ಮಂಜುನಾಥ ರೆಡ್ಡಿ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ (ಚಿಮುಲ್) ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಂಜುನಾಥ ರೆಡ್ಡಿ ಆಯ್ಕೆಯಾದರು.
ನಗರದ ಚಿಮುಲ್ ಕಚೇರಿಯಲ್ಲಿ ಸೋಮವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಬಾಗೇಪಲ್ಲಿ ಕ್ಷೇತ್ರದ ನಿರ್ದೇಶಕ ಮಂಜುನಾಥ ರೆಡ್ಡಿ ಮತ್ತು ಎನ್‌ಡಿಎ ಬೆಂಬಲಿತ ಅಭ್ಯರ್ಥಿಯಾಗಿ ಪೆರೇಸಂದ್ರ ಕ್ಷೇತ್ರದ ಕೆ.ವಿ.ನಾಗರಾಜ್ ನಾಮಪತ್ರ ಸಲ್ಲಿಸಿದರು.
ಅಂತಿಮವಾಗಿ ಕೆ.ವಿ.ನಾಗರಾಜ್ ನಾಮಪತ್ರ ವಾಪಸ್ ಪಡೆದರು. ಮಂಜುನಾಥ ರೆಡ್ಡಿ ಅವಿರೋಧ ಆಯ್ಕೆಯಾದರು.
ಕಾಂಗ್ರೆಸ್ ಮುಖಂಡರು ಚಿಮುಲ್ ಕಚೇರಿ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇದಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ, ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಸಭೆ ನಡೆಸಿದರು.
ಚಿಮುಲ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಆರು, ಗೌರಿಬಿದನೂರು ಪಕ್ಷೇತರ ಶಾಸಕ ಕೆ.ಎಚ್.ಪುಟ್ಟ ಸ್ವಾಮಿಗೌಡ ಬೆಂಬಲಿತ ಇಬ್ಬರು ಮತ್ತು ಎನ್ ಡಿಎ ಬೆಂಬಲಿತ ಐದು ನಿರ್ದೇಶಕರು ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ.
ಸರ್ಕಾರದ ನಾಮನಿರ್ದೇಶನ, ಎನ್ ಡಿಡಿಬಿ ಪ್ರತಿನಿಧಿ, ಕೆಎಂಎಫ್ ಪ್ರತಿನಿಧಿ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು, ಪಶು ಸಂಗೋಪನೆ ಮತ್ತು ಸಹಕಾರ ಇಲಾಖೆಯ ಪ್ರತಿನಿಧಿ ಸೇರಿ ಐದು ನಾಮನಿರ್ದೇಶನ ನಿರ್ದೇಶಕ ಸ್ಥಾನಗಳಿವೆ.
ಸರ್ಕಾರದ ನಾಮನಿರ್ದೇಶನ ಸ್ಥಾನಕ್ಕೆ ಈಗಾಗಲೇ ಕಾಂಗ್ರೆಸ್ ಮುಖಂಡ ಕೆ.ಆರ್.ರಾಜಣ್ಣ ಅವರನ್ನು ನೇಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.