
ಹೆತ್ತೂರು: ಮಲೆನಾಡು ಭಾಗವಾದ ಹೆತ್ತೂರು, ಯಸಳೂರು ಹೋಬಳಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ದಾಳಿ ಹೆಚ್ಚುತ್ತಿದ್ದು, ಆತಂಕ ಮೂಡಿಸಿದೆ. ಒಂದು ತಿಂಗಳಿಂದ ನಿರಂತರವಾಗಿ ಕಾಡಾನೆಗಳ ದಾಳಿಗೆ ರೈತರ ಬೆಳೆ ಕೈ ಸಿಗದೇ ಅತಂತ್ರ ಸ್ಥಿತಿ ಸಿಲುಕುತ್ತಿದ್ದಾರೆ.
ಕಾಡಾನೆ ದಾಳಿಯಿಂದಾಗಿ ಲಕ್ಷಾಂತರ ರೂಪಾಯಿ ಮೂಲ್ಯದ ಬೆಳೆ, ಆಸ್ತಿ ಹಾನಿ ಆಗುತ್ತಿದ್ದು, ಆನೆ ಹಾವಳಿಯಿಂದ ಮುಕ್ತಿ ನೀಡುವಂತೆ ಮಲೆನಾಡಿಗರು ಒತ್ತಾಯಿಸಿದ್ದಾರೆ.
ಕಾಡು ಬಿಟ್ಟು ಗ್ರಾಮೀಣ ಪ್ರದೇಶಗಳಲ್ಲಿ ಹಗಲು, ರಾತ್ರಿ ಎನ್ನದೇ ಆನೆಗಳು ಓಡಾಡುತ್ತಿದ್ದು, ಮನುಷ್ಯರನ್ನು ಕಂಡರೆ ಭಯ ಬೀಳುತ್ತಿಲ್ಲ. ಬದಲಿಗೆ ಮನುಷ್ಯರಿಗೇ ಪ್ರಾಣ ಭಯ ಉಂಟು ಮಾಡುತ್ತಿವೆ.
ಭತ್ತದ ಗದ್ದೆ, ಕಾಫಿ ತೋಟದಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ. ತೋಟವನ್ನೇ ಕಾಡು ಮಾಡಿಕೊಂಡಿವೆ. ಅಹಾರ ಹುಡುಕಿಕೊಂಡು ತೋಟದಿಂದ ತೋಟಕ್ಕೆ ಆನೆಗಳು ಅಲೆದಾಡುತ್ತಿವೆ. ಆನೆ ದಾಳಿಗೆ ಹಲವರು ಗಾಯಗೊಂಡಿದ್ದಾರೆ. ಇಡೀ ವಾರದಲ್ಲಿ ನಿತ್ಯವೂ ಒಂದಿಲ್ಲೊಂದು ಕಡೆ ಕಾಡಾನೆಗಳು ತೋಟ, ಜನವಸತಿ ಪ್ರದೇಶಗಳಲ್ಲಿ ದಾಳಿ ನಡೆಸುತ್ತಿವೆ.
ಅರಣ್ಯಾಧಿಕಾರಿಗಳು ಎಷ್ಟೇ ಪ್ರಯತ್ನ ನಡೆಸಿದರೂ ತಡೆಯಲು ಸಾಧ್ಯವಾಗುತ್ತಿಲ್ಲ. ಇದು ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯಷ್ಟೇ ಅಲ್ಲ. ಸರ್ಕಾರದ ಕರ್ತವ್ಯವೂ ಹೌದು ಎನ್ನುತ್ತಾರೆ ಇಲ್ಲಿನ ಜನರು.
ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ಮರಳಿ ಕಾಡಿಗಟ್ಟುವ ಕೆಲಸ ಮಾಡುತ್ತಿದ್ದಾರೆ. ಆದರೆ, ಮತ್ತೆ ಮತ್ತೆ ಕಾಡಾನೆಗಳು ಕಾಡಿನಿಂದ ಹೊರಬರುತ್ತಿವೆ. ಇದನ್ನು ತಡೆಯಲು ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದು ಜನರ ಒತ್ತಾಯ.
