ಚಿಂತಾಮಣಿ (ಚಿಕ್ಕಬಳ್ಳಾಪುರ ಜಿ): ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2020ನೇ ಸಾಲಿನ ಕೇಂದ್ರ ನಾಗರಿಕ ಸೇವಾ ಮುಖ್ಯ ಪರೀಕ್ಷೆಯಲ್ಲಿ ತಾಲ್ಲೂಕಿನ ಜಿ.ಎಸ್.ಅರ್ಜುನ್ 452ನೇ ರ‍್ಯಾಂಕ್, ಎಂ.ವಿ.ಮಾಲಾಶ್ರೀ 504ನೇ ರ್‍ಯಾಂಕ್ ಹಾಗೂ ಬಿ.ಎನ್.ಅಭಿಷೇಕ್ 708ನೇ ರ್‍ಯಾಂಕ್ ಪಡೆದಿದ್ದಾರೆ.
ಜಿ.ಎಸ್.ಅರ್ಜುನ್ ತಾಲ್ಲೂಕಿನ ಗಡಿಗವಾರಹಳ್ಳಿಯ ಜಿ.ವಿ.ಸುಬ್ಬಾರೆಡ್ಡಿ ಮತ್ತು ಕೆ.ಪಿ.ಶಾರದಮ್ಮ ದಂಪತಿಯ ಪುತ್ರ. ಅವರು ನಗರದ ಪ್ರಗತಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ವೆಂಕಟಾದ್ರಿ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ, ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಕಳೆದ ನಾಲ್ಕು ವರ್ಷಗಳಿಂದ ಮುಂಬೈನಲ್ಲಿರುವ ನಬಾರ್ಡ್ ಸಂಸ್ಥೆಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
‘ಕೃಷಿಕ ಕುಟುಂಬದಿಂದ ಬಂದಿದ್ದೇನೆ. ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು ಎನ್ನುವುದು ನನ್ನ ಗುರಿ. ನಾಲ್ಕು ವರ್ಷಗಳ ಸತತ ಪ್ರಯತ್ನದ ಫಲವಾಗಿ 452ನೇ ರ‍್ಯಾಂಕ್ ಪಡೆದಿದ್ದೇನೆ. ಈ ಹಿಂದೆ ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದೆ‘ ಎಂದು ಅರ್ಜುನ್ ‘ಪ್ರಜಾವಾಣಿ’ಗೆ ತಿಳಿಸಿದರು.
ರೈತರ ಪುತ್ರಿಯ ಸಾಧನೆ: 504ನೇ ರ‍್ಯಾಂಕ್ ಪಡೆದಿರುವ ಎಂ.ವಿ.ಮಾಲಾಶ್ರೀ ಮಿಂಡಿಗಲ್ ಗ್ರಾಮದ ಕೃಷಿಕ ಎಂ.ವೈ.ವೆಂಕಟೇಶ್ ಮತ್ತು ರಾಮಲಕ್ಷ್ಮಮ್ಮ ದಂಪತಿ ಪುತ್ರಿ. ಮಾಲಾಶ್ರೀ ನಗರದ ಎಸ್‌ಆರ್‌ಇಟಿ ಶಾಲೆಯಲ್ಲಿ ಪ್ರೌಢಶಿಕ್ಷಣ, ಬೆಂಗಳೂರಿನ ಎಸ್‌ಜೆಪಿ ಕಾಲೇಜಿನಲ್ಲಿ ಡಿಪ್ಲೊಮ, ಪಿಇಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಯಾವುದೇ ಸಂಸ್ಥೆಗಳಿಂದ ತರಬೇತಿಯನ್ನು ಅವರು ಪಡೆದಿಲ್ಲ. ಈ ಹಿಂದೆ ಮೂರು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರು.
‘ತಂದೆ, ತಾಯಿ ಮತ್ತು ಸ್ನೇಹಿತರ ಪ್ರೋತ್ಸಾಹವೇ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಪ್ರೇರಣೆ. ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕು. ಕೃಷಿಕರ ಹಾಗೂ ಗ್ರಾಮೀಣ ಜನರ ಬದುಕನ್ನು ಉತ್ತಮ ಪಡಿಸಲು ಕೆಲಸ ಮಾಡಬೇಕು ಎನ್ನುವುದು ನನ್ನ ಮಹದಾಸೆ. ರ‍್ಯಾಂಕಿಂಗ್ ಉತ್ತಮಪಡಿಸಿಕೊಳ್ಳಲು ಈ ವರ್ಷವೂ ಪರೀಕ್ಷೆ ತೆಗೆದುಕೊಳ್ಳುವೆ’ ಎನ್ನುತ್ತಾರೆ ಮಾಲಾಶ್ರೀ.
3ನೇ ಪ್ರಯತ್ನದಲ್ಲಿ ಯಶಸ್ಸು: ಕೈವಾರ ಹೋಬಳಿಯ ಬನಹಳ್ಳಿಯ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಎಂ.ನಾರಾಯಣಸ್ವಾಮಿ ಮತ್ತು ಸುಶೀಲಮ್ಮ ದಂಪತಿ ಪುತ್ರ ಬಿ.ಎನ್.ಅಭಿಷೇಕ್ 3ನೇ ಪ್ರಯತ್ನದಲ್ಲಿ 708ನೇ ರ‍್ಯಾಂಕ್ ಗಳಿಸಿದ್ದಾರೆ. ಅಭಿಷೇಕ್ ಎಂಜಿನಿಯರ್ ಪದವಿ ಪಡೆದಿದ್ದಾರೆ.
‘ಮೊದಲ ಬಾರಿ ಪರೀಕ್ಷೆ ತೆಗೆದುಕೊಂಡಿದ್ದಾಗ ಹೆಚ್ಚಿನ ಅವಕಾಶ ಸಿಗಲಿಲ್ಲ. ಎರಡನೇ ಬಾರಿ ಉತ್ತೀರ್ಣನಾದರೂ ಕಡಿಮೆ ಅಂಕದ ಕಾರಣ ಸಂದರ್ಶನದ ಅವಕಾಶ ದೊರೆಯಲಿಲ್ಲ. 3ನೇ ಪ್ರಯತ್ನದಲ್ಲಿ ರ‍್ಯಾಂಕ್ ಪಡೆದಿದ್ದೇನೆ. ಈ ವರ್ಷವೂ ಪರೀಕ್ಷೆ ತೆಗೆದುಕೊಂಡು ರ‍್ಯಾಂಕ್ ಉತ್ತಮಪಡಿಸಿಕೊಳ್ಳುವೆ‘ ಎಂದು ಅಭಿಷೇಕ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಪ್ಪ ಪೊಲೀಸ್ ಇಲಾಖೆಯಲ್ಲಿದ್ದ ಕಾರಣ ಐಪಿಎಸ್ ಮಾಡಬೇಕು ಎಂಬ ಆಸೆ ಇತ್ತು. ವ್ಯಾಸಂಗ ಮುಂದುವರಿದಂತೆ ಜನರ ಕಷ್ಟ, ಬಡತನ ನೋಡಿ ಜನಸೇವೆಗಾಗಿ ಐಎಎಸ್ ಮಾಡಬೇಕು ಎಂದು ತೀರ್ಮಾನಿಸಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.