ADVERTISEMENT

ಶಿಡ್ಲಘಟ್ಟ | ಶೌಚಾಲಯವಿಲ್ಲದೆ ವೃದ್ಧರು, ಮಹಿಳೆಯರ ಪರದಾಟ

ಡಿ.ಜಿ.ಮಲ್ಲಿಕಾರ್ಜುನ
Published 15 ಸೆಪ್ಟೆಂಬರ್ 2025, 5:35 IST
Last Updated 15 ಸೆಪ್ಟೆಂಬರ್ 2025, 5:35 IST
ಶಿಡ್ಲಘಟ್ಟದ ಪ್ರವಾಸಿ ಮಂದಿರದ ಹೊರಗೆ ಇರುವ ಸಾರ್ವಜನಿಕ ಶೌಚಾಲಯ
ಶಿಡ್ಲಘಟ್ಟದ ಪ್ರವಾಸಿ ಮಂದಿರದ ಹೊರಗೆ ಇರುವ ಸಾರ್ವಜನಿಕ ಶೌಚಾಲಯ   

ಶಿಡ್ಲಘಟ್ಟ: 2011ನೇ ಜನಗಣತಿಯ ಪ್ರಕಾರ ನಗರದ ಜನಸಂಖ್ಯೆ 50 ಸಾವಿರ. ಈಗ ಇನ್ನೂ ಹೆಚ್ಚಿದೆ. ನಗರಕ್ಕೆ ಬಂದು ಹೋಗುವವರ ಸಂಖ್ಯೆಯನ್ನೂ ಪರಿಗಣಿಸಿಕೊಂಡು ಗಮನಿಸಿದರೆ, ನಗರದಲ್ಲಿ ಸಾರ್ವಜನಿಕರ ಶೌಚಾಲಯ ಎರಡು ದಿಕ್ಕಿನಲ್ಲಿ ಎರಡು ಮಾತ್ರ ಮಾತ್ರ ಇವೆ.

ಒಂದು ಪ್ರವಾಸಿ ಮಂದಿರದ ಹೊರಗೆ ಇದ್ದರೆ ಮತ್ತೊಂದು ನಗರದ ಬಸ್ ನಿಲ್ದಾಣದ ಒಳಗೆ. ಬಸ್ ನಿಲ್ದಾಣದ ಬಳಿ ಹಣ್ಣು ಅಂಗಡಿಗಳ ಪಕ್ಕ ಇರುವುದು ಮತ್ತು ಸಂತೆ ಬೀದಿಯ ಬೋವಿ ಕಾಲೋನಿಯಲ್ಲಿ ಇರುವುದು ನಿರ್ವಹಣೆಯಿಲ್ಲದೆ ಬೀಗ ಜಡಿಯಲಾಗಿದೆ.

ನಗರದಲ್ಲಿ ಇರುವುದು ಎರಡು ಪ್ರಮುಖ ರಸ್ತೆಗಳು. ಒಂದು ಅಶೋಕ ರಸ್ತೆಯಾದರೆ ಮತ್ತೊಂದು ಟಿ.ಬಿ.ರಸ್ತೆ. ಊರಿನ ಹಳೆಯ ರಸ್ತೆ ಎನಿಸಿರುವ ಅಶೋಕ ರಸ್ತೆಯಲ್ಲಿ ನಗರಸಭೆ, ಸರ್ಕಾರಿ ಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಹಲವು ದೇವಸ್ಥಾನ, ರಸ್ತೆಯುದ್ದಕ್ಕೂ ಅಂಗಡಿ ಮುಂಗಟ್ಟುಗಳು ಇವೆ. ಟಿ.ಬಿ.ರಸ್ತೆಯು ಬಸ್ ನಿಲ್ದಾಣದಿಂದ ಪ್ರಾರಂಭವಾಗಿ ಕೋಟೆ ವೃತ್ತದ ಮೂಲಕ ಹಾದು ತಾಲ್ಲೂಕು ಕಚೇರಿವರೆಗೂ ಸಾಗುತ್ತದೆ. ಈ ರಸ್ತೆಯಲ್ಲಿಯೂ ಹಲವು ದೇವಸ್ಥಾನ, ಸಾಕಷ್ಟು ಅಂಗಡಿ, ಸರ್ಕಾರಿ ಕಚೇರಿಗಳು ಇವೆ. ಎರಡೂ ಜನನಿಬಿಡ ರಸ್ತೆಗಳಾಗಿವೆ. ಆದರೆ ಸಮರ್ಪಕ ಸಾರ್ವಜನಿಕ ಶೌಚಾಲಯ ಇರದ ಕಾರಣ ಜನರು ಪರದಾಡುವ ಪರಿಸ್ಥಿತಿ ಇದೆ.

