ಹುಬ್ಬಳ್ಳಿ: ಭವ್ಯ ಇತಿಹಾಸ ಸಾರುವ ಅನೇಕ ದೇವಾಲಯಗಳನ್ನು ತನ್ನೊಡಲಲ್ಲಿ ಹೊತ್ತ ಧಾರವಾಡ ಜಿಲ್ಲೆಗೆ ಅಣ್ಣಿಗೇರಿಯ ಅಮೃತೇಶ್ವರ ದೇವಾಲಯ ಪರಂಪರೆಯ ಮತ್ತೊಂದು ಗರಿ ಹೆಚ್ಚಿಸುತ್ತದೆ.
ಅಣ್ಣಿಗೇರಿಯ ಅಮೃತೇಶ್ವರ ದೇವಾಲಯ ಕಲ್ಯಾಣಿ ಚಾಲುಕ್ಯರ ರಾಜ ಒಂದನೇ ಸೋಮೇಶ್ವರನ ಕೊಡುಗೆ. ನಾಲ್ಕನೇ ಸೋಮೇಶ್ವರನ ರಾಜಧಾನಿ ಆಗಿತ್ತು. ಅಣ್ಣಿಗೇರಿ ಹೊಯ್ಸಳ, ಯಾದವರ ಆಳ್ವಿಕೆಗೂ ಒಳಪಟ್ಟಿತ್ತು ಎಂದು ದಾಖಲೆಗಳು ಹೇಳುತ್ತವೆ.
ಕ್ರಿ.ಶ 1050ರಲ್ಲಿ ನಿರ್ಮಿತ ಈ ದೇವಾಲಯ ದ್ರಾವಿಡ ಶೈಲಿಯಲ್ಲಿದ್ದು, ಕಪ್ಪು ಶಿಲೆಯಿಂದ ಕೂಡಿದೆ. ದೇವಾಲಯ ಪೂರ್ವಾಭಿಮುಖವಾಗಿದ್ದು, ಉತ್ತಮ ಮುಖಮಂಟಪ, ಮಹಾಮಂಟಪ, ಒಳಮಂಟಪ, ಭವ್ಯ ದ್ವಾರಮಂಟಪ ಹೊಂದಿದೆ, ಕಲಾ ಶ್ರೀಮಂತಿಕೆ ಇದೆ. 76 ಕಂಬಗಳಿವೆ. ಗೋಡೆಗಳು ಪೌರಾಣಿಕ ಚಿತ್ರಗಳಿಂದ ಅಲಂಕರಿಸಿವೆ.
ದೇವರ ವಿವಿಧ ಭಂಗಿಗಳು, ನರ್ತಕಿಯರು, ನಾಗ- ನಾಗಿಣಿ, ಗಜ, ಸಿಂಹ, ಗಂಧರ್ವ ಕನ್ಯೆ, ಸ್ತ್ರಿ– ಪುರುಷರ ಜೋಡಿ, ಸೂಕ್ಷ್ಮ ಕೆತ್ತನೆಯ ಜಾಲಾಂಧ್ರಗಳಿವೆ. ಶಿವನ ಹನ್ನೊಂದು ಭಂಗಿಯ ಮೂರ್ತಿಗಳಿವೆ. ರಾಜ್ಯ ಲಾಂಛನ ಗಂಡಬೇರುಂಡನ ಚಿತ್ರವನ್ನೂ ಇಲ್ಲಿ ಕಾಣಬಹುದು. ಸುಮಾರು 25ಕ್ಕೂ ಅಧಿಕ ಶಾಸನಗಳು ಇಲ್ಲಿ ಸಿಕ್ಕಿವೆ.
ಗರ್ಭಗೃಹ ಚೌಕಾಕಾರವಾಗಿದ್ದು, ಮಧ್ಯಭಾಗದಲ್ಲಿ ಶಿವ ವಿರಾಜನಾಗಿದ್ದಾನೆ. ಗರ್ಭಗುಡಿಗೆ ಅಭಿಮುಖವಾಗಿ ನಂದಿ ವಿಗ್ರಹವಿದೆ. ದೇವಾಲಯದಲ್ಲಿ ಗಣೇಶ, ಪಾರ್ವತಿಯರ ಪ್ರತಿಷ್ಠಾಪನೆಯೂ ಇದೆ.
‘ಈ ಜಾಗದಲ್ಲಿ ಶಿವ ಲಿಂಗದೇವನಾಗಿ ಹುದುಗಿದ್ದ, ಐದು ಕಾಮದೇನುಗಳು ನಿತ್ಯ ಶಿವನಿಗೆ ಹಾಲುಣಿಸುತ್ತಿದ್ದವು. ವರ್ಷಗಳ ನಂತರ ಬ್ರಹ್ಮ ಸಮಸ್ತ ದೇವತೆಗಳೊಂದಿಗೆ ಇಲ್ಲಿಗೆ ಬಂದು ಶಿವಾರಾಧನೆ ಮಾಡಿದಾಗ, ಭೂಮಿಯಿಂದ ಲಿಂಗ ಹೊರಹೊಮ್ಮಿತು. ಆಗ ಲಿಂಗ ಪ್ರತಿಷ್ಠಾಪಿಸಲಾಯಿತು ಎಂಬ ಪೌರಾಣಿಕ ಕಥೆಯೂ ಇದೆ.
ಪುರಾತತ್ವ ಮತ್ತು ಪ್ರಾಚ್ಯ ಸಂಶೋಧನಾ ಇಲಾಖೆಯು ದೇವಸ್ಥಾನವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದ್ದು, ನಿರ್ವಹಣೆಯ ಹೊಣೆ ಹೊತ್ತಿದೆ. ಅಂದ ಹಾಗೆ, ಅಣ್ಣಿಗೇರಿ ನಮ್ಮ ಪಂಪನ ಹುಟ್ಟೂರು ಎಂಬ ಹೆಮ್ಮೆಯೂ ಇದೆ.
ಮೊದಲನೇ ಸೋಮೇಶ್ವರನು ಆಳುವಾಗ ಚೋಳರು ಈ ದೇವಾಲಯವನ್ನು ದ್ವಂಸ ಅಥವಾ ಸುಟ್ಟು ಹಾಕಿದ ಕಾರಣ ಚೋಳಗೊಂಡ ತ್ರೈಪುರುಷ ದೇವಾಲಯವೆಂದು ಶಾಸನದಲ್ಲಿ ಉಲ್ಲೇಖವಿದೆ.ಆರ್.ಎಂ. ಷಡಕ್ಷರಯ್ಯ ನಿವೃತ್ತ ಪ್ರಾಧ್ಯಾಪಕ ಇತಿಹಾಸ ವಿಭಾಗ ಕವಿವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.