತಿದ್ದಾರೆ. ತಮ್ಮವರ ಸುರಕ್ಷತೆ ಬಗ್ಗೆ ಕಳವಳಗೊಂಡಿದ್ದಾರೆ.
ವೈದ್ಯಕೀಯ ಶಿಕ್ಷಣ, ಧಾರ್ಮಿಕ ಶಿಕ್ಷಣದ ಕಾರಣಕ್ಕೆ ಅಲೀಪುರದ ಶಿಯಾ ಮುಸ್ಲಿಮರಿಗೆ ಇರಾನ್ ಅಚ್ಚುಮೆಚ್ಚಿನ ತಾಣ. 20 ಸಾವಿರ ಜನಸಂಖ್ಯೆಯ ಅಲೀಪುರದಲ್ಲಿ ಶಿಯಾ ಮುಸ್ಲಿಮರದ್ದೇ ಪ್ರಾಬಲ್ಯ. ಇರಾನ್ ತಮ್ಮ ಪವಿತ್ರ ಧಾರ್ಮಿಕ ಭೂಮಿ ಎನ್ನುವ ಪೂಜ್ಯ ಭಾವನೆ ಇಲ್ಲಿನ ಜನರದ್ದು. ಅಯಾತೊಲ್ಲಾ ಖಮೇನಿ ಧಾರ್ಮಿಕ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸುವ ದೊಡ್ಡ ವರ್ಗವೇ ಇಲ್ಲಿದೆ.
ಅಯಾತೊಲ್ಲಾ ಖಮೇನಿ 1986ರಲ್ಲಿ ಅಲೀಪುರಕ್ಕೆ ಭೇಟಿ ನೀಡಿದ್ದರು. ಇದು ಇರಾನ್ ಮತ್ತು ಅಲೀಪುರದ ಬಾಂಧವ್ಯಕ್ಕೆ ಸಾಕ್ಷಿ. ಖಮೇನಿ ಗುರು ಇರಾನ್ ಧಾರ್ಮಿಕ ನಾಯಕ ಅಯಾತೊಲ್ಲಾ ಇಮಾಮ್ ಖಮೇನಿ ಹೆಸರಲ್ಲಿ ಅಲೀಪುರದಲ್ಲಿ ಆಸ್ಪತ್ರೆ ಇದೆ. ಇದರ ಉದ್ಘಾಟನೆಗಾಗಿಯೇ ಖಮೇನಿ ಗ್ರಾಮಕ್ಕೆ ಬಂದಿದ್ದರು.
‘ಅಲೀಪುರದ ವರ್ತಕರು ಚಿನ್ನಾಭರಣ ವಜ್ರ ಹರಳು ವ್ಯಾಪಾರ ಮಾಡುತ್ತಾರೆ. ಆದರೆ ಇರಾನ್ ಜತೆ ವ್ಯಾಪಾರಕ್ಕಿಂತ ಧಾರ್ಮಿಕ ಸಂಬಂಧ ಗಾಢವಾಗಿ ಬೆಸೆದುಕೊಂಡಿದೆ. ಏಕೆಂದರೆ ಶಿಯಾ ಮುಸ್ಲಿಮರ ಪ್ರಮುಖ ಧಾರ್ಮಿಕ ಸ್ಥಳ ಮಶದ್ ಇರಾನ್‌ನಲ್ಲಿದೆ’ ಎಂದು ಗ್ರಾಮದ ಶಫೀಕ್ ‘ಪ್ರಜಾವಾಣಿ’ಗೆ ತಿಳಿಸಿದರು.
ಧಾರ್ಮಿಕ ಅಧ್ಯಯನಕ್ಕಾಗಿ ಗ್ರಾಮದ 50ಕ್ಕೂ ಹೆಚ್ಚು ಮಂದಿ ಇರಾನ್‌ನಲ್ಲಿ ನೆಲೆಸಿದ್ದಾರೆ. 15 ವಿದ್ಯಾರ್ಥಿಗಳು ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿದಿನ ಕರೆ ಮಾಡಿ ಬಂಧು ಬಾಂಧವರ ಯೋಗಕ್ಷೇಮ ವಿಚಾರಿಸುತ್ತಾರೆ ಎಂದರು. ‘ನಾವು ಚಿಕ್ಕವರಾಗಿದ್ದಾಗ ಖಮೇನಿ ಅವರು ನಮ್ಮ ಊರಿಗೆ ಭೇಟಿ ನೀಡಿದ್ದರು. ಆಗಲೇ ಅಲೀಪುರವನ್ನು ಬೇಬಿ ಆಫ್ ಇರಾನ್ ಎನ್ನುತ್ತಿದ್ದರು’ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಂಸ್ಥೆ ಅಧ್ಯಕ್ಷ ಅಲೀಪುರದ ಆರಿ ಅಸ್ಕಿಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.