ADVERTISEMENT

ಕೇಂದ್ರ ಸರ್ಕಾರದಿಂದ ಚನ್ನಮ್ಮ ವಿಜಯೋತ್ಸವ ಆಚರಣೆ: ವಿ.ಸೋಮಣ್ಣ

ಹರ ಜಾತ್ರೆಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 11:28 IST
Last Updated 15 ಜನವರಿ 2026, 11:28 IST
   

ಹರಿಹರ (ದಾವಣಗೆರೆ): ಆಂಗ್ಲೊ–ಕಿತ್ತೂರು ಯುದ್ಧದಲ್ಲಿ ರಾಣಿ ಚನ್ನಮ್ಮ ದಾಖಲಿಸಿದ ಜಯದ ವಿಜಯೋತ್ಸವವನ್ನು ಮುಂದಿನ ವರ್ಷದಿಂದ ಕೇಂದ್ರ ಸರ್ಕಾರದ ವತಿಯಿಂದ ಆಚರಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಗುರುವಾರ ಆಯೋಜಿಸಿದ್ದ ಹರ ಜಾತ್ರೆ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವದ ದ್ವಿಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಯನ್ನು ಸಂಸತ್ತಿನ ಆವರಣದಲ್ಲಿ ಸ್ಥಾಪಿಸಲಾಗಿದೆ. ವಿಜಯೋತ್ಸವದ ದಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಗಿದೆ. ಮುಂದಿನ ವರ್ಷದಿಂದ ಈ ವಿಜಯೋತ್ಸವವನ್ನು ಕೇಂದ್ರ ಸರ್ಕಾರದ ವತಿಯಿಂದಲೇ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಚರ್ಚಿಸುವೆ’ ಎಂದು ಭರವಸೆ ನೀಡಿದರು.

ADVERTISEMENT

‘ವೀರರಾಣಿ ಕಿತ್ತೂರು ಚನ್ನಮ್ಮನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಅವರು ಪಂಚಮಸಾಲಿ ಸಮುದಾಯಕ್ಕೆ ಮಾತ್ರವಲ್ಲ, ಸರ್ವ ಕನ್ನಡಿಗರಿಗೆ ಸ್ಫೂರ್ತಿಯ ಚಿಲುಮೆ’ ಎಂದು ಹೇಳಿದರು.

‘ರಾಜ್ಯದಲ್ಲಿ 25 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ₹ 49,000 ಕೋಟಿ ವೆಚ್ಚದ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ದಾವಣಗೆರೆ–ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗ ಸೇರಿ ಹಲವು ಯೋಜನೆಗಳು ಸಾಕಾರಗೊಳ್ಳಲಿವೆ. ಪ್ರಧಾನಿ ನರೇಂದ್ರ ಮೋದಿ ಸಾರಥ್ಯದಲ್ಲಿ ದೇಶ ಸಂಪದ್ಭರಿತವಾಗಲಿವೆ. ವಿಶ್ವದ ಆರ್ಥಿಕತೆಯಲ್ಲಿ 4ನೇ ಸ್ಥಾನದಲ್ಲಿರುವ ಭಾರತ ಮೊದಲ ಸ್ಥಾನಕ್ಕೆ ಏರಲಿದೆ’ ಎಂದರು.

ಹಿಂದೂವೇ ನಮ್ಮ ಧರ್ಮ:

ವೀರಶೈವ ಲಿಂಗಾಯತ ಪಂಚಮಸಾಲಿ ಹರಿಹರದ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ, ‘ವೀರಶೈವ ಲಿಂಗಾಯತಕ್ಕೆ ಸ್ವಾತಂತ್ರ್ಯ ಧರ್ಮ ಸ್ಥಾನ ಸಿಗುವವರೆಗೂ ಹಿಂದೂವೇ ನಮ್ಮ ಧರ್ಮ. ಜಾತಿ ಗಣತಿ ಸಂದರ್ಭದಲ್ಲಿ ಸ್ಪಷ್ಟ ನಿಲುವು ತಳೆದು ಸಮುದಾಯಕ್ಕೆ ಮಾರ್ಗದರ್ಶನ ನೀಡಲಾಗಿದೆ. ಈ ನಿಲುವಿಗೆ ಸದಾ ಬದ್ಧವಾಗಿರೋಣ’ ಎಂದಾಗ ಭಕ್ತರು ಚಪ್ಪಾಳೆ ತಟ್ಟಿದರು.

‘ಪ್ರತಿ ವರ್ಷದ ಮಕರ ಸಂಕ್ರಾಂತಿಗೆ ಹರಜಾತ್ರಾ ಮಹೋತ್ಸವ ಆಯೋಜಿಸಲು ತೀರ್ಮಾನಿಸಲಾಗಿದೆ. ಭಕ್ತರಿಗಾಗಿ ಈ ಜಾತ್ರೆಯನ್ನು ನಡೆಸಲಾಗುತ್ತಿದೆ. ಮಠ–ಪೀಠ ಚೆನ್ನಾಗಿ ನಡೆಯುತ್ತಿದೆ. ಇಡೀ ರಾಜ್ಯವನ್ನು ಮೂರು ಬಾರಿ ಸಂಚಾರಿಸಿ ಸಮುದಾಯದ ಸಂಘಟನೆಗೆ, ಧರ್ಮದ ಒಳಿತಿಗೆ ಪ್ರಯತ್ನಿಸಿದ್ದೇವೆ. ಮಠ–ಪೀಠದ ಏಳಿಗೆಗೆ ರಾಜಕೀಯ ಪಕ್ಷದ ಮುಖಂಡರು ಸಹಕಾರಿಸಿದ್ದಾರೆ’ ಎಂದು ಹೇಳಿದರು.

