
ಇರಾನ್
(ಎಕ್ಸ್ ಚಿತ್ರ)
ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳ ಸಾವಿರಾರು ಮಂದಿ ಉದ್ಯೋಗದ ಸಲುವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ದಾಳಿಯಿಂದಾಗಿ ಉಂಟಾದ ಉದ್ವಿಗ್ನ ಸ್ಥಿತಿಯಿಂದ ಕಳವಳಗೊಂಡಿದ್ದಾರೆ. ಅಲ್ಲಿನ ಪರಿಸ್ಥಿತಿ ಕುರಿತು ಕೆಲವರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.
‘ನಾವಿರುವ ಪ್ರದೇಶದಿಂದ ಸುಮಾರು 35 ಕಿ.ಮೀ ದೂರದ ಉದೇದ್‌ನಲ್ಲಿ ಅಮೆರಿಕದ ಸೇನಾ ನೆಲೆ ಇದೆ. ಅದನ್ನು ಗುರಿಯಾಗಿಸಿ ಹೆಚ್ಚು ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳು ನಡೆದಿವೆ. ಆ ಸೇನಾ ನೆಲೆಯಲ್ಲಿ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಇದೆ. ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ಹೊಡೆದುರುಳಿಸುವ ದೃಶ್ಯಗಳನ್ನು ಎರಡು ದಿನಗಳಿಂದ ನೋಡುತ್ತಿದ್ದೇವೆ. ಅಲ್ಲಲ್ಲಿ ಹೊಗೆಯಾವರಿಸಿದ ದೃಶ್ಯಗಳು ಕಿಟಕಿ ಮೂಲಕ ಕಾಣಿಸುತ್ತಿವೆ. ಅರ್ಜೆಂಟೀನಾದವರ ಶಿಬಿರವೊಂದರ ಬಳಿ ಕ್ಷಿಪಣಿಯ ಅವಶೇಷ ಬಿದ್ದು 16 ಮಂದಿ ಗಾಯಗೊಂಡಿದ್ದಾರೆ. ನಾವಿರುವ ಪ್ರದೇಶದಲ್ಲಿ ಯಾವುದೇ ಸಾವು ನೋವಾಗಿಲ್ಲ’ ಎಂದು ಕತಾರ್‌ನ ದೋಹಾ ಸಮೀಪದ ವುಕೈರ್ ಎಝ್ದಾನ್‌ನಲ್ಲಿ ನೆಲೆಸಿರುವ ಉಜಿರೆಯ ಯಾಹ್ಯಾ ಅಬ್ಬಾಸ್ ತಿಳಿಸಿದರು.
‘ಸಾಧ್ಯವಾದಷ್ಟು ಮನೆಯ ಒಳಗಡೆಯೇ ಇರಬೇಕು. ಹೊರಗಡೆ ಸುಖಾಸುಮ್ಮನೆ ಅಡ್ಡಾಡಬಾರದು. ಕಿಟಕಿ, ಬಾಗಿಲುಗಳಿಂದ ದೂರವೇ ಇರಿ ಎಂದು ಇಲ್ಲಿನ ಸರ್ಕಾರ ಸೂಚನೆ ನೀಡಿದೆ. ಅಪಾಯದ ಮುನ್ಸೂಚನೆ ಸಿಕ್ಕಾಗ ಸಮೀಪದ ಸುರಕ್ಷಿತ ನೆಲೆಗಳಲ್ಲಿ ಆಶ್ರಯಪಡೆಯಿರಿ ಎಂದು ನಿರ್ದೇಶನ ನೀಡಿದೆ’ ಎಂದರು.
‘ಇಲ್ಲಿ ಕಚೇರಿಗಳು ಮುಚ್ಚಿದ್ದು, ಕಾರ್ಮಿಕರಿಗೆ ರಜೆ ನೀಡಲಾಗಿದೆ. ಆದರೆ, ಆಸ್ಪತ್ರೆಗಳು, ಸೂಪರ್ ಮಾರುಕಟ್ಟೆಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿವೆ. ಸೂಪರ್ ಮಾರುಕಟ್ಟೆಗಳಲ್ಲಿ ಅಗತ್ಯ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಶಾಲಾ ಕಾಲೇಜುಗಳು ಮುಚ್ಚಿದ್ದು, ಪರೀಕ್ಷೆ ಮುಂದೂಡಲಾಗಿದೆ. ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸುವುದಾಗಿ ತಿಳಿಸಲಾಗಿದೆ’ ಎಂದರು.
