ADVERTISEMENT

ಗರ್ಭಿಣಿ, ಕಾಯಿಲೆ ಇರುವ ಶಿಕ್ಷಕರಿಗೆ ವಿನಾಯಿತಿ ನೀಡಿ: ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 6:00 IST
Last Updated 17 ಸೆಪ್ಟೆಂಬರ್ 2025, 6:00 IST
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ನಿಯೋಗದಲ್ಲಿ ಪಾಲ್ಗೊಂಡಿದ್ದ ಪದಾಧಿಕಾರಿಗಳು
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ನಿಯೋಗದಲ್ಲಿ ಪಾಲ್ಗೊಂಡಿದ್ದ ಪದಾಧಿಕಾರಿಗಳು   

ಚಿಂತಾಮಣಿ: ಗರ್ಭಿಣಿ, ಅಂಗವಿಕಲ ಹಾಗೂ ತೀವ್ರತರ ಕಾಯಿಲೆ ಇರುವ ಶಿಕ್ಷಕರಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ಮಂಗಳವಾರ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಜಿಲ್ಲಾಧಿಕಾರಿ ಪಿ.ಎನ್‌. ರವೀಂದ್ರಗೆ ಮನವಿ ಸಲ್ಲಿಸಲಾಯಿತು.

ಸಮೀಕ್ಷೆ ಅವಧಿಯಲ್ಲಿ ದಸರಾ ಹಾಗೂ ನವರಾತ್ರಿ ಹಬ್ಬಗಳಿವೆ. ಶಿಕ್ಷಕರು ಹಬ್ಬಗಳಲ್ಲಿ ಪಾಲ್ಗೊಳ್ಳಲು ಸಮೀಕ್ಷೆಯನ್ನು ಒಂದು ವಾರ ಮುಂದೂಡಬೇಕು. ವರ್ಷಪೂರ್ತಿ ದುಡಿಯುವ ಶಿಕ್ಷಕರು ಕುಟುಂಬದ ಜತೆ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದೆ.

ಗರ್ಭಿಣಿ, ಬಾಣಂತಿ ಶಿಕ್ಷಕಿಯರು, ಅಂಗವಿಕಲ ಶಿಕ್ಷಕ, ಶಿಕ್ಷಕಿಯರು, ಕಾಯಿಲೆಯಿಂದ ಬಳಲುತ್ತಿರುವ ಶಿಕ್ಷಕ ಶಿಕ್ಷಕಿಯರು ಹಾಗೂ ವಯೋನಿವೃತ್ತಿ ಅಂಚಿನಲ್ಲಿರುವವರು  ಮನೆ–ಮನೆಗೂ ತಿರುಗಿ ಸಮೀಕ್ಷೆಯಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ ಅಂತಹ ಶಿಕ್ಷಕರಿಗೆ ಸಮೀಕ್ಷೆಯಿಂದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ರಜಾ ಅವಧಿ ಮತ್ತು ಹೆಚ್ಚುವರಿಯಾಗಿ ಗಣತಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಗೌರವಧನ ಹಾಗೂ ಗಳಿಕೆ ರಜೆಯನ್ನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಮನವಿ ಸ್ವೀಕರಿಸಿದರು. ಕಾನೂನಿನಂತೆ ಹಾಗೂ ಸಾಧ್ಯವಾದಷ್ಟು ಶಿಕ್ಷಕರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ. ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಆರ್. ಅಶೋಕ್ ಕುಮಾರ್, ಪಿ.ಪಿಳ್ಳನ್ನ, ಪದಾಧಿಕಾರಿಗಳು ನಿಯೋಗದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.