ADVERTISEMENT

ರೋಣ | ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ: ಮುಸ್ಲಿಂ ಯುವಕರಿಂದಲೇ ಪೂಜೆ

* ಭಾವೈಕ್ಯ ಮರೆದ ಸಂದಿಗವಾಡ ಗ್ರಾಮ

ಪ್ರಜಾವಾಣಿ ವಿಶೇಷ
Published 31 ಆಗಸ್ಟ್ 2025, 23:30 IST
Last Updated 31 ಆಗಸ್ಟ್ 2025, 23:30 IST
ಸಂದಿಗವಾಡ ಗ್ರಾಮದ ಮಸೀದಿಯಲ್ಲಿ ಗಣೇಶನ ಪೂಜೆಯಲ್ಲಿ ನಿರತ ಮುಸ್ಲಿಂ ಯುವಕರು
ಸಂದಿಗವಾಡ ಗ್ರಾಮದ ಮಸೀದಿಯಲ್ಲಿ ಗಣೇಶನ ಪೂಜೆಯಲ್ಲಿ ನಿರತ ಮುಸ್ಲಿಂ ಯುವಕರು   

ರೋಣ (ಗದಗ ಜಿಲ್ಲೆ): ತಾಲ್ಲೂಕಿನ ಸಂದಿಗವಾಡ ಗ್ರಾಮದಲ್ಲಿ ಮಸೀದಿಯಲ್ಲಿಯೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, ನಿತ್ಯವೂ ಮುಸ್ಲಿಂ ಯುವಕರೇ ಮೂರ್ತಿ ಪೂಜೆ ನಡೆಸುವ ಮೂಲಕ ಗಮನಸೆಳೆದಿದ್ದಾರೆ.

‘ಗ್ರಾಮದಲ್ಲಿ ಹಬ್ಬ, ಜಾತ್ರೆ, ಉತ್ಸವಗಳ ಆಚರಣೆಗೆ ಜಾತಿ ಭೇದವಿಲ್ಲ. ಇಡೀ ಗ್ರಾಮ ಒಗ್ಗಟ್ಟಿನಿಂದ ಇದ್ದು, ಒಂದೇ ಮನೆಯವರಂತೆ ಬದುಕುತ್ತಿದ್ದೇವೆ’ ಎನ್ನುತ್ತಾರೆ ಗ್ರಾಮಸ್ಥರು.

ಗಣೇಶ ಚತುರ್ಥಿಯಂದು ಅದ್ದೂರಿ ಮೆರವಣಿಗೆಯಲ್ಲಿ ಮುಸ್ಲಿಂ ಯುವಕರೇ ಗಣೇಶನ ಮೂರ್ತಿ ತಂದು ಮಸೀದಿಯಲ್ಲಿ ಪ್ರತಿಷ್ಠಾಪಿಸಿದ್ದಾರೆ. ಮುಸ್ಲಿಂ ಯುವಕರೇ ನಿತ್ಯವೂ ಅವರೇ ಪೂಜೆ, ಪ್ರಾರ್ಥನೆ ಮಾಡುವುದು ವಿಶೇಷ‌. ಗಣೇಶ ಸ್ತೋತ್ರಗಳನ್ನು ನಿರರ್ಗಳವಾಗಿ ಹೇಳುತ್ತಾರೆ.

ADVERTISEMENT

ಮುಸ್ಲಿಂ ಯುವಕರ ಜೊತೆಗೆ ಹಿಂದೂ ಯುವಕರು, ಹಿರಿಯರು ಗಣೇಶ ಪೂಜೆಯಲ್ಲಿ ಪಾಲ್ಗೊಳ್ಳುವ ಮೂಲಕ ಭಾವೈಕ್ಯತೆಯಿಂದ ಹಬ್ಬ ಆಚರಿಸುತ್ತಾರೆ. 

‘ಕಳೆದ 3 ವರ್ಷದಿಂದ ಗ್ರಾಮದ ಮಸೀದಿಯಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಇದಕ್ಕೆ ಯಾರದ್ದು ವಿರೋಧವಿಲ್ಲ. ಇದು ಸೌಹಾರ್ದಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ’ ಗ್ರಾಮಸ್ಥರು.