ಎಲ್ಲೆಲ್ಲಿ ಕಾಡಿನಿಂದ ಹೊರಬರುವ ಮಾರ್ಗಗಳಿವೆಯೋ, ಅಲ್ಲಲ್ಲಿ ಆನೆ ಕಂದಕ ನಿರ್ಮಿಸುವುದು, ಸಾಧ್ಯವಿರುವ ಕಡೆ ಹ್ಯಾಂಗಿಂಗ್ ಸೌರ ತಂತಿಗಳನ್ನು ಹಾಕುವುದು, ರೈಲ್ವೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಿದೆ. ಆಗ ಮಾತ್ರ ಕಾಡಾನೆ ಉಪಟಳ ನಿಯಂತ್ರಣ ಸಾಧ್ಯ. ಅದನ್ನು ಬಿಟ್ಟು ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಗದಾಪ್ರಹಾರ ನಡೆಸಿದರೆ ಕಾಡಾನೆ ದಾಳಿ ನಿಲ್ಲಿಸುವುದು ಸಾಧ್ಯವಿಲ್ಲ ಎಂಬ ಅಂಶವನ್ನು ಸರ್ಕಾರ ಮನಗಾಣಬೇಕಿದೆ ಎಂದು ಮಲೆನಾಡಿನ ಜನರು ಹೇಳುತ್ತಾರೆ.
ಆಡಳಿತದಲ್ಲಿರುವವರು ಪ್ರತಿ ಬಾರಿಯೂ ಕಾಡಾನೆ ದಾಳಿಗೆ ತುತ್ತಾಗಿ ಗಾಯಗೊಂಡವರನ್ನು ನೋಡಿಕೊಂಡು ಬಂದರೆ ಸಾಲದು. ದಾಳಿ ನಡೆಸಿದ ಪ್ರದೇಶದಲ್ಲಿ ಮತ್ತೆ ಕಾಡಾನೆ ಬಾರದಿರುವಂತೆ ತಡೆಗಟ್ಟಲು ಕಾರ್ಯ ಯೋಜನೆ ರೂಪಿಸಬೇಕು. ಅದನ್ನು ಜಾರಿಗೆ ತರಬೇಕಿದೆ.
ಕಾಡಂಚಿನಲ್ಲಿ ಆನೆಗಳು ಸಂಚರಿಸುತ್ತಿರುವ ವೇಳೆ ವಾಹನ ಚಾಲನೆ ಮಾಡದೇ, ಅವು ಹೋಗುವವರೆಗೂ ಸಾಕಷ್ಟು ದೂರದಲ್ಲಿ ನಿಲ್ಲಬೇಕು. ಕಾಡಾನೆಯನ್ನೇ ನಾವು ಓಡಿಸುತ್ತೇವೆ ಎಂಬ ಹಟಕ್ಕೆ ಬೀಳದೇ ಬೆಳೆಯನ್ನೋ ನಾಶಪಡಿಸಿದರೂ ಸುರಕ್ಷಿತ ಸ್ಥಳ ಬಿಟ್ಟು ಹೊರಬರಬಾರದು. ಏಕೆಂದರೆ, ಬೆಳೆಗಿಂತಲೂ ಜೀವ ಮುಖ್ಯ ಎಂಬುದನ್ನು ಮರೆಯಬಾರದಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.
ಹಗಲು ರಾತ್ರಿ ಅರಣ್ಯಾಧಿಕಾರಿಗಳು ಕಾಡಾನೆಗಳ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ ಸಮಸ್ಯೆ ಬಗೆಹರಿಯುತ್ತಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಬೇಕಿದೆ.ಕೆ.ಬಿ. ಗಂಗಾಧರ್ ಯಸಳೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ
ಕಾಡಾನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರದ ಮಾರ್ಗೋಪಾಯಗಳ ಬಗ್ಗೆ ಚಿಂತನೆ ಮಾಡಿ ವೈಜ್ಞಾನಿಕವಾಗಿ ಜಾರಿಗೊಳಿಸಬೇಕು ಎಂದು ಸದನದಲ್ಲಿ ಗಮನ ಸೆಳೆದಿದ್ದೇನೆಸಿಮೆಂಟ್ ಮಂಜು ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.