ADVERTISEMENT

ಮೊಳಕಾಲ್ಮುರು ಕ್ಷೇತ್ರ ಸ್ಥಿತಿ–ಗತಿ| ಇನ್ನೂ ಖಚಿತವಾಗಿಲ್ಲ ಶ್ರೀರಾಮುಲು ಸ್ಪರ್ಧೆ

ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಟಿಕೆಟ್‌ಗೆ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದಂಡು

ಜಿ.ಬಿ.ನಾಗರಾಜ್
Published 14 ಜನವರಿ 2023, 5:55 IST
Last Updated 14 ಜನವರಿ 2023, 5:55 IST
ಸಚಿವ ಬಿ. ಶ್ರೀರಾಮುಲು
ಸಚಿವ ಬಿ. ಶ್ರೀರಾಮುಲು   

ಚಿತ್ರದುರ್ಗ: ಮೊಳಕಾಲ್ಮುರು ಕ್ಷೇತ್ರದಿಂದ 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಮೊದಲ ಬಾರಿಗೆ ಕಮಲ ಅರಳುವಂತೆ ಮಾಡಿದ್ದ ಬಿ.ಶ್ರೀರಾಮುಲು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಹಾಗೂ ಮರಳಿ ಹಿಡಿತ ಸಾಧಿಸಲು ಕಾಂಗ್ರೆಸ್‌ ರಾಜಕೀಯ ತಂತ್ರಗಾರಿಕೆಯಲ್ಲಿ ಮುಳುಗಿವೆ.

ಮೂಲತಃ ಬಳ್ಳಾರಿ ಜಿಲ್ಲೆ ಜೋಳದರಾಶಿಯ ಬಿ.ಶ್ರೀರಾಮುಲು ಮೊಳಕಾಲ್ಮುರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸಿ ವಿಜೇತರಾಗಿರುವ ಅವರು, ಮತ್ತೆ ಇದೇ ಕ್ಷೇತ್ರದಿಂದ ಕಣಕ್ಕೆ ಇಳಿಯುವುದಾಗಿ ಹೇಳಿಕೆ ನೀಡಿದ್ದಾರಾದರೂ, ಈ ಕುರಿತು ಬಿಜೆಪಿ ವಲಯದಿಂದ ಸ್ಪಷ್ಟತೆ ಕಂಡುಬರುತ್ತಿಲ್ಲ. ಒಂದೊಮ್ಮೆ ಶ್ರೀರಾಮುಲು ಕ್ಷೇತ್ರ ತೊರೆದರೆ ಪಕ್ಷದ ಟಿಕೆಟ್‌ಗೆ ಹಲವರು ಮುಗಿಬೀಳುವ ಸಾಧ್ಯತೆ ಇದೆ.

ಶ್ರೀರಾಮುಲು ಸ್ಥಾಪಿಸಿದ್ದ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ 2013ರಲ್ಲಿ ಸ್ಪರ್ಧಿಸಿ ಜಯಿಸಿದ್ದ ಮಾಜಿ ಶಾಸಕ ಎಸ್‌.ತಿಪ್ಪೇಸ್ವಾಮಿ, ಕಳೆದ ಚುನಾವಣೆಯಲ್ಲಿ ಅವರ ವಿರುದ್ಧವೇ ಬಂಡಾಯ ಸಾರಿದ್ದರು. ಸ್ಪತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಪರಾಭವಗೊಂಡಿದ್ದರು. 2019ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಸೇರಿರುವ ಇವರು ‘ಕೈ’ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಬಿ.ಯೋಗೇಶ್‌ ಬಾಬು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬಳ್ಳಾರಿಯ ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಇದೇ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಕೇಳಿರುವುದು ಕುತೂಹಲ ಕೆರಳಿಸಿದೆ.

