
ಕಡೂರು: ತಾಲ್ಲೂಕಿನಲ್ಲಿ 70,314 ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿದ್ದು, ಈ ವರ್ಷದ ಜುಲೈ ತಿಂಗಳಲ್ಲಿ ಹಣದ ಕೊರತೆಯಿಂದ 13,819 ಫಲಾನುಭವಿಗಳಿಗೆ ಹಣ ಸಂದಾಯವಾಗಿಲ್ಲ ಎಂಬ ಮಾಹಿತಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಹಿರಂಗಗೊಂಡಿತು.
ಕಡೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಟಿ.ಆಸಂದಿ ಕಲ್ಲೇಶ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಿಡಿಪಿಒ ಸಭೆಗೆ ನೀಡಿದ ಮಾಹಿತಿ ಇದಾಗಿತ್ತು.
ಕಳೆದ 21 ತಿಂಗಳಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದ್ದು, ಜುಲೈ ತಿಂಗಳಲ್ಲಿ 70,314 ಫಲಾನುಭವಿಗಳಿಗೆ ಬದಲಾಗಿ 56,495 ಫಲಾನುಭವಿಗಳಿಗೆ ಹಣ ನೀಡಲಾಗಿದೆ. ಉಳಿದವರಿಗೆ ತಾಂತ್ರಿಕ ಸಮಸ್ಯೆಯಿಂದಲ್ಲ, ಹಣದ ಕೊರತೆಯಿಂದ ಜಮೆಯಾಗಿಲ್ಲ. 308 ಜನ ಫಲಾನುಭವಿಗಳು ಐಟಿ-ಜಿಎಸ್‌ಟಿಗೆ ಒಳಪಡುವುದರಿಂದ ಅಂತಹವರ ಅರ್ಜಿಗಳನ್ನು ತಿರಸ್ಕರಿಸಿ, ಹಿಂಬರಹ ನೀಡಲಾಗಿದೆ ಎಂಬ ಮಾಹಿತಿಯನ್ನು ಸಿಡಿಪಿಓ ಶಿವಪ್ರಕಾಶ್ ಸಭೆಗೆ ಮಾಹಿತಿ ನೀಡಿದರು.
ಕಳೆದ ಸಭೆಯಲ್ಲಿಯೇ ಸೂಚಿಸಿದ್ದರೂ ನ್ಯಾಯಬೆಲೆ ಅಂಗಡಿಗಳ ಮುಂದೆ ಅನ್ನಭಾಗ್ಯ ನಾಮಫಲಕ ಅಳವಡಿಸಿಲ್ಲ, ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ಸಮಯದಲ್ಲಿ ಆಹಾರ ವಿತರಣೆಗೆ ವ್ಯವಸ್ಥೆ ಮಾಡಬೇಕು ಎಂದು ಅನುಷ್ಠಾನ ಸಮಿತಿ ಸದಸ್ಯ ಸಪ್ತಕೋಟಿ ಧನಂಜಯ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಆಹಾರ ನಿರೀಕ್ಷಕ ಎಚ್.ಶ್ರೀನಿವಾಸ, ನ್ಯಾಯಬೆಲೆ ಅಂಗಡಿ ಭೇಟಿ ಸಂದರ್ಭದಲ್ಲಿ ಅಂಗಡಿಯವರಿಗೆ ಈ ಎರಡೂ ವಿಷಯಗಳ ಬಗ್ಗೆ ನಿರ್ದೇಶನ ನೀಡಿದೆ. ಹಲವರು ಅನುಷ್ಠಾನಗೊಳಿಸಿದ್ದಾರೆ. ತಾಲ್ಲೂಕಿನಲ್ಲಿ ಸರ್ವೇ ಮೂಲಕ 3,308 ಅನರ್ಹ ಪಡಿತರ ಚೀಟಿಗಳ ಪಟ್ಟಿ ಮಾಡಿ, 1,110 ಕಾರ್ಡ್‌ಗಳನ್ನು ಎಪಿಎಲ್ ಆಗಿ ಮಾರ್ಪಡಿಸಿದೆ ಎಂದು ಮಾಹಿತಿ ನೀಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಕಲ್ಲೇಶ್, ಅಧಿಕಾರಿಗಳು ಯಾವ ಕಾರ್ಡ ಅನ್ನೂ ರದ್ದುಪಡಿಸಬಾರದು. ತಾಲ್ಲೂಕು, ಜಿಲ್ಲಾ ಸಮಿತಿ ವತಿಯಿಂದ ಆಹಾರ ಸಚಿವರ ಮನವೊಲಿಸುತ್ತೇವೆ ಎಂದಿದ್ದಕ್ಕೆ ತಬ್ಬಿಬ್ಬಾದ ಆಹಾರ ನಿರೀಕ್ಷಕ, ಅನರ್ಹ ಕಾರ್ಡ್‌ಗಳನ್ನು ಗುರುತಿಸಿ ರದ್ದುಪಡಿಸುವಂತೆ ಮುಖ್ಯಮಂತ್ರಿಯವರ ಆದೇಶವೇ ಇದೆ ಎಂದು ಉತ್ತರಿಸಿದರು.
