ಹುಬ್ಬಳ್ಳಿಯ ದೇಶಪಾಂಡೆ ನಗರದ ಜಿಮ್ಖಾನ್ ಮೈದಾನದಲ್ಲಿ ಯೋಗಾಸಕ್ತರು ಯೋಗ ಮಾಡುವ ಮೂಲಕ ವಿಶ್ವ ಯೋಗ ದಿನ ಆಚರಿಸಿದರು.
ಹುಬ್ಬಳ್ಳಿ: ’ನಿತ್ಯ ಯೋಗ ಮಾಡುವುದರಿಂದ ರೋಗಗಳು ನಿವಾರಣೆಯಾಗಿ ಆರೋಗ್ಯ ವೃದ್ಧಿಯಾಗುತ್ತದೆ. ಯೋಗ ಕಲಿಕೆ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ನಿತ್ಯ ಬದುಕಿನ ಭಾಗವಾಗಬೇಕು‘ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಇಲ್ಲಿನ ದೇಶಪಾಂಡೆ ನಗರದಲ್ಲಿನ ಜಿಮ್ಖಾನ್ ಮೈದಾನದಲ್ಲಿ ಕ್ಷಮತಾ ಸೇವಾ ಸಂಸ್ಥೆ ಹಾಗೂ ಧನ್ಯೋಸ್ಮಿ ಯೋಗ ಕೇಂದ್ರದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
’ಯುವಸಮೂಹವು ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಮಾಡದೇ ಭಾರತೀಯ ಸಂಸ್ಕೃತಿಯ ಭಾಗವಾಗಿರುವ ಯೋಗವನ್ನು ನಿತ್ಯ ಅಭ್ಯಾಸ ಮಾಡಬೇಕು. ಇಂದು ವಿಶ್ವದ ಎಲ್ಲೆಡೆ ಯೋಗ ದಿನ ಆಚರಿಸಲಾಗುತ್ತಿದೆ. ಯೋಧರೂ ಸಹ ಯೋಗ ಮಾಡುವ ಮೂಲಕ ಯೋಗ ದಿನ ಆಚರಿಸುತ್ತಿದ್ದಾರೆ‘ ಎಂದರು.
ಡಾ.ಅನಿರುದ್ಧ ಕುಲಕರ್ಣಿ ಅವರು, ಯೋಗ ಕುರಿತು ಮಾತನಾಡಿದರು.
ಇದೇ ವೇಳೆ ಯೋಗ ಶಿಬಿರದಲ್ಲಿ ಭಾಗವಹಿಸಿದವರಿಗೆ ಕ್ಷಮತಾ ಸೇವಾ ಸಂಸ್ಥೆಯ ವತಿಯಿಂದ ಸಂಚಾಲಕ ಗೋವಿಂದ ಜೋಶಿ ಅವರು, ಪ್ರಮಾಣಪತ್ರಗಳನ್ನು ವಿತರಿಸಿದರು.
ನಗರದ ತೋಳನಕೆರೆ, ನೃಪತುಂಗ ಬೆಟ್ಟ, ಇಂದಿರಾ ಗಾಜಿನ ಮನೆ, ಪತಾಂಜಲಿ ಯೋಗ ಕೇಂದ್ರ, ಜೈನ್ ಮಂದಿರ, ಮೂರುಸಾವಿರ ಮಠ, ಸಿದ್ಧಾರೂಢ ಮಠ ಸೇರಿದಂತೆ ನಗರದ ಹಲವೆಡೆ ನೂರಾರು ಯೋಗಾಸಕ್ತರು ಯೋಗ ಕಲಿಯುವ ಮೂಲಕ ವಿಶ್ವ ಯೋಗ ದಿನ ಆಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.