ಬಿಡುವು ನೀಡುತ್ತ ಸುರಿಯುತ್ತಿರುವ ಮಳೆ | 2,200 ಹೆಕ್ಟೇರ್‌ನಲ್ಲಿ ಬೆಳ್ಳುಳ್ಳಿ ಭೂಮಿ ಜವಳು; ಕೀಟಬಾಧೆ
ರಾಣೆಬೆನ್ನೂರು: ತಾಲ್ಲೂಕಿನಲ್ಲಿ ಬಿಡುವು ನೀಡುತ್ತಲೇ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿದೆ. ಬೆಳ್ಳುಳ್ಳಿ ಬೆಳೆಯ ಬೆಳವಣಿಗೆ ಕುಂಠಿತವಾಗಿ ನೆಲಕಚ್ಚಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಎರಡು–ಮೂರು ವರ್ಷಗಳಿಂದ ಬೆಳ್ಳುಳ್ಳಿಗೆ ಕ್ಲಿಂಟಲ್‌ಗೆ ₹25 ಸಾವಿರದಿಂದ ₹ 30 ಸಾವಿರ ಬೆಲೆಯಿದೆ. ಇದರಿಂದ ರೈತರು, ಈರುಳ್ಳಿ ಕ್ಷೇತ್ರ ಕಡಿಮೆ ಮಾಡಿ ಬೆಳ್ಳುಳ್ಳಿ ಬೆಳೆದಿದ್ದಾರೆ. ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದರಿಂದ, ಬೆಳೆ ಹಾನಿ ಉಂಟಾಗಿದೆ.
ತಾಲ್ಲೂಕಿನಲ್ಲಿ ಹಿಂದಿನ ವರ್ಷಗಳಲ್ಲಿ 600ರಿಂದ 700 ಹೆಕ್ಟೇರ್ ಪ್ರದೇಶದಲ್ಲಿ ಬೆಳ್ಳುಳ್ಳಿ ಬಿತ್ತನೆ ಮಾಡಲಾಗಿತ್ತು. ಈ ಮುಂಗಾರಿನಲ್ಲಿ 2,200 ಹೆಕ್ಟೇರ್‌ನಲ್ಲಿ ಬೆಳ್ಳುಳ್ಳಿ ಬೆಳೆಯಿದೆ.
ಇಟಗಿ, ಹನುಮನಹಳ್ಳಿ, ಮುದೇನೂರ, ಮಾಗೋಡ, ಮಣಕೂರ, ಲಿಂಗದಹಳ್ಳಿ, ಅಂತರವಳ್ಳಿ, ಕೃಷ್ಣಾಪುರ, ಹಲಗೇರಿ, ಆಲದಕಟ್ಟಿ, ನಿಟ್ಟೂರ, ಕೊಣನತೆಲಿ, ಸುಣಕಲ್ಲಿಬಿದರಿ, ಚಳಗೇರಿ, ಕರೂರ, ನಾಗೇನಹಳ್ಳಿ, ಕಮದೋಡ, ಮುಷ್ಟೂರು, ಯರೇಕುಪ್ಪಿ, ಮೈದೂರ, ಜೋಯಿಸರಹರಳಹಳ್ಳಿ, ಹಿರೇಬಿದರಿ, ಆರೇಮಲ್ಲಾಪುರ, ಉಕ್ಕುಂದ, ಸರ್ವಂದ, ಅಸುಂಡಿ, ಹುಲಿಹಳ್ಳಿ, ಹೆಡಿಯಾಲ, ಬೆನಕನಕೊಂಡ ಭಾಗದಲ್ಲಿ ರೈತರು ಹೆಚ್ಚಾಗಿ ಬೆಳ್ಳುಳ್ಳಿ ಬೆಳೆದಿದ್ದಾರೆ.
ಅರ್ಧದಷ್ಟು ಜಮೀನುಗಳಲ್ಲಿ ಬೆಳ್ಳುಳ್ಳಿ ಬೆಳೆ ಕಟಾವಿಗೆ ಬಂದಿದೆ. ಆದರೆ, ತೇವಾಂಶ ಹೆಚ್ಚಾಗಿ ರೈತರಿಗೆ ತೊಂದರೆಯಾಗುತ್ತಿದೆ. ಎರಡು ವರ್ಷ ಈರುಳ್ಳಿ ಬೆಳೆದು ಬೆಳೆ ಹಾನಿ ಮತ್ತು ದರ ಕುಸಿತದಿಂದಾಗಿ ಕಣ್ಣೀರು ಸುರಿಸಿದ್ದ ರೈತರು, ಈ ವರ್ಷ ಬೆಳ್ಳುಳ್ಳಿ ಬೆಳೆದು ಕಂಗಾಲಾಗಿದ್ದಾರೆ.