ಕೇವಲ ಗಣೇಶೋತ್ಸವ ಮಾತ್ರವಲ್ಲ ಶ್ರಾವಣ ಮಾಸದಲ್ಲಿ ಜರುಗುವ ಭಜನೆಯಲ್ಲಿ ರಾಜೇಸಾಬ ಗಂಗೂರ ಎಂಬುವ ಮುಸ್ಲಿಂ ಯುವಕ ತಬಲಾ ಬಾರಿಸುತ್ತಾ ಭಕ್ತಿ ಗೀತೆಗಳನ್ನು ಹಾಡುತ್ತಾನೆ.

ದೀಪಾವಳಿ, ದಸರಾ, ಯುಗಾದಿ, ಮೊಹರಂ, ರಂಜಾನ್, ಈದ್‌ ಮಿಲಾದ್‌, ಗಣೇಶ ಹಬ್ಬ ಹೀಗೆ ಗ್ರಾಮದಲ್ಲಿ ಜರುಗುವ ಪ್ರತಿಯೊಂದು ಹಬ್ಬ ಹರಿದಿನ, ಜಾತ್ರೆ, ಉತ್ಸವಗಳನ್ನು ಯಾವುದೇ ಜಾತಿ ಭೇದವಿಲ್ಲದೇ ಎಲ್ಲರೂ ಪಾಲ್ಗೊಳ್ಳುತ್ತಾರೆ. 

‘ಗ್ರಾಮದಲ್ಲಿಎಲ್ಲ ಹಬ್ಬಗಳನ್ನು ಭಾವೈಕ್ಯದಿಂದ ಆಚರಿಸುತ್ತೇವೆ‘ ಎನ್ನುತ್ತಾರೆ ಮುಸ್ಲಿಂ ಯುವಕರಾದ ಮುನ್ನಾ ನದಾಫ, ಹಸನ್‌ಸಾಬ ನದಾಫ, ದಾವಲಸಾಬ ನದಾಫ, ಲಾಡಸಾಬ ನದಾಫ.

ಮೂರ್ತಿ ಪ್ರತಿಷ್ಠಾಪಿಸಿರುವ ಮಸೀದಿಗೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ರೋಣ ಸಿಪಿಐ ಎಸ್.ಎಸ್.ಬೀಳಗಿ, ರೋಣ ಠಾಣೆ ಪಿಎಸ್ಐ ಪ್ರಕಾಶ ಬಣಕಾರ ಕೂಡ ಭೇಟಿ ನೀಡಿದ್ದು ಗ್ರಾಮದ ಕೋಮು ಸೌಹಾರ್ದದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಮಸೀದಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮತ್ತು ಸಿಬ್ಬಂದಿ
ನಮ್ಮ ಗ್ರಾಮದಲ್ಲಿ ಜಾತಿ ಧರ್ಮದ ಭೇದವಿಲ್ಲ. ಎಲ್ಲ ಹಬ್ಬಗಳನ್ನು ಹಿಂದೂ ಮುಸ್ಲಿಮರು ಸೇರಿ ಆಚರಿಸುತ್ತೇವೆ. ಇದಕ್ಕೆ ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾದರಿಯಾಗಿದೆ.
-ತಿಪ್ಪನಗೌಡ ಹುಲ್ಲೂರ, ಸಂದಿಗವಾಡ ಗ್ರಾಮದ ಯುವಕ
ಮಸೀದಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಪೂಜೆಗೆ ಗ್ರಾಮಸ್ಥರೆಲ್ಲರ ಸಹಕಾರವಿದೆ. ನಿತ್ಯವೂ ಗಣೇಶ ಪೂಜೆಯನ್ನು ನಾವೇ ಮಾಡುತ್ತೆವೆ. ಪೂಜೆಯಲ್ಲಿ ಗ್ರಾಮದ ಎಲ್ಲರೂ ಪಾಲ್ಗೊಳ್ಳುತ್ತಾರೆ.
-ಲಾಡಸಾಬ ನದಾಫ ಮುನ್ನಾ ನಧಾಪ ಸಂದಿಗವಾಡ ಗ್ರಾಮದ ಮುಸ್ಲಿಂ ಯುವಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.