ಶಕ್ತಿನಗರದ ಸಾನಿಧ್ಯ ವಸತಿಯುತ ಶಾಲೆಯ ವಿಶೇಷ ಮಕ್ಕಳು ಹಣ್ಣು ತರಕಾರಿಯಿಂದ ರಚಿಸಿದ ಗಣೇಶ
ಮಂಗಳೂರು: ದಟ್ಟ ಮೋಡ ಕವಿದ ವಾತಾವರಣ, ಆಗಾಗ ಸುರಿಯುವ ರಭಸದ ಮಳೆಯ ನಡುವೆ ಗಣೇಶ ಚತುರ್ಥಿಯ ಸಂಭ್ರಮ ಕಳೆಗಟ್ಟಿದೆ.
ನಗರದ ನೆಹರೂ ಮೈದಾನ, ಬಂಟ್ಸ್ ಹಾಸ್ಟೆಲ್, ಸಂಘ ನಿಕೇತನ, ಕರಂಗಲ್ಪಾಡಿಯ ಹಾಪ್ ಕಾಮ್ಸ್ ಮಳಿಗೆ, ಪಾಂಡೇಶ್ವರದ ಪೊಲೀಸ್ ಲೇನ್, ಬಿಜೈ ರಸ್ತೆಯ ಚಾಲೆಂಜರ್ಸ್ ಫ್ರೆಂಡ್ಸ್ ಸರ್ಕಲ್ ಮೊದಲಾದ ಕಡೆಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಗಣೇಶ ಚತುರ್ಥಿಯೊಂದಿಗೆ ತೆನೆ ಹಬ್ಬದ ಸಂಭ್ರಮ ಮೇಳೈಸಿದೆ.
ಈ ಋತುವಿನ ಭತ್ತದ ತೆನೆ ತಂದು, ಹೊಸ ಅಕ್ಕಿ ಊಟ ಮಾಡುವ ಹಬ್ಬವನ್ನು ಹೆಚ್ಚಿನವರು ಗಣೇಶ ಚತುರ್ಥಿ ದಿನ ಆಚರಿಸುತ್ತಾರೆ. ನಗರದ ಬಂಟ್ಸ್ ಹಾಸ್ಟೆಲ್ ನಲ್ಲಿ ನಡೆದ ತೆನೆ ವಿತರಣೆಯಲ್ಲಿ ಸಹಸ್ರಾರು ಜನ ತೆನೆ ಪಡೆದರು.
ಶಕ್ತಿನಗರದ ಸಾನ್ನಿಧ್ಯ ವಸತಿಯು ವಿಶೇಷ ಶಾಲೆಯ ಮಕ್ಕಳು, ಕರಕುಶಲಗಾರರೊಂದಿಗೆ ಸೇರಿ ತರಕಾರಿ,ಹಣ್ಣಿನಿಂದ ಗಣೇಶನನ್ನು ರಚಿಸಿ, ಪೂಜಿಸಿದರು.
ಗಣೇಶೋತ್ಸವ ಧಾರ್ಮಿಕ ಸಭೆಗಳಿಗೆ ಮಾತ್ರ ಸೀಮಿತವಾಗದಿರಲಿ: ಚೌಟ
ಮಂಗಳೂರು: ಗಣೇಶ ಚತುರ್ಥಿಗೆ ಐತಿಹಾಸಿಕ ಹಿನ್ನೆಲೆ ಇದೆ. ಪರಕೀಯರನ್ನು ದೂರ ಮಾಡಿದ ಶಕ್ತಿ ಗಣೇಶನಿಗೆ ಇದೆ. ಹೀಗಾಗಿ ಗಣೇಶೋತ್ಸವ ಸಮಾರಂಭದಲ್ಲಿ ಶಿಸ್ತು, ಶ್ರದ್ದೆ ಮುಖ್ಯ. ಗಣೇಶೋತ್ಸವ ಧಾರ್ಮಿಕ ಸಭೆ ಸಮಾರಂಭಗಳಿಗೆ ಸೀಮಿತವಾಗದಿರಲಿ. ಗಣೇಶೋತ್ಸವ ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ನಗರವನ್ನು ಸ್ವಚ್ಛ ಸುಂದರವನ್ನಾಗಿಸಲು ಪಣ ತೊಡೋಣ. ನಮಗೆ ಪರಿಸರ ಕಾಳಜಿಯೂ ಬೇಕು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.
ಬಂಟ್ಸ್ ಹಾಸ್ಟೆಲ್ ನ ಓಂಕಾರ ನಗರದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ, ಸಿದ್ದಿವಿನಾಯಕ ಪ್ರತಿಷ್ಠಾನದ ಸಾರ್ವಜನಿಕ ಗಣೇಶೋತ್ಸವ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಮಾನಾಥ ಶೆಟ್ಟಿ ಮತ್ತು ಕ್ಷಮಾ ರಮಾನಾಥ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಮಹಾಬಲ ರೈ ಮತ್ತು ಮಲ್ಲಿಕಾ ಎಂ ರೈ ತೆನೆ ವಿತರಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೊಡಿಯಾಲ್ ಗುತ್ತು ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ಬಂಟರ ಸಂಘದ ತಾಲ್ಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಬಂಟ್ವಾಳ ತಾಲ್ಲೂಕು ಬಂಟರ ಸಂಘದ ಸಂಚಾಲಕ ಎ ರಾಮಣ್ಣ ರೈ, ಬಜಪೆ ಬಂಟರ ಸಂಘದ ಅಧ್ಯಕ್ಷ ಬಾಬು ಶೆಟ್ಟಿ, ಜಪ್ಪಿನಮೊಗರು ಬಂಟರ ಸಂಘದ ಅಧ್ಯಕ್ಷ ಜೆ ಸತ್ಯಪ್ರಸಾದ್ ಶೆಟ್ಟಿ, ಕುಳವಾರು-ಕೆಲೆಂಜಾರು ಬಂಟರ ಸಂಘದ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕಾಪು ಶ್ರೀ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಅಜಿತ್ ಕುಮಾರ್ ಮಾಲಾಡಿ ಸ್ವಾಗತಿಸಿದರು. ಸಂಚಾಲಕ ಅಶ್ವತ್ಥಾಮ ಹೆಗ್ಡೆ ಅಲ್ತಾರು ವಂದಿಸಿದರು. ಭಾಗ್ಯರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.