ADVERTISEMENT

ಕನ್ನಡ-ತುಳು ವಿದ್ವಾಂಸ ವಾಮನ ನಂದಾವರ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2025, 5:53 IST
Last Updated 15 ಮಾರ್ಚ್ 2025, 5:53 IST
<div class="paragraphs"><p>ವಾಮನ ನಂದಾವರ</p></div>

ವಾಮನ ನಂದಾವರ

   

ಮಂಗಳೂರು: ಕನ್ನಡ-ತುಳು ವಿದ್ವಾಂಸ ವಾಮನ ನಂದಾವರ (82) ಶನಿವಾರ ನಿಧನರಾದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿ ಅವರು ಕಾರ್ಯ ನಿರ್ವಹಿಸಿದ್ದರು. ತುಳು ಜಾನಪದ ವಿದ್ವಾಂಸರಾಗಿದ್ದ ಅವರು ಕೋಟಿ-ಚೆನ್ನಯರ ಕುರಿತು ಸಂಶೋಧನೆ ಮಾಡಿದ್ದರು. 25 ಕೃತಿಗಳನ್ನು ರಚಿಸಿದ್ದಾರೆ. ಪ್ರಕಾಶಕ, ಸಂಘಟಕರಾಗಿಯೂ ಗುರುತಿಸಿಕೊಂಡಿದ್ದರು.

ADVERTISEMENT

ಅವರಿಗೆ ಪತ್ನಿ, ಲೇಖಕಿ ಚಂದ್ರಕಲಾ ನಂದಾವರ, ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದಾರೆ. ಮೂರು ವರ್ಷಗಳಿಂದ ಉಳಾಯಿಬೆಟ್ಟುವಿನಲ್ಲಿರುವ ವೃದ್ಧಾಶ್ರಮವೊಂದರಲ್ಲಿ ವಾಸವಾಗಿದ್ದರು.

ಇಂದು ಮಧ್ಯಾಹ್ನ 2 ಗಂಟೆಗೆ ಉರ್ವ ಸ್ಟೋರ್ ನಲ್ಲಿ ಉವ ತುಳು ಭವನದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ‌.

ವಾಮನ ನಂದಾವರ- ಚಂದ್ರಕಲಾ ನಂದಾವರ ದಂಪತಿ ಈಚೆಗಷ್ಟೆ ಎಸ್.ವಿ‌‌.ಪರಮೇಶ್ವರ ಭಟ್ಟ ಪ್ರಶಸ್ತಿಗೆ ಭಾಜನರಾಗಿದ್ದರು.

ವಾಮನ ನಂದಾವರ ಅವರ ಪರಿಚಯ:

ವಾಮನ ನಂದಾವರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನಂದಾವರ ಗ್ರಾಮದಲ್ಲಿ ಬಾಬು ಬಾಳೆಪುಣಿ-ಪೂವಮ್ಮ ದಂಪತಿಯ ಮಗನಾಗಿ 1944ರ ನ.15 ರಂದು ಜನಿಸಿದ್ದರು.

ಮುದುಂಗಾರು ಕಟ್ಟೆ ಸರ್ಕಾರಿ ಶಾಲೆ , ಪಾಣೆಮಂಗಳೂರಿನ ಎಸ್.ವಿ.ಎಸ್ ಶಾಲೆ ಹಾಗೂ ಶ್ರೀಭಾರತಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ, ಕುರ್ನಾಡು ಬೋರ್ಡ್ ಹೈಸ್ಕೂಲು, ಕೋಟೆಕಾರಿನ ಆನಂದಾಶ್ರಮ ಪ್ರೌಢಶಾಲೆಗಳಲ್ಲಿ ಪ್ರೌಢಶಿಕ್ಷಣ, ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್‌ಸಿ ಪದವಿ, ಮಂಗಳೂರು ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ ಪದವಿ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ (ಕನ್ನಡ), ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಎಂ.ಇಡಿ ಪದವಿ ಪಡೆದಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರೊ. ಬಿ.ಎ.ವಿವೇಕ ರೈ ಮಾರ್ಗದರ್ಶನದಲ್ಲಿ ರಚಿಸಿದ್ದ 'ಕೋಟಿ ಚೆನ್ನಯ ಜಾನಪದೀಯ ಅಧ್ಯಯನ’ ಮಹಾ ಪ್ರಬಂಧಕ್ಕೆ ಪಿಎಚ್.ಡಿ ಪಡೆದಿದ್ದರು.

