ADVERTISEMENT

ದಾವಣಗೆರೆ: ವೀರಶೈವ ಲಿಂಗಾಯತ ಮಹಾ ಅಧಿವೇಶನ ಇಂದಿನಿಂದ

ಕೇಂದ್ರದ ಒಬಿಸಿ ಪಟ್ಟಿಗೆ ಲಿಂಗಾಯತರ ಸೇರ್ಪಡೆಗೆ ಪ್ರಸ್ತಾವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 23:30 IST
Last Updated 22 ಡಿಸೆಂಬರ್ 2023, 23:30 IST
<div class="paragraphs"><p>ಅಖಿಲ ಭಾರತ ವೀರಶೈವ– ಲಿಂಗಾಯತ ಮಹಾಸಭಾದ 24ನೇ ಅಧಿವೇಶನಕ್ಕೆ ದಾವಣಗೆರೆಯ ಎಂಬಿಎ ಮೈದಾನದಲ್ಲಿ&nbsp; ವೇದಿಕೆಯ ಸಿದ್ಧತೆಗೆ ಅಂತಿಮ ಸ್ಪರ್ಶ ನೀಡಲಾಯಿತು </p></div>

ಅಖಿಲ ಭಾರತ ವೀರಶೈವ– ಲಿಂಗಾಯತ ಮಹಾಸಭಾದ 24ನೇ ಅಧಿವೇಶನಕ್ಕೆ ದಾವಣಗೆರೆಯ ಎಂಬಿಎ ಮೈದಾನದಲ್ಲಿ  ವೇದಿಕೆಯ ಸಿದ್ಧತೆಗೆ ಅಂತಿಮ ಸ್ಪರ್ಶ ನೀಡಲಾಯಿತು

   

–ಪ್ರಜಾವಾಣಿ ಚಿತ್ರ

ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನ ಡಿ.23ರಿಂದ ಎರಡು ದಿನ ಇಲ್ಲಿನ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ADVERTISEMENT

2022ರ ಡಿಸೆಂಬರ್ 23ರಿಂದ 25ವರೆಗೆ ಅಧಿವೇಶನ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ರಾಜಕೀಯ ಕಾರಣಗಳಿಂದಾಗಿ ಮುಂದೂಡಲಾಗಿತ್ತು. ಇದೀಗ ಅಧಿವೇಶನವನ್ನು 2 ದಿನಕ್ಕೆ ನಿಗದಿಗೊಳಿಸಲಾಗಿದೆ. ನಗರದಲ್ಲಿ ಈ ಹಿಂದೆ 1917ರಲ್ಲಿ ಮಹಾ ಅಧಿವೇಶನ ನಡೆದಿತ್ತು.

ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನು ಕೇಂದ್ರದ ಹಿಂದುಳಿದ ಜಾತಿಗಳ (ಒಬಿಸಿ) ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಅಧಿವೇಶನದ ಕೊನೆಯ ದಿನವಾದ ಭಾನುವಾರ ಕೈಗೊಳ್ಳುವ ಸಾಧ್ಯತೆ ಇದೆ.

ಸಮುದಾಯದ ಹಿತ ಕಾಯುವುದು, ಸಮುದಾಯ ಎದುರಿಸುತ್ತಿರುವ ಬಿಕ್ಕಟ್ಟುಗಳ ಕುರಿತು ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಲು ಈ ಅಧಿವೇಶನವು ‘ಶಕ್ತಿ ಪ್ರದರ್ಶನ’ಕ್ಕೆ ವೇದಿಕೆಯಾಗಲಿದೆ ಎಂದೇ ಹೇಳಲಾಗುತ್ತಿದೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗರುವ ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಶನಿವಾರ 12.30ಕ್ಕೆ ಆರಂಭವಾಗಲಿರುವ ಮಹಾ ಅಧಿವೇಶನವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸುವರು.