ಕೊಲ್ಲಿ ರಾಷ್ಟ್ರಗಳ ವಿಮಾನ ನಿಲ್ದಾಣಗಳೂ ಎರಡು ದಿನಗಳಿಂದ ಮುಚ್ಚಿವೆ. ಈ ವಿಮಾನ ನಿಲ್ದಾಣಗಳ ಉದ್ಯೋಗಿಗಳಿಗೆ ರಜೆ ನೀಡಲಾಗಿದೆ.
‘ನನ್ನ ಪತಿ (ಸುಜಿತ್) ದುಬೈ ಇಂಟರ್ ನ್ಯಾಷನಲ್ ವಿಮಾನನಿಲ್ದಾಣದಲ್ಲಿ ಉದ್ಯೋಗಿ. ಈ ವಿಮಾನನಿಲ್ದಾಣದ ಕಾರ್ಯಾಚರಣೆ ಸಂಪೂರ್ಣ ಸ್ಥಗಿತವಾಗಿದೆ. ಇದು ಎಷ್ಟು ದಿನ ಮುಂದುವರಿ ಯಲಿದೆಯೋ ಗೊತ್ತಿಲ್ಲ’ ಎಂದು ದುಬೈನ ಬರ್ ದುಬೈ ಪ್ರದೇಶದಲ್ಲಿ ನೆಲೆಸಿರುವ ಮಮತಾ ತಿಳಿಸಿದರು.
ಇಸ್ರೇಲ್ ಮೇಲೂ ಇರಾನ್ ಪ್ರತಿದಾಳಿ ನಡೆಸುತ್ತಿದ್ದು, ಅಲ್ಲಿ ನೆಲೆಸಿರುವ ರಾಜ್ಯದ ಕರಾವಳಿಯ ಜನರೂ ಕಳವಳಕ್ಕೊಳಗಾಗಿದ್ದಾರೆ.
‘ಸದ್ಯಕ್ಕೆ ಸುರಕ್ಷಿತವಾಗಿವಾಗಿದ್ದೇವೆ. ಇಲ್ಲಿ ರಜೆಯ ವಾತಾವರಣ ಇದೆ. ಸಾರ್ವಜನಿಕ ಸಾರಿಗೆ ಬಹಳ ಕಡಿಮೆ ಇದೆ. ಕ್ಷಿಪಣಿ ದಾಳಿಗಳು ನಿರಂತರವಾಗಿ ನಡೆಯುತ್ತಿವೆ. ಅವುಗಳನ್ನು ಇಲ್ಲಿನ ಸೇನೆ ಹಿಮ್ಮೆಟ್ಟಿಸುತ್ತಿದೆ. ದಾಳಿಯ ಸುಳಿವು ಸಿಗುತ್ತಿದ್ದಂತೆಯೇ ಸೈರನ್ ಮೊಳಗಿಸಿ ಇಲ್ಲಿನ ಸರ್ಕಾರ ಮುನ್ನೆಚ್ಚರಿಕೆ ನೀಡುತ್ತಿದೆ. ಆಗ ನಾವು ಬಂಕರ್‌ಗಳಿಗೆ ತೆರಳಿ ಆಶ್ರಯ ಪಡೆಯುತ್ತಿದ್ದೇವೆ’ ಎಂದು ಇಸ್ರೇಲ್ ಟೆಲ್ ಅವಿವ್ ನಗರದ ಬಳಿಯ ಹರ್ಜ್ಲಿಯಾದಲ್ಲಿ ನೆಲೆಸಿರುವ ಬೆಳ್ತಂಗಡಿ ಮೇಲಂತಬೆಟ್ಟುವಿನ ಪ್ರವೀಣ್ ಪಿರೇರಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.