ಬೆಂಗಳೂರಿನ ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಸಹಾಯಕ ಅಧ್ಯಾಪಕರಾಗಿ ಶಿಕ್ಷಣ ವೃತ್ತಿ ಆರಂಭಿಸಿದ್ದ ಅವರು, ಮಂಗಳೂರಿನ ಸೇಂಟ್ ಆನ್ಸ್ ಪ್ರೌಢಶಾಲೆಯಲ್ಲಿ ಸಹಾಯಕ ಅಧ್ಯಾಪಕರಾಗಿ, ಸೇಂಟ್ ಆನ್ಸ್ ಮಹಿಳಾ ಶಿಕ್ಷಕ-ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಹಾಗೂ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲರಾಗಿದ್ದರು. ಪಿಲಿಕುಳ ನಿಸರ್ಗಧಾಮದ ಯೋಜನಾಧಿಕಾರಿಯಾಗಿ ಹಾಗೂ 'ಮಂಗಳೂರು ದರ್ಶನ' ಯೋಜನೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು.

ತುಳು ಪಠ್ಯ ಪುಸ್ತಕ ಸಮಿತಿ, ತುಳು ನಿಘಂಟು ಯೋಜನೆಯಲ್ಲಿ ಹಾಗೂ ತುಳು ಜಾನಪದ ಪತ್ರಿಕೆ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದರು. ಬಂಟ್ವಾಳ ತಾಲ್ಲೂಕಿನ 12ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ವಾಮನ ನಂದಾವರ ಅವರಿಗೆ ಕಾಂತಾವರ ಕನ್ನಡ ಸಂಘದ ಪುರಸ್ಕಾರ, ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ,ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ, ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಬನ್ನಂಜೆ ಬಾಬು ಅಮಿನ್ ಪ್ರಶಸ್ತಿಗಳು ಲಭಿಸಿವೆ.

ಕನ್ನಡ ಕವನ ಸಂಕಲನ 'ತಾಳಮೇಳ' ತುಳು ಕನ್ನಡ ಒಗಟುಗಳ ಸಂಕಲನ 'ಓಲೆಪಟಾಕಿ', ತುಳು ಜಾನಪದ ಪ್ರಬಂಧ 'ತುಳುವೆರೆ ಕುಸಾಲ್ ಕುಸೆಲ್' , ತುಳು ಜಾನಪದ ಅಧ್ಯಯನ ಪ್ರಬಂಧ 'ಸಿಂಗದನ' 'ತುಳುಟು ಪನಿಕತೆ', ‘ಕೋಟಿ ಚೆನ್ನಯ-ಜಾನಪದ ಸುತ್ತಮುತ್ತ’, ಡಿ.ವಿ.ಜಿ.ಯವರ ಸಾಹಿತ್ಯ ಕುರಿತ ವಿಮರ್ಶೆ ‘ನಂಬಿಕೆ’, 'ಅಜ್ಜಿ ತಾಂಕಿನ ಪುಳ್ಳಿ’, ‘ನೆತ್ತರಾ ನೀರಾ’, ಇಂಚಿತ್ತಿ ತುಳು ನಾಟಕೊಲು, ತುಳು ಸಾಹಿತ್ಯ ಚರಿತ್ರೆ,'ತುಳು ಜಾನಪದದ ಆಚರಣೆ', ಮನಶಾಸ್ತ್ರ ವಿಜ್ಞಾನಿಯ ಜೀವನ – ಸಾಧನೆ ಕುರಿತ ‘ಸರ್ ಜೀಮ್ಸ್ ಜಾರ್ಜ್ ಫ್ರೆಜರ್‌’, ‘ಒಂಜಿ ಕೋಪೆ ಕತೆಕುಲು’, ‘ಕಿಡಿಗೇಡಿಯ ಕೀಟಲೆ’, ಮಕ್ಕಳ ಕಥೆ ‘ಕೋಟಿ ಚೆನ್ನಯ’ ತುಳು ಕವನ ಸಂಕಲನ‌ 'ಬೀರ' ಇವು ಅವರ ಪ್ರಮುಖ ಕೃತಿಗಳು.

ಅವರು ರಚಿಸಿದ 'ತುಳುವರ ಕುಸಾಲ್- ಕುಸೆಲ್' ಕೃತಿಗೆ ಭಾರತೀಯ ಭಾಷಾ ಕೇಂದ್ರೀಯ ಸಂಸ್ಥೆಯ ಪ್ರಶಸ್ತಿ ದಕ್ಕಿದೆ. 'ಸಿಂಗದನ ಮತ್ತು ಜಾನಪದ ಸುತ್ತ ಮುತ್ತ' ಕೃತಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪುರಸ್ಕಾರಕ್ಕೆ ಭಾಜನವಾಗಿದೆ. 'ಕೋಟಿ ಚೆನ್ನಯ ಜಾನಪದೀಯ ಅಧ್ಯಯನ' ಕೃತಿಯು ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಬಹುಮಾನವನ್ನು ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.