ADVERTISEMENT

‘ಸಿರಿಧಾನ್ಯ; ರೈತರಿಗೆ ವರ’

ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 3:54 IST
Last Updated 31 ಡಿಸೆಂಬರ್ 2025, 3:54 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಮಹಿಳೆಯರಿಂದ ಅಡುಗೆಯ ಬಗ್ಗೆ ಮಾಹಿತಿ ಪಡೆಯುತ್ತಿರುವ ತೀರ್ಪುಗಾರರು 
ಚಿಕ್ಕಬಳ್ಳಾಪುರದಲ್ಲಿ ನಡೆದ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಮಹಿಳೆಯರಿಂದ ಅಡುಗೆಯ ಬಗ್ಗೆ ಮಾಹಿತಿ ಪಡೆಯುತ್ತಿರುವ ತೀರ್ಪುಗಾರರು    

ಚಿಕ್ಕಬಳ್ಳಾಪುರ: ಸಿರಿಧಾನ್ಯ ಬೆಳೆಯುವ ದೇಶಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಸಾಂಪ್ರದಾಯಿಕ ಕೃಷಿಯಲ್ಲಿ ಇದೊಂದು ವಿಶೇಷ ಮತ್ತು ವಿಶಿಷ್ಟ ಕೃಷಿ ಎಂದು ಜಂಟಿ ಕೃಷಿ ನಿರ್ದೇಶಕ ಎಸ್.ಎಸ್‌.ಆಬೀದ್ ತಿಳಿಸಿದರು.

ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈಗ ಒಂದು ಪ್ರದೇಶದಲ್ಲಿ ಒಂದೇ ಬೆಳೆ ಬೆಳೆಯುತ್ತಾರೆ. ಹಿಂದೆ ಒಂದು ಕಾಲದಲ್ಲಿ ಒಂದೇ ಪ್ರದೇಶದಲ್ಲಿ ಇಂತಹ ಕನಿಷ್ಠ ಹತ್ತು ಬೆಳೆಗಳನ್ನು ಬೆಳೆಯುತ್ತಿದ್ದರು. ಅಂದರೆ ಅಗತ್ಯಕ್ಕೆ ಅನುಗುಣವಾಗಿ ಅಕ್ಕಿ, ಗೋಧಿ, ನವಣೆ, ಸಜ್ಜೆಯ ಸಿರಿಧಾನ್ಯಗಳನ್ನು ಯಾವ ಸಮಯದಲ್ಲಾದರೂ ಬೆಳೆಯುತ್ತಿದ್ದರು ಎಂದರು.

ADVERTISEMENT

ಸಿರಿಧಾನ್ಯಗಳನ್ನು ಬೆಳೆಯಲು ಫಲವತ್ತಾದ ಭೂಮಿಯೇ ಬೇಕು ಎಂದಿಲ್ಲ. ತೆಳ್ಳನೆಯ ಮಣ್ಣಿನ ಪದರದ ನೆಲದಲ್ಲಿಯೂ ಸಿರಿಧಾನ್ಯಗಳು ಚೆನ್ನಾಗಿ ಬೆಳೆಯುತ್ತವೆ. ಕಲ್ಲಿನ ಜಮೀನಿನಲ್ಲಿ ಹಾರಕ ಹಾಗೂ ಕೊರಲೆ ಬೆಳೆಯುತ್ತವೆ. ಇಂತಹ ವಿಶಿಷ್ಟ ಗುಣಗಳಿಂದಲೇ ಸಿರಿಧಾನ್ಯಗಳು ರೈತರಿಗೆ ವರದಾನವಾಗಿವೆ ಎಂದರು.

ಸಿರಿಧಾನ್ಯಗಳನ್ನು ಕಡಿಮೆ ಖರ್ಚಿನಲ್ಲಿ ಬೆಳೆಯಬಹುದು. ರೈತರು ರಾಸಾಯನಿಕ ಗೊಬ್ಬರವನ್ನು ನೆಚ್ಚಿಕೊಂಡಿಲ್ಲ. ಕೊಟ್ಟಿಗೆ ಗೊಬ್ಬರ ಳಸಿ ಸಿರಿಧಾನ್ಯಗಳನ್ನು ಬೆಳೆಯಬಹುದು. ಕೀಟಗಳ ತೊಂದರೆಯ ಪ್ರಶ್ನೆಯೇ ಇರುವುದಿಲ್ಲ. ಸರ್ವರೋಗಕ್ಕೂ ರಾಮಬಾಣ ಸಿರಿಧಾನ್ಯ ಎಂದು ಹೇಳಿದರು.

