
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಮಳೆಗಾಲದಲ್ಲಿ ಪ್ರವಾಹ ಕಾಣಿಸಿಕೊಂಡಿದ್ದ ತಗ್ಗು ಪ್ರದೇಶಗಳಲ್ಲಿ ಈ ವರ್ಷ ಸಮಸ್ಯೆ ಮರುಕಳಿಸುವುದನ್ನು ತಡೆಯಲು ಸಾಕಷ್ಟು ಮುಂಚಿತವಾಗಿಯೇ ಕ್ರಮ ವಹಿಸಬೇಕು ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ಮಳೆಗಾಲದಲ್ಲಿ ಪದೇ ಪದೇ ಪ್ರವಾಹ ಕಾಣಿಸಿಕೊಂಡಿದ್ದ ಪ್ರದೇಶಗಳಿಗೆ ಮಂಗಳವಾರ ಅಧಿಕಾರಿಗಳ ಜೊತೆ ಭೇಟಿ ನೀಡಿದ ಅವರು, ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚಿಸಿದರು.
ಅತ್ತಾವರ 5ನೇ ಅಡ್ಡ ರಸ್ತೆ, ಪಾಂಡೇಶ್ವರ, ಶಿವನಗರ, ಸುಭಾಷ್ ನಗರ ಮೊದಲಾದೆಡೆ ಕಳೆದ ಮಳೆಗಾಲದಲ್ಲಿ ಪದೇ ಪದೇ ಪ್ರವಾಹದಿಂದ ಭಾರಿ ಪ್ರಮಾಣದ ಹಾನಿ ಉಂಟಾಗಿತ್ತು. ಅಲ್ಲಿ ಪ್ರವಾಹ ಉಂಟಾಗಲು ಕಾರಣವೇನು, ಅದನ್ನು ತಡೆಯಲು ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳೇನು, ಭವಿಷ್ಯದಲ್ಲಿ ಇಂತಹ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಮರುಕಳಿಸದಂತೆ ಎಚ್ಚರವಹಿಸುವುದು ಹೇಗೆ ಎಂಬ ಕುರಿತು ವೇದವ್ಯಾಸ್ ಕಾಮತ್ ಅವರು ಈ ವೇಳೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಪಾಂಡೇಶ್ವರ ಮೂಲಕ ಸಾಗುವ ಮಳೆನೀರು ಹರಿಯುವ ಕಾಲುವೆಯು ಹೊಯ್ಗೆ ಬಜಾರ್ ಬಳಿ ನದಿಯನ್ನು ಸೇರುವ ಭಾಗದಲ್ಲಿ ಹೂಳು ತುಂಬಿದೆ. ಅಲ್ಲಿ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯ ಬೇಕಿದ್ದರೆ ಹೂಳೆತ್ತುವ (ಡ್ರೆಜ್ಜಿಂಗ್) ಕಾರ್ಯವನ್ನು ತ್ವರಿತವಾಗಿ ನಡೆಸಬೇಕು. ರಾಜಕಾಲುವೆಯ ತಡೆಗೋಡೆಗಳು ಅಲ್ಲಲ್ಲಿ ಕುಸಿದಿದ್ದು, ಅವು ನೀರಿನ ಸರಾಗ ಹರಿವಿಗೆ ಅಡ್ಡಿ ಉಂಟು ಮಾಡುತ್ತಿವೆ. ಕೆಲವು ಕಡೆ ತೆಗೋಡೆ ಶಿಥಿಲಗೊಂಡಿದ್ದು, ಅವು ಮಳೆಗಾಲದಲ್ಲಿ ಕುಸಿಯುವ ಅಪಾಯವಿದೆ. ಅಂತಹ ಕಡೆ ತಕ್ಷಣ ದುರಸ್ತಿ ಕಾರ್ಯಕೈಗೊಳ್ಳಬೇಕು ಎಂದು ಶಾಸಕರು ನಿರ್ದೇಶನ ನೀಡಿದರು.
ಪಾಂಡೇಶ್ವರ ಹಾಗೂ ಆಲ್ಬುಕರ್ಕ್ ಹೆಂಚಿನ ಕಾರ್ಖಾನೆ ಬಳಿ ಇರುವಂತಹ ಮಳೆನೀರು ಹರಿಯುವ ಕಾಲುವೆಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಶಿಥಿಲಗೊಂಡಿದೆ. ಅಲ್ಲಿ ಹೋಸ ಸೇತುವೆ ನಿರ್ಮಿಸಲು ಕ್ರಿಯಾಯೋಜನೆ ಸಿದ್ಧಪಡಿಸಬೇಕು ಎಂದು ಸೂಚನೆ ನೀಡಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕ್ಷೇತ್ರದ ಅಭಿವೃದ್ಧಿಗೆ ಬಿಡಿಗಾಸು ದೊರೆತಿಲ್ಲ. ಅನುದಾನದ ಕೊರತೆಯಿಂದಾಗಿ ಸಣ್ಣಪುಟ್ಟ ತುರ್ತು ಕ್ರಮಗಳನ್ನು ನಿರ್ವಹಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಆದರೂ, ಕ್ಷೇತ್ರದ ಜನತೆಯ ಹಿತ ದೃಷ್ಟಿಯಿಂದ ಈ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ’ ಎಂದು ಅವರು ತಿಳಿಸಿದರು.
ಮಾಜಿ ಮೇಯರ್‌ಗಳಾದ ದಿವಾಕರ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಬಿಜೆಪಿ ಮುಖಂಡರಾದ ನಿತಿನ್ ಕುಮಾರ್, ಶಿವನಗರ ನಾಗರಿಕ ಸಮಿತಿಯ ಅಧ್ಯಕ್ಷ ಪ್ರಕಾಶ್ ಹಾಗೂ ಪದಾಧಿಕಾರಿಗಳು, ಪಾಲಿಕೆ, ರೈಲ್ವೆ, ಬಂದರು, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಜೊತೆಯಲ್ಲಿದ್ದರು.
‘ಪಾಂಡೇಶ್ವರ ರೈಲ್ವೆ ಮೇಲ್ಸೇತುವೆ– ವರದಿ ಸಿದ್ಧಪಡಿಸಿ’
ಪಾಂಡೇಶ್ವರದಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ನಿಂದಾಗಿ ಜನರಿಗೆ ನಿತ್ಯವೂ ಸಮಸ್ಯೆ ಉಂಟಾಗುತ್ತಿದೆ. ಇಲ್ಲಿನ ಹಳಿಯಲ್ಲಿ ರೈಲು ಹಾದುಹೋಗುವಾಗ ಸ್ಥಳೀಯರು 20 ನಿಮಿಷಕ್ಕೂ ಹೆಚ್ಚು ಹೊತ್ತು ಕಾಯಬೇಕಾಗಿದೆ. ಈ ತೊಂದರೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವುದಕ್ಕೆ ಕಾರ್ಯಸಾಧ್ಯತಾ ವರದಿ ಸಿದ್ದಪಡಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.