ಪ್ರಾತಿನಿಧಿಕ ಚಿತ್ರ
ವಿಟ್ಲ (ದಕ್ಷಿಣ ಕನ್ನಡ): ವ್ಯಕ್ತಿಯೊಬ್ಬರು ಸುಳ್ಳು ದಾಖಲೆ ನೀಡಿ ಅಕ್ರಮವಾಗಿ ಪಾಸ್‌ಪೋರ್ಟ್ ಪಡೆಯಲು ನೆರವಾದ ಹಾಗೂ ಆ ವ್ಯಕ್ತಿ ಪೊಲೀಸ್ ನಿರಾಕ್ಷೇಪಣಾ ಪತ್ರ ಒದಗಿಸಿದ ಕಡತಗಳನ್ನು ನಾಶಪಡಿಸಿದ ಆರೋಪದ ಮೇಲೆ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರದೀಪ್ ಎಂಬುವರನ್ನು ಅದೇ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಪ್ರದೀಪ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಕ್ತಿದಾಸ್ ಎಂಬಾತ ಅಕ್ರಮವಾಗಿ ಪಾಸ್ ಪೋರ್ಟ್ ಪಡೆಯಲು ಪೊಲೀಸ್ ನಿರಾಕ್ಷೇಪಣಾ ಪತ್ರ ಒದಗಿಸಲು ಆರೋಪಿ ಪ್ರದೀಪ್ ನೆರವಾಗಿದ್ದರು.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಳಾಸದಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಂಡು ಶಕ್ತಿದಾಸ್ ಎಂಬಾತ 2025ನೇ ಫೆಬ್ರುವರಿ ತಿಂಗಳಲ್ಲಿ ಪಾಸ್ ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದ. ಆ ಅರ್ಜಿಯನ್ನು ಪೊಲೀಸರು ಪರಿಶೀಲನೆ ಮಾಡುವ ವೇಳೆ ಅರ್ಜಿದಾರನ ವಿಳಾಸವು ದಾಖಲಾತಿಗಳಲ್ಲಿದ್ದ ವಿಳಾಸಕ್ಕೆ ತಾಳೆಯಾಗಿರಲಿಲ್ಲ. ಹಾಗಾಗಿ ಆತನ ಅರ್ಜಿ ಪುರಸ್ಕರಿಸದಂತೆ ವಿಟ್ಲ ಪೊಲೀಸರು ಶಿಫಾರಸ್ಸು ಮಾಡಿದ್ದರು. ಆ ವ್ಯಕ್ತಿಯು 2025ರ ಜೂನ್ ತಿಂಗಳಲ್ಲಿ ಮರು ಅರ್ಜಿಯನ್ನು ಸಲ್ಲಿಸಿದ್ದ. ಆ ಮರು ಅರ್ಜಿಯ ಸಂಬಂಧ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರದೀಪ್ ಎಂಬವರು, ಆ ಅರ್ಜಿದಾರರ ವಿಳಾಸವಿರುವ ಪ್ರದೇಶದಲ್ಲಿ ಗಸ್ತು ಹೊಣೆ ಹೊತ್ತಿದ್ದ ಸಿಬ್ಬಂದಿ ಸಾಬು ಮಿರ್ಜಿ ಅವರ ಅರಿವಿಗೆ ಬಾರದಂತೆ, ಅವರ ಹೆಸರಿನಲ್ಲಿ ವರದಿ ತಯಾರಿಸಿದ್ದರು. ಸಾಬು ಮಿರ್ಜಿ ಅವರ ಸಹಿಯನ್ನು ಫೋರ್ಜರಿ ಮಾಡಿ, ಮೇಲಧಿಕಾರಿಯವರಿಂದ ಶಿಫಾರಸ್ಸು ಮಾಡಿಸಿ ಕಳುಹಿಸಿ ಕೊಟ್ಟಿದ್ದರು. ಈ ವಿಷಯ ಯಾರಿಗೂ ಗೊತ್ತಾಗಬಾರದೆಂದು ಪರಿಶೀಲನೆಯ ದಾಖಲೆಗಳನ್ನು ನಾಶಪಡಿಸಿದ್ದರು. 2025ರ ಡಿ. 12 ರಂದು ದಾಖಲೆಯನ್ನು ಪರಿಶೀಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿತ್ತು.
ಸುಳ್ಳು ದಾಖಲೆಗಳನ್ನು ನೀಡಿ ಪಾಸ್ ಪೋರ್ಟ್ ಪಡೆದ ಆರೋಪಿ ಶಕ್ತಿದಾಸ್ ವಿರುದ್ದವೂ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.