ಡಿ.ಕೆ. ಶಿವಕುಮಾರ್
– ಫೇಸ್‌ಬುಕ್ ಚಿತ್ರ
ಮಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಹೂಡಿಕೆದಾರರು, ಡೆವೆಲಪರ್ ಗಳು ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಸರ್ಕಾರ ಪ್ರತ್ಯೇಕ ನೀತಿಯನ್ನು ರೂಪಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, 'ಕೇರಳ, ಗೋವಾದ ರೀತಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವಲ್ಲಿ ನಮ್ಮ ರಾಜ್ಯ ಹಿಂದೆ ಉಳಿದಿದೆ. ಮಂಗಳೂರಿನ ಜನ ಸೌದಿ, ದುಬೈ, ಯುಎಇ, ಬೆಂಗಳೂರು ಕಡೆಗೆ ವಲಸೆ ಹೋಗುತ್ತಿದ್ದಾರೆ. ಇಲ್ಲಿ ಒಂದು ಪಂಚತಾರ ಹೋಟೆಲ್ ಇಲ್ಲ, ಅಭಿವೃದ್ಧಿಯಾದ ಪ್ರವಾಸಿ ತಾಣವೂ ಇಲ್ಲ. ನಮ್ಮ ರಾಜ್ಯದಲ್ಲಿ 300 ಕಿ.ಮೀ ಕರಾವಳಿ ತೀರದಲ್ಲಿ ಪ್ರಕೃತಿ ಸಂಪತ್ತು ಇದ್ದರೂ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ. ಇದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ ಸರ್ಕಾರಗಳೆರಡರ ವೈಫಲ್ಯವೂ ಇದೆ' ಎಂದರು.
'ಕೇರಳ ಹಾಗೂ ಗೋವಾದಲ್ಲಿ ಪ್ರವಾಸೋದ್ಯಮ ಹೇಗೆ ಅಭಿವೃದ್ಧಿ ಆಯಿತು ಎಂಬುದನ್ನು ನೋಡಿಕೊಂಡು, ನಮ್ಮಲ್ಲಿನ ಸಂಪತ್ತು ಮತ್ತು ಯುವಜನರ ಕ್ರಿಯಾಶೀಲತೆ ಬಳಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕಾಗಿದೆ. ನಮ್ಮ ಸ್ವಂತ ಜನ ಬೆಳೆಯಲಿ ಎಂಬುದು ನಮ್ಮ ಆಸೆ' ಎಂದರು.
'ಈ ಬಗ್ಗೆ ನಾನು ಈ ಭಾಗದ ಎಲ್ಲ ಶಾಸಕರ ಜೊತೆ ಮಾತನಾಡಿದ್ದೇನೆ. ಅವರೂ ಈ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಸಚಿವ ಸಂಪುಟ ಸಭೆಯ ಮುಂದೆ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ನೀತಿ ಈಚೆಗೆ ಚರ್ಚೆಗೆ ಬಂದಿತ್ತು. ಈ ರೀತಿಯ ನೀತಿ ಕರಾವಳಿ ಅಭಿವೃದ್ಧಿಗೆ ಸೂಕ್ತವಲ್ಲ ಎಂದು ಮುಖ್ಯ ಕಾರ್ಯದರ್ಶಿಯವರಿಗೆ ತಿಳಿಸಿದ್ದೆ. ಈ ಬಗ್ಗೆ ವಿಧಾನ ಸಭೆಯಲ್ಲೂ ಚರ್ಚೆ ಮಾಡಿದ್ದೇವೆ. ಕರಾವಳಿ ಭಾಗದ ಆಭಿವೃದ್ದಿ ಗೆ ವಿಶೇಷ ಆಸಕ್ತಿ ವಹಿಸುವ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೇವೆ' ಎಂದರು.
