ಹಾಸನ: ಸಾಮಾಜಿಕ ಕಾರ್ಯಕರ್ತೆ, ಮಹಿಳಾಪರ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಪತ್ರಕರ್ತೆ, ಶಿಕ್ಷಕಿ, ನ್ಯಾಯವಾದಿ, ಜೊತೆಗೆ ಸಾಹಿತಿ...ಹೀಗೆ ಬಹುಮುಖ ಪ್ರತಿಭೆಯಿಂದ ಗಮನ ಸೆಳೆದಿರುವ ಬಾನು ಮುಷ್ತಾಕ್ ಅವರಿಗೆ ಈಗ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಗರಿ. ಲೇಖಕಿಯಾಗಿ ಅವರ ಗೆಲುವು ದೊಡ್ಡದು. ಬೂಕರ್ ಪ್ರಶಸ್ತಿ ಪಡೆದ ಮೊದಲ ಕನ್ನಡತಿ ಎನ್ನುವ ಹೆಗ್ಗಳಿಕೆ ಅವರದ್ದು.
ಅವರು ಬೆಳೆದದ್ದು ಹಾಸನದಲ್ಲಿಯೇ. ಅರಸೀಕೆರೆಯಲ್ಲಿ ಶಾಲೆಗೆ ಸೇರಿದ ಅವರಿಗೆ ಉರ್ದು ಮಾತ್ರ ತಲೆಗೆ ಹೋಗಲಿಲ್ಲ. ಪೋಷಕರು ಕನ್ನಡವನ್ನಾದರೂ ಕಲಿಯಲಿ ಎಂದು ಶಿವಮೊಗ್ಗದ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗೆ ಸೇರಿಸಿದರು. ಬಳಿಕದ ಪದವಿವರೆಗೂ ಅಲ್ಲಿಯೇ ವ್ಯಾಸಂಗ ಮಾಡಿದರು.
ವೃತ್ತಿಯಲ್ಲಿ ವಕೀಲೆಯಾದ ಅವರು, ಮುಸ್ಲಿಂ ಮಹಿಳೆಯರ ಪರವಾಗಿ ನಿರಂತರ ಧ್ವನಿ ಎತ್ತಿದ್ದಾರೆ. ಸಾಕಷ್ಟು ಮುಸ್ಲಿಂ ಮಹಿಳೆಯರ ಪ್ರಕರಣಗಳಲ್ಲಿ ವಾದಿಸಿದ್ದಾರೆ. ಒಬ್ಬ ಮುಸ್ಲಿಂ ಯುವತಿ ಸಿನಿಮಾ ನೋಡಿದ್ದಕ್ಕೆ ಆಕೆಯ ವಿರುದ್ಧ ಫತ್ವಾ ಹೊರಡಿಸಲಾಗಿತ್ತು. ಅದನ್ನು ಖಂಡಿಸಿದ್ದಲ್ಲದೇ, ಲಂಕೇಶ್ ಪತ್ರಿಕೆಗೆ ವರದಿ ಮಾಡುವ ಮೂಲಕ ಮಾಧ್ಯಮ ಲೋಕಕ್ಕೂ ಪದಾರ್ಪಣೆ ಮಾಡಿದರು.
ಬಾಲ್ಯದಲ್ಲೇ ಬರೆವಣಿಗೆಯನ್ನು ರೂಢಿಸಿಕೊಂಡಿದ್ದರು. ಅದೇ ಸಾಹಿತ್ಯ ಲೋಕಕ್ಕೆ ಬರಲು ದಾರಿಮಾಡಿತು. ಕಥೆ, ಕಾದಂಬರಿಗಳು, ಪ್ರಬಂಧಗಳನ್ನು ಬರೆಯುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ.
ಸಾಮಾಜಿಕ ಸೇವೆ: 1983ರಿಂದ ಎರಡು ಅವಧಿಗೆ ಹಾಸನ ನಗರ ಸಭೆಗೆ ಸದಸ್ಯೆಯಾಗಿದ್ದ ಅವರು, ಹಾಸನದ ಜಿಲ್ಲಾ ಶ್ರೀ ಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಸಂದರ್ಶಕರ ಮಂಡಳಿ ಅಧ್ಯಕ್ಷೆಯಾಗಿದ್ದರು. ರಾಜ್ಯ ಗ್ರಂಥಾಲಯ ಪ್ರಾಧಿಕಾರ, ಹಾಸನ ನಗರ ಗ್ರಂಥಾಲಯ ಸಮಿತಿ, ಆಕಾಶವಾಣಿ ಬೆಂಗಳೂರು ಕೇಂದ್ರದ ಸಲಹಾ ಮಂಡಳಿ ಸದಸ್ಯೆಯಾಗಿದ್ದರು.
