ADVERTISEMENT

ಸೊಳ್ಳೆ ಉತ್ಪತ್ತಿ ತಾಣಗಳಿಗೆ ದಂಡ: ಆರೋಗ್ಯಾಧಿಕಾರಿ ಡಾ. ಸುಜಯ್

ಜಿಲ್ಲಾಧಿಕಾರಿ ನೇತೃತ್ವದ ಸಭೆ ಬಳಿಕ ನಿರ್ಧಾರ: ತಾ.ಪಂ. ತ್ರೈಮಾಸಿಕ ಸಭೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 4:06 IST
Last Updated 3 ಸೆಪ್ಟೆಂಬರ್ 2025, 4:06 IST
ಮಂಗಳೂರು ತಾಲ್ಲೂಕು ಕೆಡಿಪಿ ಸಭೆಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿದರು. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ತಹಶೀಲ್ದಾರ್ ರಮೇಶ್ ಬಾಬು ಭಾಗವಹಿಸಿದ್ದರು : ಪ್ರಜಾವಾಣಿ ಚಿತ್ರ
ಮಂಗಳೂರು ತಾಲ್ಲೂಕು ಕೆಡಿಪಿ ಸಭೆಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿದರು. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ತಹಶೀಲ್ದಾರ್ ರಮೇಶ್ ಬಾಬು ಭಾಗವಹಿಸಿದ್ದರು : ಪ್ರಜಾವಾಣಿ ಚಿತ್ರ   

ಮಂಗಳೂರು: ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸೊಳ್ಳೆ ಉತ್ಪತ್ತಿಯಾಗುವ ಮನೆಗಳಿಗೆ ದಂಡ ವಿಧಿಸುವ ಬಗ್ಗೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈ ಬಗ್ಗೆ ಸಭೆ ನಡೆಸಿ ನಿರ್ಧರಿಸಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಭಂಡಾರಿ ಹೇಳಿದರು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿ ನಡೆದ ಮಂಗಳೂರು ತಾಲ್ಲೂಕು ಮಟ್ಟದ ತ್ರೈಮಾಸಿಕ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಮಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಈ ವರ್ಷ 620 ಶಂಕಿತ ಡೆಂಗಿ ಪ್ರಕರಣಗಳು ವರದಿಯಾಗಿದ್ದು, 66 ಪ್ರಕರಣಗಳು ದೃಢಪಟ್ಟಿವೆ. ಲೇಡಿಹಿಲ್, ಬಂದರು, ಕುಳಾಯಿ ಹಾಗೂ ಬೈಕಂಪಾಡಿ ಕೈಗಾರಿಕಾ ವಲಯ ಭಾಗದಲ್ಲಿ ಅಧಿಕ ಪ್ರಕರಣಗಳು ಪತ್ತೆಯಾಗಿವೆ ಎಂದರು.

ಸಾರ್ವಜನಿಕರು ಮನೆಯಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಪ್ರಥಮ ಹಂತದಲ್ಲಿ ನೋಟಿಸ್ ನೀಡಲಾಗುತ್ತದೆ. ಎಚ್ಚರಿಕೆ ವಹಿಸದಿದ್ದರೆ ದಂಡ ವಿಧಿಸಲಾಗುತ್ತದೆ. ಸುತ್ತೋಲೆ ಪ್ರಕಾರ ವಸತಿ ಮನೆಗಳಿಗೆ ನಗರದಲ್ಲಿ ₹400, ಗ್ರಾಮಾಂತರ ₹200, ವಾಣಿಜ್ಯ ಪ್ರದೇಶಗಳಲ್ಲಿ ನಗರದಲ್ಲಿ ₹1,000, ಗ್ರಾಮಾಂತರದಲ್ಲಿ ₹ 500, ನಿರ್ಮಾಣ ಹಂತದ ಕಟ್ಟಡಗಳು, ಖಾಲಿ ಜಾಗಗಳಿಗೆ ನಗರದಲ್ಲಿ ₹2,000 ಹಾಗೂ ಗ್ರಾಮಾಂತರದಲ್ಲಿ ₹1,000 ರೂ. ದಂಡ ನಿಗದಿಯಾಗಿದೆ ಎಂದರು.

