ADVERTISEMENT

ಹೊನ್ನಾಳಿ | ವಿಲೇವಾರಿಯಾಗದ ಕಸ: ತಪ್ಪದ ಪರದಾಟ

ಎನ್.ಕೆ.ಆಂಜನೇಯ
Published 26 ಜನವರಿ 2025, 5:22 IST
Last Updated 26 ಜನವರಿ 2025, 5:22 IST
ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯ ಎದುರಿನ ಕಸದ ರಾಶಿ ಬಳಿ ಹಂದಿ, ಬೀಡಾಡಿ ದನಗಳ ಹಾವಳಿ
ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯ ಎದುರಿನ ಕಸದ ರಾಶಿ ಬಳಿ ಹಂದಿ, ಬೀಡಾಡಿ ದನಗಳ ಹಾವಳಿ   

ಹೊನ್ನಾಳಿ: ಪಟ್ಟಣದಲ್ಲಿ ಒಂದು ತಿಂಗಳು ಕಳೆದರೂ ಕಸ ವಿಲೇವಾರಿಯಾಗಿಲ್ಲ. ಇದರಿಂದ ಎಲ್ಲೆಲ್ಲೂ ಕಸದ ರಾಶಿ ಬಿದ್ದಿದೆ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಎದುರು, ಅಗ್ನಿಶಾಮಕ ದಳದ ಎದುರಿನ ವಸತಿ ಗೃಹ, ಹಿರೇಕಲ್ಮಠಕ್ಕೆ ಹೋಗುವ ಬಲಭಾಗದ ರಸ್ತೆ , ಮರಳೋಣೆ ರಸ್ತೆ, ಸರ್ಕಾರಿ ಬಸ್ ನಿಲ್ದಾಣದ ಎಡಭಾಗ, ಎಸ್‍ಬಿಎಂ ಎದುರು.. ಹೀಗೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಪೇಪರ್ ಸೇರಿದಂತೆ ಇತರೆ ತ್ಯಾಜ್ಯ ತುಂಬಿ ತುಳುಕುತ್ತಿದೆ. ಕಸದ ರಾಶಿ  ಚರಂಡಿಗೆ ಬಿದ್ದು, ನೀರು ನಿಂತು ದುರ್ವಾಸನೆ ಹೆಚ್ಚಿದೆ. ಇದರಿಂದ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ಪುರಸಭೆಯಿಂದ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳ ಮೇಲೆ ಒಂದೆರಡು ಬಾರಿ ದಾಳಿ ಮಾಡಿದ್ದು ಬಿಟ್ಟರೆ ಮತ್ತೆ ದಾಳಿ ಮಾಡಿಲ್ಲ. ಪ್ಲಾಸ್ಟಿಕ್ ಮಾರದಂತೆ ಎಚ್ಚರಿಕೆ ಕೊಡುತ್ತಿದೆಯಾದರೂ ಅದು ಪರಿಣಾಮಕಾರಿಯಾಗಿಲ್ಲ. ಪ್ಲಾಸ್ಟಿಕ್ ತ್ಯಾಜ್ಯವೇ ಬೀದಿಗಳಲ್ಲಿ ರಾಶಿ ಬಿದ್ದಿದೆ.

ADVERTISEMENT

ಇನ್ನೂ ಕಸ ವಿಲೇವಾರಿ ಮಾಡಬೇಕಾದ ಪುರಸಭೆಯ ವಾಹನಗಳು 8 ಕಿ.ಮೀ ದೂರದ ಮಾಸಡಿ ಘನತ್ಯಾಜ್ಯ ಸಂಗ್ರಹ ಘಟಕಕ್ಕೆ ಒಂದೆರಡು ಬಾರಿ ಹೋಗಿ ಹಾಕಿ ಬರುವಷ್ಟರಲ್ಲಿಯೇ ಆ ದಿನ ಮುಗಿದು ಹೋಗುತ್ತದೆ. ಹೀಗಾಗಿ ಕಸದ ರಾಶಿ ಹೆಚ್ಚಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ವಿನಯ್ ವಗ್ಗರ್ ದೂರಿದರು.

‘ಸರ್ಕಾರಿ ಬಸ್ ನಿಲ್ದಾಣದ ಕೊನೆಯ ತುದಿಯಲ್ಲಿ ಕಸವನ್ನು ಎಸೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕುತ್ತಿಲ್ಲ. ಅಧ್ಯಕ್ಷರು, ಮುಖ್ಯಾಧಿಕಾರಿಗಳನ್ನು ಈ ಬಗ್ಗೆ ಕೇಳಿದರೆ ಹೊಸದಾಗಿ ಟ್ರ್ಯಾಕ್ಟರ್ ಖರೀದಿಸಿದ್ದು ಬಂದ ತಕ್ಷಣವೇ ಕಸವನ್ನು ವಿಲೇವಾರಿ ಮಾಡುತ್ತೇವೆ ಎನ್ನುತ್ತಾರೆ. ಆದರೆ ತಿಂಗಳು ಕಳೆದರೂ ವಿಲೇವಾರಿಯಾಗಿಲ್ಲ’ ಎಂದು ಅವರು ಆರೋಪಿಸಿದರು.

‘ಪಟ್ಟಣದಲ್ಲಿ ಕಸವನ್ನು ಸಮರ್ಪಕವಾಗಿ ತೆರವುಗೊಳಿಸುತ್ತಿಲ್ಲ. ಕಸದ ರಾಶಿ ಬಳಿ ದನಗಳು, ಹಂದಿಗಳು, ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ತುಂಗಾ ಕಾಲುವೆ ಬದಿ ಕಸದ ರಾಶಿಯೇ ಇದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು‘ ಎಂದು ಸ್ಥಳೀಯರಾದ ಪ್ರೇಮಕುಮಾರ್‌ ಆಗ್ರಹಿಸಿದರು.

ಎರಡು ಹೊಸ ಟ್ರ್ಯಾಕ್ಟರ್‌ಗಳನ್ನು ಖರೀದಿ ಮಾಡಿದ್ದು ಎರಡು ದಿನಗಳಲ್ಲಿ ಪಟ್ಟಣದಲ್ಲಿನ ತ್ಯಾಜ್ಯ ತೆರವುಗೊಳಿಸಲಾಗುವುದು. ಕಸ ಎಲ್ಲೆಂದರಲ್ಲಿ ಎಸೆಯದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗುವುದು
-ಮೈಲಪ್ಪ, ಅಧ್ಯಕ್ಷ ಪುರಸಭೆ
ಹಿರೇಕಲ್ಮಠದಿಂದ ದುರ್ಗಿಗುಡಿ ಹೋಗುವ ರಸ್ತೆ ಮಾರ್ಗದಲ್ಲಿ ಬಿದ್ದಿರುವ ಕಸದ ರಾಶಿ
ಪಿಎಲ್‍ಡಿ ಬ್ಯಾಂಕ್ ಬಲಭಾಗದಲ್ಲಿ ಬಿದ್ದಿರುವ ಕಸದ ರಾಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.