1993 ರಲ್ಲಿ ಹಾಸನದ ಜಿಲ್ಲಾ ಸಮತಾ ವೇದಿಕೆ ಮತ್ತು ಮಹಿಳಾ ವಿಕಾಸ ವೇದಿಕೆ ಅಧ್ಯಕ್ಷೆಯಾಗಿದ್ದರು. 1981-1990ರವರೆಗೆ ಲಂಕೇಶ್ ಪತ್ರಿಕೆಯ ಜಿಲ್ಲಾ ವರದಿಗಾರ್ತಿಯಾಗಿ, 1990ರಿಂದ ನ್ಯಾಯವಾದಿಯಾಗಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸಾಹಿತ್ಯ ಕ್ಷೇತ್ರ: ಹಲವಾರು ಕೃತಿಗಳನ್ನು ಬರೆದಿರುವ ಅವರು, ಹೆಜ್ಜೆ ಮೂಡಿದ ಹಾದಿ (1990), ಬೆಂಕಿ ಮಳೆ (1999), ಎದೆಯ ಹಣತೆ (2004), ಸಫೀರಾ (2006), ಬಡವರ ಮಗಳು ಹೆಣ್ಣಲ್ಲ (2014), ಇಬ್ಬನಿಯ ಕಾವು (2014), ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ (2014), ಹಸೀನಾ ಮತ್ತು ಇತರ ಕಥೆಗಳು (2015), ಆದಿಲ್‍ಶಾಹಿ ಚರಿತ್ರೆಯಾದ ತಾರೀಕ್-ಎ- ಫರಿಷ್ತಾ (2015)ಗ್ರಂಥವನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಕವನ ಸಂಕಲನ ‘ಒದ್ದೆ ಕಣ್ಣಿನ ಬಾಗಿನ’ (2015), ಪ್ರಬಂಧ ಸಂಕಲನ ‘ಹೂ ಕಣಿವೆಯ ಚಾರಣ’ (2015) ಪ್ರಕಟಗೊಂಡಿವೆ.
ಕಾಳೇಗೌಡ ನಾಗವಾರ ಅವರ ಸಂಪಾದಕತ್ವದಲ್ಲಿ ‘ರಾಹಿಲ ಎಂಬ ಕನ್ಯೆಯ ಕಥೆ’ (1984), ನಾ.ಡಿಸೋಜಾರವರ ಸಂಪಾದಕತ್ವದಲ್ಲಿ ‘ಸರಿದ ಕಾರ್ಮೋಡ’ ಎಂಬ ಕಥೆ(1987), ಅಮರೇಶ ನುಡಗೋಣಿ ಸಂಪಾದಕತ್ವದಲ್ಲಿ ‘ಒಮ್ಮೆ ಹೆಣ್ಣಾಗು ಪ್ರಭುವೆ’, ಪಾರಿವಾಳದ ರೆಕ್ಕೆಗಳು (2005) ಸೇರಿದಂತೆ ಅವರ ಕಥೆಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಗಳಲ್ಲಿ ಸೇರ್ಪಡೆಯಾಗಿವೆ.
1999ರಲ್ಲಿ ಪ್ರಿಸಂ ಪ್ರಕಾಶನದವರು ಡಾ. ಆಮೂರರ ಸಂಪಾದಕತ್ವದಲ್ಲಿ ಪ್ರಕಟಿಸಿದ ಶತಮಾನದ ಮಾಲಿಕೆಯ ‘ಅವಳ ಕತೆಗಳು’ ಸಂಕಲನದಲ್ಲಿ ‘ಸರಿದ ಕಾರ್ಮೋಡ’ ಕಥೆ ಇದೆ. ಅವರ ಸಂಪಾದಕತ್ವದಲ್ಲಿ ಅಂಕಿತ ಪ್ರಕಾಶನದ ‘ಸ್ವಾತಂತ್ರ್ಯೋತ್ತರ ಕನ್ನಡ ಕಥಾಲೋಕ’ದಲ್ಲಿ ‘ದೇವರು ಮತ್ತು ಅಪಘಾತ’ ಕಥೆ ಸೇರ್ಪಡೆಯಾಗಿದೆ.