ADVERTISEMENT

ಮಧುಮೇಹದಿಂದ ಬಳಲುವ ಹಿರಿಯರಂತೂ ತುಂಬಾ ಕಷ್ಟಪಡುತ್ತಾರೆ. ಗಂಡಸರು ಹಳೆಯ ಕಟ್ಟಡ, ಚರಂಡಿ, ರೈಲ್ವೆ ನಿಲ್ದಾಣದ ಹೊರಗೆ ಬೆಳೆದಿರುವ ಗಿಡಮರಗಳ ಬಳಿ ಹೋಗಿ ಮೂತ್ರ ವಿಸರ್ಜಿಸುವರು. ಆದರೆ ಮಹಿಳೆಯರ ಕಷ್ಟ ಹೇಳಲಿಕ್ಕಾಗದು. ಐ.ಬಿ ಹೊರಗಡೆ ಖಾಸಗಿಯವರು ನಿರ್ವಹಣೆ ಮಾಡುತ್ತಿರುವ ಸಾರ್ವಜನಿಕ ಶೌಚಾಲಯಗಳಲ್ಲಿಯೂ ಸಹ ಶುಚಿತ್ವ ಸಾಲದಾಗಿದೆ. ತಾಲ್ಲೂಕು ಕಚೇರಿ, ಪಂಚಾಯಿತಿ, ಪೊಲೀಸ್ ಠಾಣೆ, ಪುರಸಭೆ, ಬಿಇಒ ಕಚೇರಿ, ಲೋಕೋಪಯೋಗಿ ಇಲಾಖೆಗಳ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಶೌಚಾಲಯ ಇಲ್ಲ.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 274 ಗ್ರಾಮಗಳು, 28 ಗ್ರಾಮ ಪಂಚಾಯಿತಿಗಳು ಮತ್ತು ನಾಲ್ಕು ಹೋಬಳಿಗಳಿವೆ. ಒಂದಿಲ್ಲೊಂದು ಕೆಲಸಕ್ಕೆಂದು ಗ್ರಾಮೀಣ ಭಾಗದಿಂದ ಜನರು ನಗರಕ್ಕೆ ಬಂದೇ ಬರುತ್ತಾರೆ. ದೂರದಿಂದ ಬರುವವರಿಗೆ ಅದರಲ್ಲೂ ಮಹಿಳೆಯರು, ಹೆಣ್ಣುಮಕ್ಕಳು, ವೃದ್ಧರು ಅಗತ್ಯವಾದ ಸಾರ್ವಜನಿಕ ಶೌಚಾಲಯ ಇಲ್ಲದೇ ತುಂಬಾ ಕಷ್ಟಪಡುವಂತಾಗಿದೆ. ಈ ಬಗ್ಗೆ ಕನಿಷ್ಠ ಗಮನವೂ ಹರಿಸದ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯನ್ನು ಜನರು ಹಿಡಿಶಾಪ ಹಾಕುವ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

