ADVERTISEMENT

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ಜನ ಜಾಗೃತಿಗಾಗಿ ಭಜನೆ!

ಚನ್ನಗಿರಿ ತಾಲ್ಲೂಕು ಗೊಲ್ಲರಹಟ್ಟಿಯ ಕಾಡುಗೊಲ್ಲ ಸಮುದಾಯದ ಉತ್ಸಾಹಿಗಳ ದಿಟ್ಟಹೆಜ್ಜೆ

ಅಮೃತ ಕಿರಣ ಬಿ.ಎಂ.
Published 28 ಸೆಪ್ಟೆಂಬರ್ 2025, 0:30 IST
Last Updated 28 ಸೆಪ್ಟೆಂಬರ್ 2025, 0:30 IST
ದಾವಣಗೆರೆ ಜಿಲ್ಲೆಯ ಚನ್ನಗಿರಿ ಸಮೀಪದ ಮರವಂಜಿ ಗೊಲ್ಲರಹಟ್ಟಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತ ಭಜನೆ ಪದ ಹಾಡುತ್ತಿರುವ ಕಾಡುಗೊಲ್ಲ ಸಮುದಾಯದ ಸದಸ್ಯರು
ದಾವಣಗೆರೆ ಜಿಲ್ಲೆಯ ಚನ್ನಗಿರಿ ಸಮೀಪದ ಮರವಂಜಿ ಗೊಲ್ಲರಹಟ್ಟಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತ ಭಜನೆ ಪದ ಹಾಡುತ್ತಿರುವ ಕಾಡುಗೊಲ್ಲ ಸಮುದಾಯದ ಸದಸ್ಯರು   

ದಾವಣಗೆರೆ: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಲು ಕಾಡುಗೊಲ್ಲ ಸಮುದಾಯದ ಗುಂಪೊಂದು ಭಜನೆ ಪದವನ್ನು ಕಟ್ಟಿ, ಹಾಡಿ ಎಲ್ಲರನ್ನೂ ತಲುಪುವ ಯತ್ನ ಮಾಡಿದೆ.

ಸಮೀಕ್ಷಕರು ಬಂದಾಗ ಏನೆಲ್ಲ ಮಾಹಿತಿ ನೀಡಬೇಕು ಎಂಬುದರ ಬಗ್ಗೆ ದೇವಸ್ಥಾನಗಳಲ್ಲಿ ಕುಳಿತು, ತಾಳ ಬಾರಿಸುತ್ತಾ ಸುಶ್ರಾವ್ಯವಾಗಿ ಹಾಡುತ್ತಾ, ಚನ್ನಗಿರಿ ತಾಲ್ಲೂಕಿನ ಮರವಂಜಿ ಗೊಲ್ಲರಹಟ್ಟಿಯ ಹತ್ತಾರು ಜನರ ಗುಂಪು ಸಮುದಾಯದ ಜನರಲ್ಲಿ ಅರಿವು ಮೂಡಿಸುತ್ತಿದೆ.

‘ಬರೆಸಿರಣ್ಣ ಬರೆಸಿ ನಮ್ಮ ಜಾತಿಯನ್ನು ಬರೆಸಿ.. ಕಾಡುಗೊಲ್ಲ ಎಂದು ಬರೆಸಿ.. ಕುರಿ ಕಾಯುವ ಕಸುಬು ಎಂದು ಬರೆಸಿ..’ – ಎಂಬ ಸಾಲುಗಳುಳ್ಳ ಭಜನೆ ಮೂಲಕ ಹಾಡಿ ತಿಳಿವಳಿಕೆ ಮೂಡಿಸುತ್ತಿದೆ.

ADVERTISEMENT

ಸಮುದಾಯದ ಶಿಕ್ಷಕರೊಬ್ಬರು ರಚಿಸಿರುವ ಈ ಹಾಡಿಗೆ ತಿಮ್ಮಪ್ಪ, ಕರಿಯಪ್ಪ, ಗೋವಿಂದಪ್ಪ, ಶಶಿ ಮಾಸ್ಟರ್, ಕಾಟಪ್ಪ, ಪಾತಪ್ಪ, ಓಂಕಾರಪ್ಪ ಅವರನ್ನು ಒಳಗೊಂಡ ತಂಡ ದನಿಯಾಗಿದೆ.

ವಿಡಿಯೊ ಪ್ರಸ್ತುತಿ:

ಸಮುದಾಯದ ಮುಖಂಡ, ಜಗಳೂರಿನ ಮಹಾಲಿಂಗಪ್ಪ ಹಿರೇಮಲ್ಲನಹೊಳೆ ಹಾಗೂ ಅವರ ತಂಡ ಮತ್ತೊಂದು ಹೆಜ್ಜೆ ಮುಂದಿರಿಸಿದೆ. ಅಲೆಮಾರಿ ಸಂಸ್ಕೃತಿಯ ಕಾಡುಗೊಲ್ಲರು ಕುರಿ ಕಾಯುವ ಕಾಯಕದಲ್ಲಿದ್ದಾರೆ. ವಿವಿಧೆಡೆ ಕುರಿಮಂದೆ ಮುನ್ನಡೆಸುತ್ತಿರುವ ಅವರಿಗೆ ಮಾಹಿತಿ ನೀಡುವ ಉದ್ದೇಶದಿಂದ ವಿಡಿಯೊಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡಲಾಗಿದೆ.

ವ್ಯಕ್ತಿಯೊಬ್ಬರು, ಕುರಿಗಾಹಿಯೊಬ್ಬರನ್ನು ‘ಎಲ್ಲಿಗೆ ಹೊರಟೆ?’ ಎಂದು ಕೇಳುತ್ತಾರೆ. ‘ನಮ್ಮ ಕಾಡುಗೊಲ್ಲ ಬುಡಕಟ್ಟು, ಜಾತಿ ಹಾಗೂ ಕುರಿ ಕಾಯುವ ಕಸುಬಿನ ಮಾಹಿತಿಯನ್ನು ಸಮೀಕ್ಷೆಯಲ್ಲಿ ನಮೂದಿಸಲು ಊರಿಗೆ ಹೋಗುತ್ತಿದ್ದೇನೆ’ ಎಂದು ಹೇಳುತ್ತಾ ಕುರಿಗಾಹಿ ಮುಂದೆ ಸಾಗುತ್ತಾರೆ.

ಜ‌ಗಳೂರು ಸಮೀಪದ ಬಿಸ್ತುವಳ್ಳಿ ಮಾಕುಂಟೆ ಗೊಲ್ಲರಹಟ್ಟಿಯ ಮಹಿಳೆಯೊಬ್ಬರು ಕಾಣಿಸಿಕೊಂಡಿರುವ ಮತ್ತೊಂದು ವಿಡಿಯೊದಲ್ಲಿ ‘ಸಮೀಕ್ಷಕರ ತಂಡ ಊರಿಗೆ ಬರುತ್ತಿದ್ದು, ಎಲ್ಲರೂ ಸಮೀಕ್ಷೆಯಲ್ಲಿ ತಮ್ಮ ಜಾತಿ, ಕಸುಬು, ಶೈಕ್ಷಣಿಕ ಅರ್ಹತೆಯ ಮಾಹಿತಿ ನೀಡಿ’ ಎಂದು ಅವರು ಊರಿನಲ್ಲಿ ಸಾರುತ್ತಾರೆ. ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿವೆ. 

ರಾಜ್ಯದ 12 ಜಿಲ್ಲೆಗಳ 1,250 ಗೊಲ್ಲರಹಟ್ಟಿಗಳಲ್ಲಿ ವ್ಯಾಪಿಸಿರುವ ಕಾಡುಗೊಲ್ಲರನ್ನು ಸಂಪರ್ಕಿಸುವ ಮಾಧ್ಯಮವಾಗಿ ಭಜನೆ ಹಾಗೂ ವಿಡಿಯೊ ವೇದಿಕೆಗಳನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ.

ಮಹಾಲಿಂಗಪ್ಪ ಹಿರೇಮಲ್ಲನಹೊಳೆ
ಜನಜಾಗೃತಿಗೆ ಮಾಡಿದ ವಿಡಿಯೊಗಳು ಫೇಸ್‌ಬುಕ್ ವಾಟ್ಸ್‌ಆ್ಯಪ್‌ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿ ಲಕ್ಷಾಂತರ ಜನರನ್ನು ತಲುಪಿದ್ದು ಪ್ರಯತ್ನ ಸಾರ್ಥಕವಾಗಿದೆ
ಮಹಾಲಿಂಗಪ್ಪ ಹಿರೇಮಲ್ಲನಹೊಳೆ ಸಮುದಾಯದ ಮುಖಂಡ ಜಗಳೂರು

ಅಲೆಮಾರಿಗಳನ್ನು ತಲುಪುವ ಉದ್ದೇಶ

‘ಕಾಡುಗೊಲ್ಲ ಬುಡಕಟ್ಟಿನ ಜನಸಂಖ್ಯೆ ಶೈಕ್ಷಣಿಕ ಮಾಹಿತಿಗಳು ಸರ್ಕಾರದ ಸೌಲಭ್ಯ ಪಡೆಯಲು ನೆರವಾಗುತ್ತವೆ. ಸಮೀಕ್ಷೆಯಲ್ಲಿ ಎಲ್ಲ ಆಯಾಮಗಳ ಚಿತ್ರಣ ಸಿಗಲಿದೆ.  ಜನಜಾಗೃತಿಗಾಗಿ ಇಂತಹ ಪ್ರಯತ್ನ ಮಾಡಲಾಗಿದೆ. ‘ಸಮುದಾಯದ ಅನಕ್ಷರಸ್ಥ ಹಾಗೂ ಅಲೆಮಾರಿಗಳನ್ನೂ ತಲುಪಲು ಪ್ರಬಲ ಸಂವಹನ ಮಾಧ್ಯಮವಾದ ವಿಡಿಯೊ ಪ್ರಸ್ತುತಿ ಆಯ್ಕೆ ಮಾಡಿಕೊಳ್ಳಲಾಯಿತು’ ಎಂದು ಈ ಪ್ರಕ್ರಿಯೆಯಲ್ಲಿ ತೊಡಗಿದ್ದ ಸಮುದಾಯದ ಮುಖಂಡರೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.