ADVERTISEMENT

ಮೂರು ಕ್ಷೇತ್ರಗಳಲ್ಲಿ ಸಂಚಾರ: ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕ್ಷೇತ್ರ ಆಂಧ್ರಪ್ರದೇಶ, ಬಳ್ಳಾರಿಯ ಗಡಿಗೆ ಹೊಂದಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ತೀರಾ ಹಿಂದುಳಿದ ಪ್ರದೇಶವಾಗಿರುವ ಈ ಕ್ಷೇತ್ರ ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಹರಡಿಕೊಂಡಿದೆ. ಪ್ರಭಾವಿ ನಾಯಕರಾಗಿರುವ ಬಿ.ಶ್ರೀರಾಮುಲು ಮುಂಬರುವ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಯೇ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಬಳ್ಳಾರಿ, ಸಂಡೂರು ಹಾಗೂ ಮೊಳಕಾಲ್ಮುರು ಕ್ಷೇತ್ರಗಳಲ್ಲಿ ಒಂದನ್ನು ಅವರು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಒಂದು ವೇಳೆ ಶ್ರೀರಾಮುಲು ಕ್ಷೇತ್ರ ತೊರೆದರೆ ಬಿಜೆಪಿಯಲ್ಲಿ ಹಲವರು ಟಿಕೆಟ್‌ಗೆ ಕಾಯುತ್ತಿದ್ದಾರೆ. ಚಿತ್ರನಟ ಶಶಿಕುಮಾರ್‌ ಕೂಡ ಒಮ್ಮೆ ಕ್ಷೇತ್ರ ದರ್ಶನ ಮಾಡಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಓಬಳೇಶ್‌, ಜಿ.ಪಿ. ಜಯಪಾಲಯ್ಯ, ಪ್ರಕಾಶ್‌ ಮ್ಯಾಸನಾಯಕ ಸೇರಿ ಅನೇಕರು ಆಕಾಂಕ್ಷಿಗಳಾಗಿ ಗುರುತಿಸಿಕೊಂಡಿದ್ದಾರೆ. ಜೆಡಿಎಸ್‌ ಹಾಗೂ ಇತರ ಪಕ್ಷಗಳ ಪ್ರಭಾವ ಈ ಕ್ಷೇತ್ರದಲ್ಲಿ ಕಡಿಮೆ. ಮಾಜಿ ಸಂಸದ ಎನ್‌.ವೈ. ಹನುಮಂತಪ್ಪ ಅವರ ಪುತ್ರ ಸುಜಯ್‌ ಚುನಾವಣೆಗೆ ಸ್ಪರ್ಧಿಸುವ ಮಾತು ಎಲ್ಲೆಡೆ ಕೇಳಿಬರುತ್ತಿದೆ.

ಕ್ಷೇತ್ರದಲ್ಲಿ ನೆಲೆಸಲಿಲ್ಲವೆಂಬ ಅಸಮಾಧಾನ: ಶ್ರೀರಾಮುಲು ಅವರು ಐದು ವರ್ಷಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ ಬಿಜೆಪಿಗೆ ಬಲತುಂಬಿದೆ. ಮೊಳಕಾಲ್ಮುರು ಕ್ಷೇತ್ರದ ರಸ್ತೆಗಳು ಅಭಿವೃದ್ಧಿ ಕಂಡಿವೆ. ಮೊಳಕಾಲ್ಮುರಿಗೆ ಬಸ್‌ ಡಿಪೊ, ಬಸ್‌ ನಿಲ್ದಾಣ ಮಂಜೂರಾಗಿದೆ. ಕ್ಷೇತ್ರಕ್ಕೆ ತಂದಿರುವ ಅನುದಾನ, ಶಾಸಕರ ನಿಧಿಯ ಬಳಕೆ ಹೀಗೆ ಹಲವು ವಿಚಾರ ಆಧರಿಸಿ ಚುನಾವಣೆ ನಡೆಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.