ನಗರದ ಬಸ್ ನಿಲ್ದಾಣದ ಬಳಿ ಹಣ್ಣು ಅಂಗಡಿಗಳ ಪಕ್ಕ ಇರುವ ಶೌಚಾಲಯಕ್ಕೆ ಬೀಗ ಜಡಿದಿದ್ದಾರೆ
ಬಿ.ಆರ್.ಅನಂತಕೃಷ್ಣ
ಛಾಯಾ ರಮೇಶ್
ಮುನಿರತ್ನಾಚಾರಿ
ಕೈತಪ್ಪಿದ ಇನ್ಫೋಸಿಸ್ ನೆರವು
ನಮ್ಮ ಟ್ರಸ್ಟ್ ಕಾರ್ಯಕ್ರಮಕ್ಕೆ 2014ರಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿಯನ್ನು ಕರೆಸಿದ್ದೆವು. ಶಿಡ್ಲಘಟ್ಟ ಉತ್ತಮವಾದ ನಾಲ್ಕು ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸಿಕೊಡುವುದಾಗಿ ಹಾಗೂ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿಯೂ ಶೌಚಾಲಯಗಳನ್ನು ಇನ್ಫೋಸಿಸ್ ಫೌಂಡೇಶನ್ ನಿಂದ ಕಟ್ಟಿಸಿಕೊಡುತ್ತೇವೆ ಅದಕ್ಕೆ ನಗರಸಭೆಯಿಂದ ಸ್ಥಳ ಗುರುತಿಸಿ ಪತ್ರ ಕೊಡಿಸಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಎಷ್ಟು ಸರ್ಕಾರಿ ಶಾಲೆಗಳಿಗೆ ಶೌಚಾಲಯ ಬೇಕಿದೆ ಎಂದು ಪತ್ರ ಕೊಡಿಸಿ ಎಂದು ಕೇಳಿದ್ದರು. ಆದರೆ ನಗರಸಭೆಯವರು ಸ್ಥಳ ಗುರುತಿಸಲೇ ಇಲ್ಲ ಮತ್ತು ಪತ್ರವನ್ನೂ ಕೊಡಲಿಲ್ಲ. ಆಗಿನ ಕ್ಷೇತ್ರ ಶಿಕ್ಷಣಾಧಿಕಾರಿ ಶೌಚಾಲಯ ನಿರ್ಮಿಸಿಕೊಟ್ಟರೆ ನೀರಿಗೆ ಏನು ಮಾಡುವುದು ಎಂದು ನನ್ನನ್ನೇ ಪ್ರಶ್ನಿಸಿದ್ದರು. ಐದಾರು ತಿಂಗಳು ನಿರಂತರ ಪ್ರಯತ್ನ ಮಾಡಿ ಕೊನೆಗೂ ಸುಮ್ಮನಾದೆ. ಬಿ.ಆರ್.ಅನಂತಕೃಷ್ಣ ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷ  ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ನಗರದ ಅಶೋಕ ರಸ್ತೆಯು ವ್ಯಾಪಾರಿ ಸ್ಥಳ. ರಸ್ತೆಯ ಎರಡೂ ಬದಿ ಅಂಗಡಿಗಳಿವೆ. ಬಹಳಷ್ಟು ಮಂದಿ ವ್ಯಾಪಾರಸ್ಥರು ವಯಸ್ಸಾದವರು. ನಮ್ಮಲ್ಲಿ ಬರುವ ಗ್ರಾಹಕರು ಅದರಲ್ಲೂ ಹಳ್ಳಿಗಳಿಂದ ಬರುವವರು ಮಹಿಳೆಯರು ಸಾರ್ವಜನಿಕ ಶೌಚಾಲಯವಿಲ್ಲದ ಕಾರಣ ತುಂಬಾ ಕಷ್ಟಪಡುತ್ತಾರೆ. ನಗರಸಭೆಯಲ್ಲಿರುವ ಶೌಚಾಲಯದ ದುರವಸ್ಥೆ ಬಣ್ಣಿಸಲು ಆಗದು. ವ್ಯಾಪಾರಸ್ಥರೆಲ್ಲರೂ ಹಲವು ಬಾರಿ ನಗರಸಭೆಯವರಿಗೆ ನಮ್ಮ ಸಮಸ್ಯೆ ತಿಳಿಸಿದ್ದೇವೆ. ಆದರೂ ಶೌಚಾಲಯ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಛಾಯಾ ರಮೇಶ್ ಛಾಯಾಚಿತ್ರಗ್ರಾಹಕ ಶೌಚಾಲಯ ಬಹು ಮುಖ್ಯ ಪ್ರತಿದಿನ ಹಳ್ಳಿಗಳಿಂದ ನಗರಕ್ಕೆ ನೂರಾರು ಮಂದಿ ಬಂದು ಹೋಗುತ್ತಾರೆ. ಗಂಡಸರಾದರೆ ಹೇಗೋ ಬೇಸರ ಪಟ್ಟುಕೊಂಡೇ ಚರಂಡಿ ಮುಂತಾದೆಡೆ ಮೂತ್ರ ವಿಸರ್ಜಿಸುತ್ತಾರೆ. ಆದರೆ ಹೆಣ್ಣು ಮಕ್ಕಳು ವಯಸ್ಕರ ಗತಿಯೇನು. ನಗರದ ಅಭಿವೃದ್ಧಿಗೆ ಸ್ವಚ್ಛತೆ ಮತ್ತು ಸಾರ್ವಜನಿಕ ಶೌಚಾಲಯ ಬಹು ಮುಖ್ಯ. ಈ ಬಗ್ಗೆ ಶಿಡ್ಲಘಟ್ಟದ ಹಿರಿಯ ನಾಗರಿಕರ ಪರವಾಗಿ ಶಾಸಕರಿಗೆ ಪೌರಾಯುಕ್ತರಿಗೆ ಮನವಿ ಕೂಡ ನೀಡಿದ್ದೇವೆ. ಮುನಿರತ್ನಾಚಾರಿ ಶ್ರೀಕಾಳಿಕಾಂಬ ಕಮಠೇಶ್ವರ ದೇವಾಲಯ ಸಮಿತಿ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.