ADVERTISEMENT

ಸುರ್ಜೇವಾಲಾ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಚಿಂತನೆ: ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 7:56 IST
Last Updated 20 ಜನವರಿ 2024, 7:56 IST
ಸಚಿವ ಪ್ರಲ್ಹಾದ ಜೋಶಿ
ಸಚಿವ ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: 'ಇಲ್ಲಿನ ಎಂ.ಟಿ.ಎಸ್ ಕಾಲೊನಿಯಲ್ಲಿರುವ ರೈಲ್ವೆ ಇಲಾಖೆಯ ಜಾಗವನ್ನು ಹರಾಜು ಹಾಕುವುದರಲ್ಲಿ ನನ್ನ ಕೈವಾಡವಿದೆ ಎಂದು ಕಾಂಗ್ರೆಸ್ ಮುಖಂಡ ರಣದೀಪ್‌ ಸಿಂಗ್‌ ಸುರ್ಜೇವಾಲಾ ಆರೋಪಿಸಿರುವುದು ಅಪ್ಪಟ ಬಾಲಿಶತನದ ಹೇಳಿಕೆ. ತಮ್ಮ ಹೇಳಿಕೆಗೆ ಸೂಕ್ತ ಪುರಾವೆ ನೀಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

'ರೈಲ್ವೆ ಇಲಾಖೆಯ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಸುರ್ಜೇವಾಲಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೂ ಹೇಳಿದ್ದೇನೆ' ಎಂದು ನುಡಿದರು.

ADVERTISEMENT

ತಮ್ಮ ಬಳಿಯಿರುವ ಜಾಗ ಅನುಪಯುಕ್ತವಾಗಿದ್ದರೆ ಅದನ್ನು ಗುತ್ತಿಗೆ ಆಧಾರದ ಮೇಲೆ ನೀಡಲು ರೈಲ್ವೆ ನಿಯಮಾವಳಿಗಳಲ್ಲಿ ಅವಕಾಶವಿದೆ. 13 ಎಕರೆ ಇರುವ ಈ ಜಾಗವನ್ನು ವಾಣಿಜ್ಯ ಉದ್ದೇಶಕ್ಕಾಗಿ ಹಾಗೂ ವಸತಿ ಸೌಲಭ್ಯ ಕಲ್ಪಿಸುವುದಕ್ಕಾಗಿ ಬಳಸಲು ₹ 83 ಕೋಟಿ ಕನಿಷ್ಠ ದರ ನಿಗದಿ ಮಾಡಿ ಟೆಂಡರ್ ಕರೆಯಲಾಗಿದೆ. ಇದಕ್ಕೂ ಮುಂಚೆ 5 ಸಲ ಟೆಂಡರ್ ಕರೆದಾಗ ಯಾರೊಬ್ಬರೂ ಜಾಗ ಪಡೆಯಲು ಮುಂದೆ ಬಂದಿಲ್ಲ ಎಂದು ವಿವರಿಸಿದರು.

ಈ ಜಾಗದಲ್ಲಿ ಇದ್ದ ಮನೆಗಳನ್ನು 6-7 ವರ್ಷಗಳ ಹಿಂದೆಯೇ ತೆರವುಗೊಳಿಸಲಾಗಿದೆ. ಇದನ್ನು ಹಾಗೆಯೇ ಬಿಟ್ಟರೆ ಯಾರಾದರೂ ಅತಿಕ್ರಮಣ ಮಾಡಿಕೊಳ್ಳುವ ಸಾಧ್ಯತೆ ಇದೆ. ಅದಕ್ಕಾಗಿ ಜಾಗವನ್ನು ಗುತ್ತಿಗೆಗೆ ನೀಡಲು ನಿರ್ಧರಿಸಲಾಗಿದೆ ಎಂದರು.

ಕಾಂಗ್ರೆಸ್‌ನವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ನೋಡಿದರೆ ಈ ಜಾಗದ ಮೇಲೆ ಅವರ ಕಣ್ಣು ಬಿದ್ದಿರುವ ಸಂಶಯವಿದೆ ಎಂದು ಆರೋಪಿಸಿದರು.

ಈ ಹರಾಜು ಪ್ರಕ್ರಿಯೆ ಆನ್‌ಲೈನ್‌ನಲ್ಲಿದ್ದು, ಯಾರು ಬೇಕಾದವರೂ ಪಾಲ್ಗೊಳ್ಳಬಹುದು. ಜಾಗಕ್ಕೆ ನಿಗದಿಪಡಿಸಿರುವ ದರ ₹ 83 ಕೋಟಿ ಕಡಿಮೆ ಎಂದಾದರೆ ಕಾಂಗ್ರೆಸ್ ನವರೆ ₹150 ಕೋಟಿ, ₹200 ಕೋಟಿ ನೀಡಿ ಜಾಗ ಪಡೆದುಕೊಳ್ಳಲಿ, ಬೇಡ ಎಂದವರಾರು? ಎಂದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.