‘ಎಸ್‌. ನಿಜಲಿಂಗಪ್ಪ’  ಮುಖ್ಯವೇದಿಕೆ ಹಾಗೂ ಜೆ.ಎಚ್. ಪಟೇಲ್ ವೇದಿಕೆಗಳಲ್ಲಿ ಏಕ ಕಾಲದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, 12 ಜನ ಜಗದ್ಗುರುಗಳು, 400 ಶಿವಾಚಾರ್ಯರು ಸೇರಿದಂತೆ ಸಮುದಾಯದ ಮುಖಂಡರು ಪಕ್ಷಬೇಧವಿಲ್ಲದೇ ಪಾಲ್ಗೊಳ್ಳುತ್ತಿದ್ದಾರೆ. ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ.

ಅಧ್ಯಕ್ಷರ ಮೆರವಣಿಗೆಯ ನಂತರ ಕೃಷಿ ಮತ್ತು ಕೈಗಾರಿಕೆ, ಶೈಕ್ಷಣಿಕ ಗೋಷ್ಠಿಗಳು ನಡೆಯಲಿವೆ. ಭಾನುವಾರ ಧಾರ್ಮಿಕ, ಮಹಿಳಾ ಮತ್ತು ಯುವ ಗೋಷ್ಠಿ, ನೌಕರರ ಹಾಗೂ ಸಾಹಿತಿಗಳ ಗೋಷ್ಠಿಗಳು ನಡೆಯಲಿವೆ.

ಅಧಿವೇಶನದ ವೇದಿಕೆ ಬಳಿ ಅಳವಡಿಸಿರುವ 120 ಮಳಿಗೆಗಳಲ್ಲಿ ಶರಣ ಪರಂಪರೆ, ರೇಣುಕ ಪರಂಪರೆ ಬಿಂಬಿಸುವ ಚಿತ್ರಗಳು, ಕೃಷಿ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನ ನಡೆಯಲಿದೆ. ದಾವಣಗೆರೆ ಬೆಣ್ಣೆದೋಸೆಗೆ ಬ್ರಾಂಡಿಂಗ್ ನೀಡುವ ಉದ್ದೇಶದಿಂದ ಜಿಲ್ಲಾಡಳಿತವು ‘ದೋಸೆ ಉತ್ಸವ’ ಹಮ್ಮಿಕೊಂಡಿದೆ.

ಅಧಿವೇಶನದಲ್ಲಿ ಭಾಗವಹಿಸುವವರಿಗಾಗಿ ರಾಜ್ಯದ ವಿವಿಧೆಡೆಯಿಂದ ಸಾರಿಗೆ ಸಂಸ್ಥೆ ಬಸ್‌, ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಕಲ್ಯಾಣ ಮಂಟಪ, ವಸತಿ ಗೃಹಗಳು, ಹರಿಹರದ ಪಂಚಮಸಾಲಿ ಪೀಠ ಹಾಗೂ ಚಿತ್ರದುರ್ಗದ ಮುರುಘಾ ಮಠ, ಸಿರಿಗೆಯ ತರಳಬಾಳು ಬೃಹನ್ಮಠದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಾ ಅಧಿವೇಶನದ ಅಂಗವಾಗಿ ಸಮುದಾಯದ ಮುಖಂಡರು ಶುಭ ಕೋರಿರುವ ಫ್ಲೆಕ್ಸ್ ಹಾಗೂ ಬಂಟಿಂಗ್ಸ್‌ಗಳು ನಗರದೆಲ್ಲೆಡೆ ರಾರಾಜಿಸುತ್ತಿವೆ.

‘ಸಮಾವೇಶಕ್ಕೆ ಬರುವ ಜನರಿಗೆ ವಿಧವಿಧದ ಭೋಜನ ವ್ಯವಸ್ಥೆಗೂ ಏರ್ಪಾಡು ಮಾಡಲಾಗಿದೆ’ ಎಂದು ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನೆ ಶಿವಕುಮಾರ್ ತಿಳಿಸಿದ್ದಾರೆ.

ಅಖಿಲ ಭಾರತ ವೀರಶೈವ– ಲಿಂಗಾಯತ ಮಹಾಸಭಾದ 24ನೇ ಅಧಿವೇಶನದ ಅಂಗವಾಗಿ ದಾವಣಗೆರೆಯ ಎಂಬಿಎ ಮೈದಾನಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಫ್ಲೆಕ್ಸ್‌ಗಳು ರಾರಾಜಿಸಿದವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.