ಗೃಹಜ್ಯೋತಿ ಯೋಜನೆಯಲ್ಲಿ ತಾಲ್ಲೂಕಿನಲ್ಲಿ 80,034 ಫಲಾನುಭವಿಗಳಿದ್ದು, ತಿಂಗಳಿಗೆ ಸುಮಾರು ₹ 2 ಕೋಟಿ ಹಣವನ್ನು ಸರ್ಕಾರವು ಭರಿಸುತ್ತಿದೆ. ಈ ಯೋಜನೆಯಲ್ಲಿ ಹೊಸ ನೋಂದಣಿಗಳು ಕೂಡ ನಡೆಯುತ್ತಿವೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು. ಮತಿಘಟ್ಟ ವ್ಯಾಪ್ತಿಯ ಹಳ್ಳಿಗಳಲ್ಲಿ ಅನಧಿಕೃತ ಲೈನ್‌ಗಳನ್ನು ಎಳೆದು ಸಂಪರ್ಕ ಪಡೆದಿರುವ ಮಾಹಿತಿ ಇದೆ. ಅಧಿಕಾರಿಗಳು ಏನು ಮಾಡುತ್ತಿರುವಿರಿ ಎಂದು ಸದಸ್ಯ ಮಧು ಸಿಂಗಟಗೆರೆ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು, ಐಪಿ ಸೆಟ್‌ಗಳು ಅನಧಿಕೃತ ಸಂಪರ್ಕ ಪಡೆದಿರುವುದನ್ನು ಅನಿವಾರ್ಯ ಸಂದರ್ಭದಲ್ಲಿ ಸಹಿಸಿಕೊಳ್ಳಬೇಕಾದ ಸ್ಥಿತಿ ಇದೆ. ನಾವು ಸಂಪರ್ಕ ಕಡಿತಗೊಳಿಸಲು ಹೋದಾಗ ರೈತರು ತಮ್ಮ ಅಸಹಾಯಕ ಸ್ಥಿತಿ ಹೇಳಿಕೊಳ್ಳುತ್ತಾರೆ. ಇದು ಬಗೆಹರಿಸಲಾಗದ ಸಮಸ್ಯೆಯಾಗಿದೆ ಎಂದು ಉತ್ತರಿಸಿದರು.
ಬಿಳುವಾಲ ಮತ್ತು ನಾಗಗೊಂಡನಹಳ್ಳಿ ವಲಯದಲ್ಲಿ ಅನಿಯಮಿತ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ. ಅಧಿಕಾರಿಗಳು ಮಾಹಿತಿ ನೀಡುವುದಿಲ್ಲ, ಕರೆ ಸ್ವೀಕರಿಸುವುದಿಲ್ಲ. ಜಾತ್ರೆ ರಥೋತ್ಸವ ಇರುವ ಬಗ್ಗೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸಿ ವಿದ್ಯುತ್ ನಿಲುಗಡೆ ಮಾಡದಂತೆ ಕೋರಿದರೂ ಸಹಕರಿಸುವುದಿಲ್ಲ ಎಂದು ಸದಸ್ಯರು ಆರೋಪಿಸಿದರು.
ಶಕ್ತಿ ಯೋಜನೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಕಡೂರು ಡಿಪೊ ವ್ಯಾಪ್ತಿಯಲ್ಲಿ 7 ಲಕ್ಷಕ್ಕೂ ಹೆಚ್ಚು ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದು, ಸುಮಾರು ₹3 ಕೋಟಿ ಆದಾಯ ಬಂದಿದೆ. ಈವರೆಗೆ ಡಿಪೊ ₹ 68 ಕೋಟಿ ಆದಾಯ ಗಳಿಸಿದೆ ಎಂದು ಅಧಿಕಾರಿ ರಾಮಚಂದ್ರ ನಾಯಕ ಮಾಹಿತಿ ನೀಡಿದರು.
ಯುವನಿಧಿ ಯೋಜನೆಯಲ್ಲಿ 1,187 ಯುವಜನರು ನೋಂದಾಯಿಸಿಕೊಂಡಿದ್ದು, ಈವರೆಗೆ ₹2.53 ಕೋಟಿ ವಿತರಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಉತ್ತರಿಸಿದರು. ಕಾಲೇಜು, ತಾಂತ್ರಿಕ ಶಿಕ್ಷಣ ಕೇಂದ್ರಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಈ ವಿಷಯವಾಗಿ ಹೆಚ್ಚು ಪ್ರಚಾರ ಮಾಡಬೇಕಾದ ಅಗತ್ಯವಿದೆ ಎಂದು ಸದಸ್ಯರು ತಿಳಿಸಿದರು.
ಸಭೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಸಿ.ಆರ್, ಅನುಷ್ಠಾನ ಸಮಿತಿಯ ಮಚ್ಚೇರಿ ಚಂದ್ರಪ್ಪ, ಸುಜಾತಾ, ಮೂರ್ತಿ, ಮನು, ಸೋಮೇಶ್, ಗಿರೀಶ್ ನಾಯ್ಕ, ಪುಷ್ಪಾ, ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.