‘ಪ್ರದೀಶ’ ಹೆಸರಿನಲ್ಲಿ ಸ್ವಂತ ಬ್ರ್ಯಾಂಡ್ | ಕಡಲೆ ಹಿಟ್ಟು, ಖಾರದಪುಡಿ ಸೇರಿ ಹಲವು ಉತ್ಪನ್ನ | ರೈತರಿಂದಲೇ ನೇರವಾಗಿ ಧಾನ್ಯ ಖರೀದಿ
ಬಸವಾಪಟ್ಟಣ: ಸಮೀಪದ ಕೆಂಗಾಪುರದ ಯುವ ಉದ್ಯಮಿಯೊಬ್ಬರು ಸ್ಥಾಪಿಸಿರುವ ಕಿರು ಉದ್ದಿಮೆ ಯಶಸ್ಸಿನ ಕತೆ ಹೇಳುತ್ತಿದ್ದು, ಉದ್ಯೋಗದ ನಿರೀಕ್ಷೆಯಲ್ಲಿ ಇರುವ ಜನರಿಗೆ ಮಾದರಿಯಾಗಿದೆ.
ಗ್ರಾಮದ ಪ್ರಕಾಶ ನಾಯ್ಕ ಅವರು ಕೃಷಿ ಇಲಾಖೆಯ ಸಹಯೋಗದಲ್ಲಿ, ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆ ಯೋಜನೆಯಡಿ ಅಹಾರ ಉತ್ಪಾದನಾ ಘಟಕ ಸ್ಥಾಪಿಸಿ ತಮ್ಮದೇ ಬ್ರ್ಯಾಂಡ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ.
ಕೆಂಗಾಪುರದಲ್ಲಿ ಎಂಟು ಗುಂಟೆ ಜಮೀನು ಖರೀದಿಸಿ, ಪ್ರಥಮ್ ಫುಡ್ ಪ್ರೊಸೆಸಿಂಗ್ ಯೂನಿಟ್ ಎಂಬ ಉತ್ಪಾದನಾ ಘಟಕವನನ್ನು ಅವರು ಸ್ಥಾಪಿಸಿದರು. ಪ್ರದೀಶ ಎಂಬ ಹೆಸರಿನಲ್ಲಿ ಕಡಲೆ ಹಿಟ್ಟು, ಖಾರದಪುಡಿ, ಇಡ್ಲಿ ರವೆ, ರಾಗಿ ಹಿಟ್ಟು, ಜೋಳದ ಹಿಟ್ಟು, ಗೋಧಿ ಹಿಟ್ಟು, ಗೋಧಿರವೆ, ಒಣ ಕೊಬ್ಬರಿ ಪುಡಿ, ಶ್ಯಾವಿಗೆ, ಶೇಂಗಾ ಎಣ್ಣೆ, ಕೊಬ್ಬರಿ ಎಣ್ಣೆ, ತೊಗರಿ ಮತ್ತು ಕಡಲೆ ಬೇಳೆ ಮಾಡುವ ಯಂತ್ರಗಳನ್ನು ಅಳವಡಿಸಿದ್ದಾರೆ. ಈ ಮೂಲಕ ಉತ್ಕೃಷ್ಟ ಮಟ್ಟದ ವಿವಿಧ ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ದಾಪುಗಾಲು ಹಾಕುತ್ತಿದ್ದಾರೆ.
₹30 ಲಕ್ಷ ವೆಚ್ಚದ ಘಟಕ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ 50ರಷ್ಟು ಸಬ್ಸಿಡಿ ನೀಡಿವೆ. ಘಟಕ ಸ್ಥಾಪನೆಗೆ ಅಗತ್ಯವಿದ್ದ ಬಂಡವಾಳವನ್ನು ಬ್ಯಾಂಕ್‌ನಿಂದ ಸಾಲದ ರೂಪದಲ್ಲಿ ಪಡೆದಿದ್ದಾರೆ. ತಮ್ಮ ಘಟಕಕ್ಕೆ ಬೇಕಾದ ಆಹಾರ ಧಾನ್ಯಗಳನ್ನು ರೈತರಿಂದಲೇ ನೇರವಾಗಿ ಖರೀದಿಸುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿಯಿಲ್ಲದ ಕಾರಣ, ಉತ್ತಮ ದರ ಸಿಗುತ್ತಿದೆ ಎಂದು ರೈತರು ಹೇಳಿದ್ದಾರೆ.
‘ಘಟಕದಲ್ಲಿ ತಯಾರಾಗುವ ಉತ್ಪನ್ನಗಳನ್ನು ನಮ್ಮ ವಾಹನದ ಮೂಲಕ ಬೇಕರಿಗಳು ಹಾಗೂ ಕರಿದತಿಂಡಿ ತಯಾರಿಸುವ ಕಾರ್ಖಾನೆಗಳಿಗೆ ಸಗಟು ದರದಲ್ಲಿ ಪೂರೈಸುತ್ತಿದ್ದೇನೆ. ನಮ್ಮ ಬಹುಪಾಲು ಗ್ರಾಹಕರು ಬೇಕರಿ ಉತ್ಪನ್ನ ತಯಾರಕರಾಗಿದ್ದಾರೆ’ ಎನ್ನುತ್ತಾರೆ ಪ್ರಕಾಶ್ ನಾಯ್ಕ.
ಪ್ರಕಾಶ್ ನಾಯ್ಕ ಅವರ ಉತ್ಪಾದನಾ ಘಟಕಕ್ಕೆ ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳಾದ ರೇವಣ ಸಿದ್ಧನಗೌಡ, ಅರುಣಕುಮಾರ್ ಭೇಟಿ ನೀಡಿ ಮೆಚ್ಚುಗೆ ಸೂಚಿಸಿದ್ದಾರೆ ಎಂದು ಇಲ್ಲಿನ ಕೃಷಿ ಅಧಿಕಾರಿ ಎನ್. ಲತಾ ತಿಳಿಸಿದ್ದಾರೆ.ಪ್ರಕಾಶ್ ನಾಯ್ಕ ಯುವ ಉದ್ಯಮಿ
ಪ್ರತಿದಿನ ಒಂದು ಟನ್‌ನಷ್ಟು ಉತ್ಪನ್ನಗಳು ಮಾರಾಟವಾಗುತ್ತವೆ. ದಾವಣಗೆರೆ ಹಾವೇರಿ ಉಡುಪಿ ಜಿಲ್ಲೆಗಳಲ್ಲಿ ನಮ್ಮ ವಸ್ತುಗಳು ಜನಪ್ರಿಯವಾಗಿದ್ದು ಸಾಕಷ್ಟು ಬೇಡಿಕೆ ಇದೆಪ್ರಕಾಶ್ ನಾಯ್ಕ ಯುವ ಉದ್ಯಮಿ
ಪ್ರಕಾಶ್‌ನಾಯ್ಕ ಅವರ ಈ ಯತ್ನ ಯುವ ಜನತೆಗೆ ಮಾದರಿಯಾಗಿದೆ. ಸರ್ಕಾರಿ ನೌಕರಿಗಾಗಿ ಕಾಯದೇ ಸ್ವಂತ ಉದ್ಯಮ ಸ್ಥಾಪಿಸಿ ಅನೇಕರಿಗೆ ಉದ್ಯೋಗ ನೀಡುತ್ತಿದ್ದಾರೆಎನ್. ಲತಾ ಕೃಷಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.