ADVERTISEMENT

ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ಸಹಕಾರದಲ್ಲಿ ಲಾರ್ವ ಸಮೀಕ್ಷೆ ನಡೆಸಲಾಗುತ್ತಿದೆ. ಜನರು ಸಾಂಕ್ರಾಮಿಕ ರೋಗಗಳನ್ನು ನಿರ್ಲಕ್ಷಿಸುತ್ತಿದ್ದು, ಶೇ 40ರಷ್ಟು ರೋಗ ವಲಸೆ ಕಾರ್ಮಿಕರ ಮೂಲಕ ಹರಡುತ್ತಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಈ ಬಾರಿ ಎಂಟು ಇಲಿ ಜ್ವರ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.

ಶಾಸಕ ಭರತ್ ಶೆಟ್ಟಿ ಮಾತನಾಡಿ, ಇದು ಜನರ ಆರೋಗ್ಯದ ವಿಚಾರವಾಗಿದ್ದು, ಸೊಳ್ಳೆ ಉತ್ಪತ್ತಿಯಾಗುವ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಎಚ್ಚರಿಕೆ ನೀಡುವ ಜೊತೆಗೆ, ಕಟ್ಟುನಿಟ್ಟಿನ ಕ್ರಮ ಆಗಬೇಕು ಎಂದರು.

ಅಡಿಕೆಗೆ ಹಳದಿ ರೋಗ ತಗುಲಿದ ತೋಟಗಳಲ್ಲಿ ಪರ್ಯಾಯ ಬೆಳೆಯಾಗಿ ತಾಳೆ ಬೆಳೆಯಲು ತಿಳಿಸಲಾಗಿದೆ. ತಾಳೆ ಬೆಳೆ ವಿಸ್ತರಣೆಗೆ ಕ್ರಮವಹಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ತಹಶೀಲ್ದಾರ್ ರಮೇಶ್ ಬಾಬು ಉಪಸ್ಥಿತರಿದ್ದರು.

ಆಹಾರ ಕಲಬೆರಕೆ ಸಂಬಂಧ ಸ್ವಯಂ ಪ್ರೇರಣೆಯಿಂದ ಅಧಿಕಾರಿಗಳು ತಪಾಸಣೆ ನಡೆಸಬೇಕು. ದೂರು ಬಂದಾಗ ಮಾತ್ರ ಪರಿಶೀಲನೆ ಮಾಡುವುದಲ್ಲ, ತಹಶೀಲ್ದಾರ್ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಈ ಬಗ್ಗೆ ಗಮನಿಸಬೇಕು ಎಂದು ಡಾ. ಭರತ್ ಶೆಟ್ಟಿ ಹೇಳಿದರು.

ಸಾಂಪ್ರದಾಯಿಕ ಚಿಕಿತ್ಸಾ ವ್ಯವಸ್ಥೆ ಕುರಿತು ಪ್ರತ್ಯೇಕ ಸಭೆ: ಭರತ್ ಶೆಟ್ಟಿ | ನಿರ್ವಹಣೆ ಸಮಸ್ಯೆ: ಜೇನು ಕೃಷಿಗೆ ಹಿನ್ನಡೆ | ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಂದ ಲಾರ್ವ ಸಮೀಕ್ಷೆ

‘ಹಾಲು ಉತ್ಪಾದನೆಯಲ್ಲಿ ಏರಿಕೆ’

ಮಂಗಳೂರು ತಾಲ್ಲೂಕು ವ್ಯಾಪ್ತಿಯ 20 ಸೊಸೈಟಿಗಳ ಮೂಲಕ ತ್ರೈಮಾಸಿಕ 6.56 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು ಏರಿಕೆ ಕಂಡು ಬಂದಿದೆ. ಆರು ತಿಂಗಳ ಹಿಂದೆ 3.50 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು. ಹೈನುಗಾರಿಕೆಗೆ ಸಿಗುವ ಪ್ರೋತ್ಸಾಹದಿಂದ ಹಾಲು ಉತ್ಪಾದನೆ ಹೆಚ್ಚುತ್ತಿದೆ ಎಂದು ದ.ಕ. ಹಾಲು ಒಕ್ಕೂಟದ ಮಂಗಳೂರು ವಿಸ್ತರಣಾಧಿಕಾರಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.