
ಹಾವೇರಿ: ‘ಭಕ್ತಸಾಗರದಿಂದ ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣ. ಭವ್ಯ ವೇದಿಕೆಯಲ್ಲಿ ತೂಗಿದ ಹೂವಿನ ಅಲಂಕೃತ ತಕ್ಕಡಿ. ಮೈ ಕೊರೆಯುವ ಚಳಿಯಲ್ಲಿಯೂ ಇಡೀ ಕ್ರೀಡಾಂಗಣದಲ್ಲಿ ಮೊಳಗಿದ ಜಯ ಘೋಷ. ತಕ್ಕಡಿಯಲ್ಲಿ ತಮ್ಮ ಆರಾಧ್ಯ ಧೈವ ಸದಾಶಿವ ