
ಹಿರಿಯೂರು: ಬಾಬಾ ಸಾಹೇಬ್ ಅಂಬೇಡ್ಕರ್ ಆಶಯದಂತೆ ಈ ನೆಲ ಸಮಾನತೆಯ ನಾಡಾಗಬೇಕು ಎಂದು ಸಂಸ್ಕೃತಿ ಚಿಂತಕ ವಡ್ಡಗೆರೆ ನಾಗರಾಜಯ್ಯ ಅಭಿಪ್ರಾಯಪಟ್ಟರು.
ನಗರದ ಹುಳಿಯಾರು ರಸ್ತೆಯಲ್ಲಿರುವ ಸಾಯಿ ಅನ್ನಪೂರ್ಣೇಶ್ವರಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಬಹುಜನ ಪರಿವರ್ತನಾ ವೇದಿಕೆಯ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಬಿ. ಸಿದ್ದಪ್ಪ ಅವರ ಅನುಭವ ಕಥನ ‘ಮೇಟಿ ಕೂರಿಗೆ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಯಾವುದೇ ಆತ್ಮಕಥೆ ಕೇವಲ ಬರೆದವರ ಜೀವನ ಚರಿತ್ರೆಯಾಗಿರದೆ ಅದು ಅವರ ಪ್ರತಿನಿಧಿಸುವ ಸಮಾಜದ ಜೀವನ ಕಥನವೂ ಆಗಿದ್ದಲ್ಲಿ ಹೆಚ್ಚು ಮಹತ್ವ ಪಡೆಯುತ್ತದೆ ಎಂದು ತಿಳಿಸಿದರು.
‘ಮೇಟಿ ಕೂರಿಗೆ ಕೃತಿಯಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿನ ಶೋಷಣೆ, ಹಿಂಸೆ, ಅಸ್ಪೃಷ್ಯತೆ, ಜಾತಿ ತಾರತಮ್ಯ, ಮೂಢನಂಬಿಕೆ ಕಂದಾಚಾರಗಳನ್ನು ಸಿದ್ದಪ್ಪ ಪರಿಚಯಿಸಿದ್ದಾರೆ. ದಲಿತ ಮತ್ತು ಬಂಡಾಯ ಸಾಹಿತ್ಯಗಳ ಪ್ರವೇಶದ ನಂತರ ತಳ ಸಮುದಾಯದವರಿಗೆ ಮುಖ್ಯವಾಹಿನಿಯ ಆದ್ಯತೆ ಸಿಕ್ಕಿದೆ. ದಲಿತತ್ವವು ವಿಶಾಲ ಚಿಂತನೆಯಾಗಿದ್ದು, ಇದು ಸಹೋದರತೆಯ ಜೊತೆಗೆ ಸಾಮಾಜಿಕ ನ್ಯಾಯದ ಸಂಕೇತವಾಗಿದೆ ಎಂದು ವಿಶ್ಲೇಷಿಸಿದರು.
ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಜಿ ಶರಣಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಪ್ರಾಂಶುಪಾಲ ಎಚ್. ಟಿ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಸದಸ್ಯೆ ಕೆ.ಜೆ. ಜಯಲಕ್ಷ್ಮಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಚಮನ್ ಷರೀಫ್ ಮಾತನಾಡಿದರು.
ಲೇಖಕ ಬಿ. ಸಿದ್ದಪ್ಪ, ನಿವೃತ್ತ ಡಿಡಿಪಿಐ ಎಂ. ಮಲ್ಲಣ್ಣ, ಪತ್ರಕರ್ತ ಟಿ.ಎನ್. ಷಣ್ಮುಖ, ನಿವೃತ್ತ ಪ್ರಾಂಶುಪಾಲ ಎಂ.ಜಿ. ರಂಗಸ್ವಾಮಿ, ರೈತ ಮುಖಂಡ ಕೆ.ಸಿ. ಹೊರಕೇರಪ್ಪ, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ. ರಂಗಸ್ವಾಮಿ ಸಕ್ಕರ, ಕವಿ ಶಿವಶಂಕರ್ ಸೀಗೆಹಟ್ಟಿ, ನಗರಸಭೆ ಮಾಜಿ ಸದಸ್ಯ ಎಂ.ಡಿ. ಸಣ್ಣಪ್ಪ, ದಲಿತ ಪರ ಸಂಘಟನೆಯ ಕೆ. ಪಿ. ಶ್ರೀನಿವಾಸ್, ಕೆ. ರಾಮಚಂದ್ರಪ್ಪ, ವಕೀಲ ಟಿ. ದ್ರುವಕುಮಾರ್, ಕೆ. ಆರ್. ರಘುನಾಥ್, ಜೆ.ಟಿ. ಪುಟ್ಟಮ್ಮ, ಡಿ.ಎಚ್. ಹಾಲಪ್ಪ, ಅಶ್ವಿನಿ, ಎಸ್. ಲಿಂಗರಾಜು, ಮಂಗಳಮ್ಮ, ಗುರುಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.