ಮನುಷ್ಯರಿಗೆ ಕಾಡುತ್ತಿರುವ ಹೃದಯದ ಸಮಸ್ಯೆಗಳು, ಪಾರ್ಶ್ವವಾಯು, ರಕ್ತದೊತ್ತಡ, ಮಧುಮೇಹ ಹೀಗೆ ದೀರ್ಘಕಾಲ ಕಾಡುವ ಕಾಯಿಲೆಗಳಿಂದ ಜನರು ನಿಶಕ್ತರಾಗಿದ್ದಾರೆ. ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಸಿರಿಧಾನ್ಯ ಅವಶ್ಯಕತೆ ಜನರಿಗಿದೆ ಎಂದರು.

ಚಿಂತಾಮಣಿ ತಾಲ್ಲೂಕಿನ ಕುರುಬೂರು ಕೃಷಿ ವಿಜ್ಞಾನ ಕೇಂದ್ರ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ವಿಜ್ಞಾನಿ ಸೌಮ್ಯ ಮಾತನಾಡಿ, ಸಿರಿಧಾನ್ಯಗಳಲ್ಲಿ ಮೇಗ್ನಿಷಿಯಂ, ತಾಮ್ರ, ಪಾಸ್ಪರಸ್ ಮತ್ತು ಮ್ಯಾಂಗನೀಸ್ ಅಂಶಗಳು ಸೇರಿವೆ. ಆದರೆ ಸಿರಿಧಾನ್ಯಗಳಲ್ಲಿ ಯಾವುದೇ ಬಗ್ಗೆಯ ಗುಟ್ಲೆನ್ ಅಂಶ ಮತ್ತು ಆಮ್ಲದ ಅಂಶ ಇರುವುದಿಲ್ಲ. ಒಬ್ಬ ಮನುಷ್ಯ ಆರೋಗ್ಯವಾಗಿ ಜೀವನ ಮಾಡುವುದಕ್ಕೆ ಇದಕ್ಕಿಂತ ಬೇರೆ ವಿಷಯ ಬೇಕೆ ಎಂದರು.

ಆಹಾರದ ಈ ಅಂಶಗಳು ಮನುಷ್ಯನ ಆರೋಗ್ಯವನ್ನು ಸಮತೋಲನ ರೀತಿಯಲ್ಲಿ ಕಾಪಾಡುವುದರಿಂದ ಹೃದಯದ ಸಮಸ್ಯೆ ಅಥವಾ ಬೇರೆ ಇನ್ನಾವುದೇ ಕಾಯಿಲೆಗಳು  ಕಾಡುವುದಿಲ್ಲ. ನಾವು ಪ್ರತಿ ದಿನ ಸೇವಿಸುವ ಆಹಾರ ಪದಾರ್ಥಗಳಿಗೆ ಹೊಲಿಸಿದರೆ ಸಿರಿಧಾನ್ಯಗಳಲ್ಲಿ ಸಿಗುವ ಪೌಷ್ಠಿಕಾಂಶಗಳ ಲಾಭವೇ ಹೆಚ್ಚು ಎಂದು ತಿಳಿಸಿದರು.

ಉಪ ಕೃಷಿ ನಿರ್ದೇಶಕಿ ಜಿ. ದೀಪಶ್ರೀ, ಜಿ.ಆರ್. ಭವ್ಯರಾಣಿ, ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ ಎಸ್., ಅಮರನಾರಾಯಣರೆಡ್ಡಿ, ರವಿ ಪಿ.ಆರ್, ಕೃಷಿ ಅಧಿಕಾರಿಗಳಾದ ಶ್ರೀನಿವಾಸ ಎಂ., ಅಂಜುಳಾ‌ ಎನ್. ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಿರಿಧಾನ್ಯಗಳ ತಿನಿಸುಗಳ ಪಟ್ಟಿ ಎಲ್ಲಾ ತಾಲ್ಲೂಕುಗಳಿಂದ 69 ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಿ ಬಗೆ ಬಗೆ ಸಿಹಿ ಖಾದ್ಯ ಖಾದ್ಯ ಮತ್ತು ಮರೆತು ಹೋದ ಖಾದ್ಯಗಳಾದ ನವಣೆ ಸಜ್ಜೆ ಉಂಡೆ ನವಣೆ ಬಿಸಿ ಬೇಳೆ ಬಾತ್ ನವಣೆ ಪಾಯಸ ಸಜ್ಜೆ ಸಂಗಟಿ ರಾಗಿ ಲಟ್ಟು ಶಾವಿಗಿ ಹುಗ್ಗಿ ಸಾವೆ ಬಿಸ್ಕತ್ ಸಜ್ಜೆ ಜಿಲೇಬಿ ನವಣೆ ಚಕ್ಕುಲಿ ಕೊರಲೆ ಪಾಯಸ ನವಣೆ ಲಡ್ಡು ನವಣೆ ಬಿರಿಯಾನಿ ಸಜ್ಜೆ ಮಾದಲಿ ಸೇರಿದಂತೆ ಬಗೆ ಬಗೆಯ ಖಾದ್ಯ ಮತ್ತು ತಿನಿಸುಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.