ADVERTISEMENT

ವಿಶೇಷ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆ ಹೊಂದಿದ್ದ ಮಗು ದತ್ತು ಪಡೆದ ಅಮೆರಿಕ ದಂಪತಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 18:16 IST
Last Updated 25 ಅಕ್ಟೋಬರ್ 2025, 18:16 IST
ಹಾಸನದ ತವರು ಚಾರಿಟಬಲ್‌ ಟ್ರಸ್ಟ್‌ನ 2 ವರ್ಷದ ಹೆಣ್ಣು ಮಗುವನ್ನು ದತ್ತು ಪಡೆದ ಅಮೆರಿಕ ವಿಲಿಯಮ್‌–ಆಶ್ಲೀ ದಂಪತಿ, ಆಕೆಯ ಜನ್ಮದಿನ ಆಚರಿಸಿದರು.
ಹಾಸನದ ತವರು ಚಾರಿಟಬಲ್‌ ಟ್ರಸ್ಟ್‌ನ 2 ವರ್ಷದ ಹೆಣ್ಣು ಮಗುವನ್ನು ದತ್ತು ಪಡೆದ ಅಮೆರಿಕ ವಿಲಿಯಮ್‌–ಆಶ್ಲೀ ದಂಪತಿ, ಆಕೆಯ ಜನ್ಮದಿನ ಆಚರಿಸಿದರು.   

ಹಾಸನ: ವಿಶೇಷ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆ ಹೊಂದಿದ್ದ, ನಗರದ ತವರು ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌ನ ಹೆಣ್ಣು ಮಗುವನ್ನು ಅಮೆರಿಕದ ಮಿಸ್ಸೋರಿ ರಾಜ್ಯದ ವಿಲಿಯಮ್-ಅಶ್ಲೀ ದಂಪತಿ ದತ್ತು ಪಡೆದಿದ್ದಾರೆ.

ಟ್ರಸ್ಟ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆ ಮಗು ತನ್ನ ಎರಡನೇ ಜನ್ಮದಿನವನ್ನು ಹೊಸ ಪೋಷಕರೊಂದಿಗೆ ಆಚರಿಸಿತು. ಎರಡು ವರ್ಷಗಳಿಂದ ಟ್ರಸ್ಟ್ ಆಶ್ರಯದಲ್ಲಿ ಬೆಳೆದ ಮಗು, ಹುಟ್ಟಿದಂದಿನಿಂದಲೇ ಕೆಲವು ವೈದ್ಯಕೀಯ ಸವಾಲು ಎದುರಿಸುತ್ತಿತ್ತು. ಮಗುವಿನ ಆರೈಕೆ, ವೈದ್ಯಕೀಯ ಚಿಕಿತ್ಸೆಗೆ ಇದುವರೆಗೆ ತವರು ಟ್ರಸ್ಟ್ ಶ್ರಮಿಸಿತ್ತು. ಮಗುವಿನ ಅನಾರೋಗ್ಯದ ಮಾಹಿತಿ ಪಡೆದಿದ್ದ ದಂಪತಿಯು ವಿವಿಧ ಇಲಾಖೆಗಳ ಅನುಮೋದನೆ ಪಡೆದು ಮಗುವನ್ನು ತಮ್ಮ ಮಡಿಲು ತುಂಬಿಸಿಕೊಂಡರು.

ದತ್ತು ಪ್ರಕ್ರಿಯೆ ಬಳಿಕ, ಟ್ರಸ್ಟ್ ಆವರಣದಲ್ಲೇ ಮಗುವಿನ ಜನ್ಮದಿನ ಆಚರಿಸಲಾಯಿತು. ಕೇಕ್ ಕತ್ತರಿಸಿದ ಮಗಳು ನಗುಮೊಗದಿಂದ ಎಲ್ಲರಿಗೂ ಸಂತೋಷ ಹಂಚಿದಳು. ‘ಈ ಮಗಳು ನಮ್ಮ ಜೀವನದ ಅತಿ ಅಮೂಲ್ಯ ವರ’ ಎಂದು ದಂಪತಿ ಭಾವುಕರಾದರು.

ADVERTISEMENT

ಟ್ರಸ್ಟ್‌ ಮುಖ್ಯಸ್ಥ ಡಾ.ಪಾಲಾಕ್ಷ, ಟ್ರಸ್ಟಿ ಮಧುಪ್ರಿಯ, ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶ್ರೀರಂಗ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ರವಿ, ರಂಗಸ್ವಾಮಿ ಈ ಸಂಭ್ರಮಕ್ಕೆ ಸಾಕ್ಷಿಯಾದರು.

ಯಾವುದೇ ಮಗು ಪ್ರೀತಿ ಮತ್ತು ಆರೈಕೆಯಿಂದ ವಂಚಿತ ಆಗಬಾರದು ಎಂಬುದು ತವರು ಟ್ರಸ್ಟ್ ಉದ್ದೇಶ. ಇಂದು ಈ ಪುಟ್ಟ ಮಗಳು ಹೊಸ ಜೀವನದ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಾಳೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ.
ಡಾ. ಪಾಲಾಕ್ಷ ತವರು ಚಾರಿಟಬಲ್‌ ಟ್ರಸ್ಟ್‌ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.