‘ಮಠದ ದಾಸೋಹಕ್ಕೆ ಈವರೆಗೆ ಭಕ್ತರು ₹ 1.65 ಕೋಟಿ ನೆರವು ನೀಡಿದ್ದಾರೆ. ಇದರಲ್ಲಿ ₹ 50 ಲಕ್ಷವನ್ನು ಬಸವರಾಜ ಬೊಮ್ಮಾಯಿ, ₹ 25 ಲಕ್ಷವನ್ನು ಎಸ್‌.ಎಸ್‌. ಮಲ್ಲಿಕಾರ್ಜುನ್‌ ಕೊಟ್ಟಿದ್ದಾರೆ. ಇದು ಒಬ್ಬ ವ್ಯಕ್ತಿಯಿಂದಲ್ಲ ಭಕ್ತರಿಂದ ನಡೆಯುತ್ತಿದೆ. ಹರ ದೇಗುಲ ನಿರ್ಮಿಸಿಕೊಟ್ಟವರು ಶಾಮನೂರು ಶಿವಶಂಕರಪ್ಪ, ಮಠಕ್ಕೆ ನೀರು ಬರಲು ಕಾರಣರಾದವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌. ಸಿರಿಗೆರೆ ತರಳಬಾಳು ಮಠದ ರೀತಿಯಲ್ಲಿ ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಲಾಗಿದೆ’ ಎಂದರು.

ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಸಂಗನಬಸಪ್ಪ ಶಿವಾಚಾರ್ಯ ಸ್ವಾಮೀಜಿ ಹಾಜರಿದ್ದರು. ಹಾವೇರಿಯ ‘ಉತ್ಸವ’ ರಾಕ್‌ ಗಾರ್ಡನ್‌ ಕಲಾ ನಿರ್ದೇಶಕಿ ಡಾ.ವೇದಾರಾಣಿ ದಾಸನೂರು ಅವರಿಗೆ ಕಿತ್ತೂರು ರಾಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜ್ಯಸಭಾ ಸದಸ್ಯ ವೀರಣ್ಣ ಕಡಾಡಿ, ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ, ಪಂಚಮಸಾಲಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಮಾಲಿಪಾಟೀಲ, ಶಾಸಕರಾದ ಕೆ.ಎಸ್‌. ಬಸವಂತಪ್ಪ, ಡಿ.ಜಿ. ಶಾಂತನಗೌಡ, ಯಾಸೀರ್‌ ಖಾನ್‌ ಪಠಾಣ್‌, ಪ್ರಕಾಶ ಕೋಳಿವಾಡ, ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್‌, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಬಸವರಾಜ ವೀರಾಪುರ, ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ರೈತ ಮುಖಂಡ ತೇಜಸ್ವಿ ಪಟೇಲ್‌, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಬಂಗಾರು ಹನಮಂತು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ರಾಜಶೇಖರ್‌ ಹಾಜರಿದ್ದರು.

‘ಪೀಠಗಳ ನಡುವೆ ದ್ವೇಷವಿಲ್ಲ’

‘ಕೂಡಲಸಂಗಮ ಹಾಗೂ ಹರಿಹರ ಪಂಚಮಸಾಲಿ ಪೀಠ ಎರಡೂ ಒಂದೇ. ಎರಡು ಪೀಠ ಹಾಗೂ ಪೀಠಾಧ್ಯಕ್ಷರ ನಡುವೆ ದ್ವೇಷ ಇಲ್ಲ. ಕೂಡಲಸಂಗಮದ ಪೀಠಾಧ್ಯಕ್ಷರು ಸಮುದಾಯ ಸಂಘಟನೆ ಮಾಡಿದ್ದಾರೆ. ಅವರು ಕೂಡ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ’ ಎಂದು ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

‘ದ್ವೇಷದಿಂದ ಒಬ್ಬರನ್ನು ಗೆಲ್ಲುವ ಬದಲು ಪ್ರೀತಿಯಿಂದ ಎಲ್ಲರನ್ನೂ ಗೆಲ್ಲೋಣ. ಈವರೆಗೆ ಎದುರಾದ ಟೀಕೆ, ನಿಂದನೆಗೆ ಬೇಸರ ಮಾಡಿಕೊಂಡಿಲ್ಲ. ಟೀಕೆ ಮಾಡಿದ ಎಲ್ಲರನ್ನೂ ನಾನು ಕ್ಷಮಿಸಿದ್ದೇನೆ. ಹರಿಹರ ಪೀಠಕ್ಕೆ ಎಲ್ಲರಿಗೂ ಮುಕ್ತ ಆಹ್ವಾನವಿದೆ’ ಎಂದು ಹೇಳಿದಾಗ ಭಕ್ತರು ಚಪ್ಪಾಳೆ ತಟ್ಟಿ ಸಹಮತ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.