ADVERTISEMENT

ಗಾಂಜಾ ಮಾರಾಟ: ಅಪರಾಧಿಗೆ 5 ವರ್ಷ ಕಠಿಣ ಸಜೆ, ₹50 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 8:27 IST
Last Updated 20 ಡಿಸೆಂಬರ್ 2025, 8:27 IST
<div class="paragraphs"><p>ಜೈಲು (ಪ್ರಾಧಿನಿಧಿಕ ಚಿತ್ರ)</p></div>

ಜೈಲು (ಪ್ರಾಧಿನಿಧಿಕ ಚಿತ್ರ)

   

– ಐಸ್ಟಾಕ್ ಚಿತ್ರ

ಮಂಗಳೂರು: ಗಾಂಜಾ ಸಾಗಣೆ ಮತ್ತು ಮಾರಾಟ ಪ್ರಕರಣದಲ್ಲಿ ಅಪರಾಧಿಗೆ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 5 ವರ್ಷ ಕಠಿಣ ಸಜೆ ಮತ್ತು ₹50 ಸಾವಿರ ದಂಡ ವಿಧಿಸಿದೆ.

ADVERTISEMENT

ಬೆಳ್ತಂಗಡಿ ತಾಲ್ಲೂಕಿನ ತೋಟತ್ತಡಿ ಗ್ರಾಮದ ತೆಕ್ಕೆಲ್ ನಿವಾಸಿ ಜೋಸೆಫ್ ಟಿ.ಇ. ಶಿಕ್ಷೆಗೆ ಒಳಗಾದ ವ್ಯಕ್ತಿ. ₹50 ಸಾವಿರ ದಂಡ ಪಾವತಿಸಲು ಜೋಸೆಫ್ ವಿಫಲನಾದರೆ ಮತ್ತೆ 2 ತಿಂಗಳ ಕಠಿಣ ಶಿಕ್ಷೆ ಅನುಭವಿಸಬೇಕು ಎಂದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ್ ಅವರು ಶನಿವಾರ ಆದೇಶ ಮಾಡಿದ್ದಾರೆ.

2018ರ ಅ.11ರಂದು ಮಂಗಳೂರು ತಾಲ್ಲೂಕಿನ ನೀರೇಶ್ವಾಲ್ಯ ಗ್ರಾಮದ ಬಂದರು ಬೈಹುಲ್ಲಿನ ದಕ್ಕೆಯ ಹೊಳೆಯ ಬದಿಯಲ್ಲಿ ಗಿರಾಕಿಗಳಿಗೆ ಗಾಂಜಾ ಮಾರಾಟ ಮಾಡಲು ವ್ಯಕ್ತಿಯೊಬ್ಬ ಕಾಯುತ್ತಿರುವ ಬಗ್ಗೆ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮುಕುಂದ ನಾಯಕ್ ಅವರಿಗೆ ಮಾಹಿತಿ ಸಿಕ್ಕಿತ್ತು. ಅದರ ಅನುಸಾರ ತಮ್ಮ ತಂಡದೊಂದಿಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ಟಿ.ಇ.ಜೋಸೆಫ್‌ನನ್ನು ಬಂಧಿಸಿ, ಆತನಿಂದ ಒಟ್ಟು 2,300 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರು. ಈ ಬಗ್ಗೆ ಇಲ್ಲಿನ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್‌ 8ಸಿ 20 ಬಿ (ii) ಅನ್ವಯ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಇನ್‌ಸ್ಪೆಕ್ಟರ್‌ ಮುಕುಂದ ನಾಯಕ್‌ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಗೊಂಡಿದ್ದ ಜೋಸೆಫ್ ಆ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. 2024ರ ಫೆ. 22ರಂದು ಪೊಲೀಸರು ಆತನನ್ನು ಬಂಧಿಸಿದ್ದರು.

ಈ ಪ್ರಕರಣದಲ್ಲಿ ಜುಡಿತ್ ಓಲ್ಗ ಮಾರ್ಗರೆಟ್ ಕ್ರಾಸ್ತ ಅವರು ಸರ್ಕಾರದ ಪರವಾಗಿ ವಾದಿಸಿದ್ದರು. ’ಈ ಪ್ರಕರಣದಲ್ಲಿ ಒಟ್ಟು 9 ದಾಖಲೆಗಳನ್ನು ಗುರುತಿಸಿ, ಐವರು ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.