‘ಕರಿನಾಗರಗಳು’ ಎಂಬ ಅವರ ಸಣ್ಣಕಥೆ ಆಧರಿಸಿದ ‘ಹಸೀನಾ’ ಚಲನಚಿತ್ರವನ್ನು ಗಿರೀಶ್ ಕಾಸರವಳ್ಳಿ ನಿರ್ದೇಸಿದ್ದು, ತಾರಾ ನಿರ್ಮಾಪಕಿಯಾಗಿದ್ದಾರೆ. ಈ ಚಿತ್ರಕ್ಕೆ 3 ರಾಷ್ಟ್ರ ಪ್ರಶಸ್ತಿಗಳು ದೊರಕಿವೆ.
ಅವರ ‘ಪರಕೀಯ ಕಥೆ’ ಹಿಂದಿ ಭಾಷೆಯಲ್ಲಿ ಅನುವಾದಗೊಂಡಿದ್ದು, ಉತ್ತರ ಪ್ರದೇಶದ ಹಿಂದಿ ಅಕಾಡೆಮಿಯ ಪ್ರಕಟಣೆಯಾದ ಇಂದ್ರಪ್ರಸ್ಥ ಭಾರತೀಯಲ್ಲಿ ಪ್ರಕಟವಾಗಿದೆ.
‘ಬೆಂಕಿ ಮಳೆ’ ಕಥಾಸಂಕಲನದ ಕಥೆಗಳು ಮಲಯಾಳಂಗೆ ಅನುವಾದಗೊಂಡಿದ್ದು, ದೇಶಾಭಿಮಾನಿ ಹಾಗೂ ಸ್ತ್ರೀ ಸಬದಮ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಥಾಸಂಕಲನ ಮಲಯಾಳಂನಲ್ಲಿ ಪ್ರಕಟವಾಗಿದೆ. ತಮಿಳು, ಪಂಜಾಬಿ, ಉರ್ದು, ಇಂಗ್ಲಿಷ್ ಭಾಷೆಗೆ ಅವರ ಅನೇಕ ಕಥೆಗಳು ಭಾಷಾಂತರಗೊಂಡಿವೆ.
ಸಂದ ಪ್ರಶಸ್ತಿಗಳು ಹಲವು
ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕಥಾ ಸಂಕಲನದ ಇಂಗ್ಲಿಷ್ ಅನುವಾದಿತ ಪುಸ್ತಕಕ್ಕೆ ಪ್ರತಿಷ್ಠಿತ ‘ಇಂಗ್ಲಿಷ್ ಪೆನ್’ ಪ್ರಶಸ್ತಿ 2024ರಲ್ಲಿ ಲಭಿಸಿದೆ. ನೆಲಮನೆ ಪ್ರಕಾಶನದಿಂದ ಪ್ರಕಟವಾದ ಎರಡನೆ ಕಥಾಸಂಕಲನ ‘ಬೆಂಕಿಮಳೆ’ಗೆ 2000ರಲ್ಲಿ ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಬಹುಮಾನ ದೊರಕಿದೆ.
ಕನಾಟಕ ಸಾಹಿತ್ಯ ಅಕಾಡೆಮಿಯಿಂದ 1999ನೇ ಸಾಲಿನ ಸಣ್ಣಕಥೆ ಪ್ರಕಾರದ ಉತ್ತಮ ಕೃತಿಯೆಂದು ಪುಸ್ತಕ ಬಹುಮಾನ ದೊರಕಿದೆ. 2002ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ 2004ರ ಸಾಲಿನ ಗೌರವ ಪ್ರಶಸ್ತಿ ದೊರಕಿದೆ. ‘ಬೆಂಕಿಮಳೆ’ ಕಥಾ ಸಂಕಲನಕ್ಕೆ ಇನ್ಫೊಸಿಸ್ ಸಾಹಿತ್ಯ ಪ್ರತಿಷ್ಠಾನದ 2002ರ ಸಾಲಿನ ಸುಧಾಮೂರ್ತಿ ಪ್ರಶಸ್ತಿ ಲಭಿಸಿದೆ.