ಬಿ.ಶ್ರೀರಾಮುಲು ಕ್ಷೇತ್ರಕ್ಕೆ ಕಾಲಿಟ್ಟ ಅತ್ಯಂತ ಕಡಿಮೆ ಅವಧಿಯಲ್ಲಿ ವ್ಯಾಪಕ ಜನಬೆಂಬಲ ಪಡೆದು ಆಯ್ಕೆಯಾಗಿದ್ದರು. ಆದರೆ, ಇತ್ತೀಚೆಗೆ ಅವರು ಕ್ಷೇತ್ರದ ಜನರ ಕೈಗೆ ಲಭ್ಯವಾಗುತ್ತಿಲ್ಲ ಎಂಬ ಅಪವಾದ ಬಲವಾಗಿದೆ. ಕ್ಷೇತ್ರದಲ್ಲಿಯೇ ನೆಲೆಸುವುದಾಗಿ ಚುನಾವಣೆ ಸಂದರ್ಭ ಆಶ್ವಾಸನೆ ನೀಡಿದ್ದ ಅವರು ಶಾಸಕರ ಕಚೇರಿಗೆ ಭೇಟಿ ನೀಡಿದ್ದೂ ಅಪರೂಪ.

ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಚುನಾವಣೆ ಎದುರಿಸಲು ಸಜ್ಜಾಗಿದೆ. ಶ್ರೀರಾಮುಲು ಜನರ ಕೈಗೆ ಸಿಗಲಿಲ್ಲ ಹಾಗೂ ಹೊರಗಿನವರು ಎಂಬ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ. ಆರೋಗ್ಯ ಸಚಿವರಾಗಿದ್ದರೂ ಮೊಳಕಾಲ್ಮುರು ತಾಲ್ಲೂಕಿನ ವೈದ್ಯಕೀಯ ಸೌಲಭ್ಯ ಸುಧಾರಿಸಿಲ್ಲವೆಂಬ ದೂರು ಕೇಳಿಬಂದಿದೆ. ಸಾರಿಗೆ ಸಚಿವರಾದರೂ ಕ್ಷೇತ್ರದಲ್ಲಿ ಬಸ್‌ ಕಾಣದ ಗ್ರಾಮಗಳು ಸಾಕಷ್ಟು ಇವೆ ಎಂಬ ಕೊರಗು ಮತದಾರರಲ್ಲಿದೆ.

***

ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಟಿಕೆಟ್ ಭರವಸೆ ನೀಡಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಾಗಿದೆ. ಟಿಕೆಟ್ ಸಿಗುವ ಸಂಪೂರ್ಣ ವಿಶ್ವಾಸವಿದೆ. 2013-18ರವರೆಗೆ ಮಾಡಿದ ಅಭಿವೃದ್ಧಿ ಕಾರ್ಯ ಕೈಹಿಡಿಯುವ ವಿಶ್ವಾಸವಿದೆ.

ಎಸ್.ತಿಪ್ಪೇಸ್ವಾಮಿ, ಮಾಜಿ ಶಾಸಕ

***

ಬೂತ್ ಮಟ್ಟದಲ್ಲಿ ಬಿಜೆಪಿ ಇನ್ನಷ್ಟು ಸಬಲವಾಗಿದೆ. ಕ್ಷೇತ್ರದಲ್ಲಿ ಕಾರ್ಯಕರ್ತರ ಪಡೆ ಹೆಚ್ಚಾಗಿದೆ. ಬಿಜೆಪಿಗೆ ಪೂರಕ ವಾತಾವರಣ ಇದೆ. ಯಾರೇ ಸ್ಪರ್ಧಿಸಿದರೂ ಬಿಜೆಪಿ ಕ್ಷೇತ್ರ ಉಳಿಸಿಕೊಳ್ಳಲಿದೆ.

ಮಂಜುನಾಥ್‌, ಬಿಜೆಪಿ ಮಂಡಲ ಅಧ್ಯಕ್ಷ, ಮೊಳಕಾಲ್ಮುರು

***

ವಿದ್ಯಾರ್ಥಿ ದಿಸೆಯಿಂದಲೂ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ. ಕಳೆದ ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದೇನೆ. ಕ್ಷೇತ್ರದಲ್ಲಿ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಟಿಕೆಟ್‌ ಸಿಗುವ ವಿಶ್ವಾಸವಿದೆ.

ಬಿ.ಯೋಗೇಶ್‌ಬಾಬು, ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.