'ವಿದೇಶಗಳಲ್ಲಿ, ಕೊಲ್ಲಿ ರಾಷ್ಡ್ರಗಳಲ್ಲಿ ಮುಂಬೈ ಮತ್ತು ಬೆಂಗಳೂರಿನಲ್ಲಿರುವ ಈ ಭಾಗದ ಬಹಳಷ್ಟು ಉದ್ಯಮಿಗಳು, 'ಸರ್ಕಾರ ಸಹಕಾರಕೊಟ್ಟರೆ ನಾವು ಹೂಡಿಕೆಗೆ ಸಿದ್ಧ' ಎಂದು ಹೇಳಿದ್ದಾರೆ. ಇಲ್ಲಿರುವ ಯುವಜನರೂ ಉತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೊರದೇಶಗಳಿಗೂ ಹೋಗಿ ಸಾಧನೆ ಮಾಡಿದ್ದಾರೆ. ಅವರೆಲ್ಲ ಜನ್ಮಕೊಟ್ಟ ಭೂಮಿಯ, ತಮ್ಮ ಊರಿನ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದಾರೆ. ನಮ್ಮೂರಲ್ಲೇ ಹೆಜ್ಜೆ ಗುರುತು ಮೂಡಿಸುವ ಆಸೆಯನ್ನು ಹೊಂದಿದ್ದಾರೆ' ಎಂದರು.
'ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲು ಮುಂದಾಗಿದ್ದೇವೆ. ಇದನ್ನು ನಾಲ್ಕೈದು ಮಂದಿ ಅಧಿಕಾರಿಗಳು ಮಾತ್ರ ಸೇರಿ ರೂಪಿಸಿದರೆ ಸರಿಯಾಗದು. ಅದಕ್ಕಾಗಿ ಇಂದು ಈ ಭಾಗದವರ ಸಭೆಯನ್ನು ಇಂದು ಕರೆದಿದ್ದೇವೆ. ಇದಕ್ಕೆ ತೊಡಕುಗಳು ಏನಿವೆ. ಸರ್ಕಾರ ಏನು ಸಹಾಯ ಮಾಡಬಹುದು ಎಂದು ಚರ್ಚೆ ಮಾಡಲಿದ್ದೇವೆ. ಸರ್ಕಾರ ಕೆಲ ಮೂಲಸೌಕರ್ಯಗಳನ್ನು ಒದಗಿಸಲಿದೆ. ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಖಾಸಗಿ ಉದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ' ಎಂದರು.
'ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡು ಭಾಗದ ಜನಪ್ರತಿನಿಧಿಗಳು, ಉದ್ಯಮಿಗಳು, ಡೆವೆಲಪರ್ ಗಳು, ಹೂಡಿಕೆದಾರರು ಎನು ಆಲೋಚನೆ ಹೊಂದಿದ್ದಾರೆ ಎಂದು ತಿಳಿಯಬೇಕಿದೆ. ಕಾನೂನಿನಲ್ಲಿ ಏನೇನು ಅವಕಾಶಗಳಿವೆ ಎಂದೂ ಚರ್ಚಿಸಬೇಕಿದೆ. ಅದಕ್ಕಾಗಿ ಕರಾವಳಿ ರಕ್ಷಣಾ ವಲಯ ಪ್ರಾಧಿಕಾರ, ರಕ್ಷಾಣಾ ಇಲಾಖೆ ಹಾಗೂ ಕರಾವಳಿಯ ಇತರ ಅಧಿಕಾರಿಗಳನ್ನು ಸಭೆಗೆ ಕರೆದಿದ್ದೇನೆ. ನೀತಿ ನಿಯಮಗಳಲ್ಲಿ ಏನೆಲ್ಲ ಮಾರ್ಪಾಡು ಮಾಡಬಹುದು, ಅವರೆಲ್ಲ ಏನೇನು ಸಲಹೆ ನೀಡುತ್ತಾರೆ ಎಂಬುದನ್ನು ಸಾರ್ವಜನಿಕರ ಮುಂದೆ ಇಡುತ್ತೇವೆ. ಬಳಿಕ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಿದ್ದೇವೆ' ಎಂದರು.
ಪರಿಶಿಷ್ಟ ಜಾತಿಯವರ ಒಳ ಮೀಸಲಾತಿ ಮಸೂದೆ, ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಮಸೂದೆ, ದ್ವೇಷ ಭಾಷಣ ತಡೆ ಮಸೂದೆಗಳಿಗೆ ಇನ್ನೂ ರಾಜ್ಯಪಾಲರ ಅಂಗೀಕಾರ ಸಿಗದ ಕುರಿತ ಪ್ರಶ್ನೆಗೆ, ' ಈ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ಮುಂದಿನ ಕ್ರಮವಹಿಸುತ್ತೇವೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.