‘ಶಾಶ್ವತೀ’ ವತಿಯಿಂದ 2004ನೇ ಸಾಲಿನ ‘ಕರ್ನಾಟಕ ಕಲ್ಪವಲ್ಲಿ’ ಪ್ರಶಸ್ತಿ ದೊರೆತಿದ್ದು 2006ನೇ ಸಾಲಿನ ಮಹಾಮಸ್ತಕಾಭಿಷೇಕದ ಅಖಿಲ ಭಾರತೀಯ ಜೈನ ಮಹಿಳಾ ಸಮ್ಮೇಳನದ ಪ್ರಶಸ್ತಿ ಲಭಿಸಿದೆ. 2010ರಲ್ಲಿ ಪದ್ಮಭೂಷಣ ಡಾ.ಬಿ. ಸರೋಜಾ ದೇವಿ ಪ್ರಶಸ್ತಿ ದಾವಣಗೆರೆಯ ಬಸವ ಕೇಂದ್ರದಿಂದ 2013ರ ಶೂನ್ಯ ಪೀಠ ಅಕ್ಕನಾಗಮ್ಮ ಪ್ರಶಸ್ತಿ ಮುಂಬೈ ಕರ್ನಾಟಕ ಸಂಘದ ವತಿಯಿಂದ 2014ರಲ್ಲಿ ಡಾ. ಸುನೀತ ಶೆಟ್ಟಿ ಸಾಹಿತ್ಯ ಪ್ರಶಸ್ತಿ ಕರ್ನಾಟಕ ಸರ್ಕಾರದ ಅಡ್ವೋಕೇಟ್ ಜನರಲ್ ಕಚೇರಿಯಿಂದ 2014ರ ಜೀವಮಾನದ ಸಾಧನೆ ಪ್ರಶಸ್ತಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 2015 ರ ಹೊಯ್ಸಳ ಮಹೋತ್ಸವದ ಸಂದರ್ಭದಲ್ಲಿ ಶತಮಾನೋತ್ಸವ ಗೌರವ ಪ್ರಶಸ್ತಿ ಪಡೆದಿದ್ದಾರೆ. 2024 ರಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿಶ್ವ ವೇದಿಕೆಯಲ್ಲಿ ಕನ್ನಡಕ್ಕೆ ಗೌರವ
ಏಕಾಗ್ರತೆ ಹಾಗೂ ಪರಿಶ್ರಮದಿಂದ ಉತ್ತಮ ಬರವಣಿಗೆಯ ‘ಹಾರ್ಟ್ ಲ್ಯಾಂಪ್’ ಕೃತಿ ರಚಿಸಿ ಅಂತರ ರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡ ಸಾಹಿತ್ಯಕ್ಕೆ ವಿಶ್ವ ವೇದಿಕೆಯಲ್ಲಿ ಮಹತ್ವದ ಗೌರವ ತಂದು ಕೊಟ್ಟ ಬಾನು ಮುಷ್ತಾಕ್ ಅವರಿಗೆ ಅಭಿನಂದನೆಗಳು. ಕೆ.ಎನ್.ರಾಜಣ್ಣ ಜಿಲ್ಲಾ ಉಸ್ತುವಾರಿ ಸಚಿವ ಕನ್ನಡಿಗರ ಹೆಮ್ಮೆ ಬಾನು ಇದು ಅತ್ಯಂತ ಪ್ರತಿಭಾನ್ವಿತರಿಗೆ ಮಾತ್ರ ದೊರೆಯುವಂಥ ಪ್ರಶಸ್ತಿ. ನಮ್ಮ ಜಿಲ್ಲೆಯವರಿಗೆ ದೊರೆತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ.
ಅತ್ಯಂತ ಸಂತೋಷದ ಸಂಗತಿ ಸಿ.ಸತ್ಯಭಾಮಾ ಜಿಲ್ಲಾಧಿಕಾರಿ ಹಾಸನದ ಜನತೆಗೆ ಸಂಭ್ರಮದ ಕ್ಷಣ ಕೊನೆಯ ಹಂತದವರೆಗೆ ಕುತೂಹಲ ಇತ್ತು. ಇದೀಗ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವುದು ಎಲ್ಲರೂ ಹೆಮ್ಮೆ ಪಡುವಂತಾಗಿದೆ. ಅದರಲ್ಲೂ ಹಾಸನದ ಜನತೆಗೆ ಸಂಭ್ರಮದ ಕ್ಷಣವಾಗಿದೆ.