ಈ ವರ್ಷ ಅವಧಿಗೂ ಮುನ್ನವೇ ಸುರಿದ ಮುಂಗಾರು ಮಳೆಯಿಂದ ರೈತರು ಜಮೀನು ಹದ ಮಾಡಿ ಬೆಳ್ಳುಳ್ಳಿ ಬಿತ್ತನೆ ಮಾಡಿದ್ದರು. ಉತ್ತಮ ಬೆಳೆ ಬಂದು ನಾಲ್ಕು ಕಾಸು ಕೈಗೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಬಿತ್ತನೆಯಾದ ಎರಡು–ಮೂರು ವಾರದ ನಂತರ ಬೆಳೆಗಳಿಗೆ ಕೀಟ ಬಾಧೆ ಬಂದಿತು. ತೇವಾಂಶ ಹೆಚ್ಚಾಗಿ ಭೂಮಿ ಜವಳು ಬಂದಿದೆ. ಬೆಳೆ ಕಂದು ಬಣ್ಣಕ್ಕೆ ತಿರುಗಿ ಕೊಳೆ ರೋಗ, ಮಜ್ಜಿಗಿ ರೋಗ ಕಾಣಿಸಿಕೊಂಡಿದೆ. ಯೂರಿಯಾ ಗೊಬ್ಬರ ಪೂರೈಕೆಯಲ್ಲಿ ಆರಂಭದಲ್ಲಿ ಅಡೆತಡೆಯಾಯಿತು. ಇದು ಬೆಳೆ ಮೇಲೆ ಪರಿಣಾಮ ಬೀರಿದೆ.
ಸತತ ಮಳೆಯಿಂದ ಬೆಳ್ಳುಳ್ಳಿ ಸೇರಿ ಇತರೆ ಬೆಳೆ ಹಾನಿಯಾದ ಬಗ್ಗೆ ವರದಿ ನೀಡಲು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಲಾಗುವುದುಆರ್.ಎಚ್. ಭಾಗವಾನ್ ತಹಶೀಲ್ದಾರ್
ಬೆಳ್ಳುಳ್ಳಿ ಬೆಳೆ ಹಾಳಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಿ ಎಕರೆಗೆ ₹ 50 ಸಾವಿರ ಪರಿಹಾರ ಕೊಡಿಸಬೇಕುರವೀಂದ್ರಗೌಡ ಎಫ್. ಪಾಟೀಲ ಮುಷ್ಟೂರ
‘ಸಚಿವರು ಭೇಟಿ ನೀಡಲಿ’
‘ಬಿತ್ತನೆ ಮಾಡುವಾಗ ಕ್ವಿಂಟಲ್ ಬೆಳ್ಳುಳ್ಳಿ ಬಿತ್ತನೆ ಬೀಜವನ್ನು ₹25 ಸಾವಿರದಿಂದ ₹30 ಸಾವಿರ ಕೊಟ್ಟು ಖರೀದಿಸಿದ್ದೆವು. ಎಕರೆಗೆ ₹45 ಸಾವಿರದಿಂದ ₹50 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ್ದೆವು’ ಎಂದು ಲಿಂಗದಹಳ್ಳಿಯ ರೈತ ಹನುಮಂತಪ್ಪ ಗವಿಯಪ್ಪನವರ ಹೇಳಿದರು. ‘ಕೆಲ ರೈತರ ಹೊಲದಲ್ಲಿ ಕಿತ್ತು ಹಾಕಿದ ಸ್ಥಳದಲ್ಲೇ ಬೆಳ್ಳುಳ್ಳಿ ಕೊಳೆಯುತ್ತಿದೆ. ಕೆಲ ಜಮೀನಿನಲ್ಲಿ ಭೂಮಿಯಲ್ಲೇ ಕೊಳೆತಿದೆ. ಕೆಟ್ಟ ವಾಸನೆ ಬರುತ್ತಿದೆ. ಬೆಳೆ ಹಾಳಾಗಿದ್ದರಿಂದ ರೈತರೆಲ್ಲರೂ ಆರ್ಥಿಕ ಸಂಕಷ್ಟದಲ್ಲಿದ್ದೇವೆ. ಕೃಷಿ ಸಚಿವ ಜಿಲ್ಲಾ ಉಸ್ತುವಾರಿ ಸಚಿವ ಕೃಷಿ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ಪರಿಶೀಲಿಸಿ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.