ರಾಜ್ಯವೇ ಸಂಭ್ರಮಿಸುವ ದಿನವಾಗಿದೆ. ಕೆ.ಟಿ.ಜಯಶ್ರೀ ಅನನ್ಯ ಟ್ರಸ್ಟ್ ಅಧ್ಯಕ್ಷೆ ಮಲೆನಾಡಿನ ಸಣ್ಣ ಕಥೆಗಳಿಗೆ ವಿಶ್ವ ಮನ್ನಣೆ ಮಲೆನಾಡಿನ ಸಣ್ಣ ಕಥೆಗಳನ್ನು ಬರೆದು ಇಂದು ವಿಶ್ವದಲ್ಲಿ ಜನ ಮನ್ನಣೆ ಗಳಿಸಿರುವುದು ಹೆಮ್ಮೆಯ ವಿಷಯ. ನಮ್ಮ ಕನ್ನಡ ಭಾಷೆಗೆ ಪ್ರಶಸ್ತಿ ಸಿಕ್ಕಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ. ಚೆನ್ನಂಗಿಹಳ್ಳಿ ಶ್ರೀಕಾಂತ ವಕೀಲರ ಸಂಘದ ಸದಸ್ಯ ಸಂತಸಕ್ಕೆ ಪಾರವೇ ಇಲ್ಲ ಸಾಹಿತ್ಯ ಕ್ಷೇತ್ರದಲ್ಲಿ ಭಾರತಕ್ಕೆ ಒಂದು ಸ್ಥಾನಮಾನ ನೀಡುವ ಕನ್ನಡಿಗರೆಲ್ಲ ಹೆಮ್ಮೆ ಪಡುವ ಅದರಲ್ಲೂ ಹಾಸನದವರಾದ ನಮ್ಮ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಅವರಿಗೆ ಪ್ರೀತಿಪೂರ್ವಕ ಅಭಿನಂದನೆಗಳು.
ಎಚ್.ಆರ್. ನವೀನ್ ಕುಮಾರ್ ಕೆಪಿಆರ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕನ್ನಡ ನಾಡಿನ ಹಿರಿಮೆ ಕನ್ನಡ ನಾಡಿನ ಹೆಮ್ಮೆಯ ಪುತ್ರಿ ಹಲ್ಮಿಡಿ ಶಾಸನ ದೊರೆತ ಹೊಯ್ಸಳ ನಾಡಿನ ಹೆಣ್ಣು ಮಗಳು ಬಾನು ಮುಷ್ತಾಕ್ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ದೊರೆತಿರುವುದು ಕನ್ನಡ ನಾಡಿನ ಹಿರಿಮೆಗೆ ಹೆಮ್ಮೆ ಎನಿಸುತ್ತದೆ. ಡಾ.ನಾಯಕರಹಳ್ಳಿ ಮಂಜೇಗೌಡ ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಏಳು ಕೋಟಿ ಜನರಿಗೆ ಸಂತಸ ಅವರ ಸಣ್ಣ ಕತೆಗಳ ಅನುವಾದಿತ ‘ಹಾರ್ಟ್ ಲ್ಯಾಂಪ್’ ಕೃತಿಗೆ ಲಭಿಸಿದ ಬೂಕರ್ ಪ್ರಶಸ್ತಿ ಸಿಕ್ಕಿರುವುದು ಕನ್ನಡಕ್ಕೆ ಸಿಕ್ಕ ಮೊದಲ ಗೌರವ. ಈ ಸಂಭ್ರಮದ ಕ್ಷಣವು ಕನ್ನಡ ನಾಡಿನ ಏಳು ಕೋಟಿ ಕನ್ನಡಿಗರಿಗೆ ಸಂತಸ ತಂದಿದೆ. ಚೈತ್ರಾ ನಾಯಕರಹಳ್ಳಿ ವಚನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಹೆಮ್ಮೆಯ ಶಿಖರ ಏರಿದ್ದೇವೆ ಕನ್ನಡಿಗರು ಅದರಲ್ಲೂ ಹಾಸನದವರಾದ ನಾವೆಲ್ಲಾ ಬಾನು ಮುಷ್ತಾಕ್ ಅವರಿಂದಾಗಿ ಹೆಮ್ಮೆಯ ಶಿಖರವೇರಿದ್ದೇವೆ. ಅವರಿಗೆ ಪ್ರೀತಿ ಪೂರ್ವಕ ಅಭಿನಂದನೆಗಳು. ಜೊತೆಗೆ ದೀಪಾ ಭಸ್ತಿ ಅವರಿಗೂ ಅಭಿನಂದನೆಗಳು.
-ಎಂ.ಜಿ. ಪೃಥ್ವಿ, ಡಿವೈಎಫ್‌ಐ ಜಿಲ್ಲಾ ಸಮಿತಿ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.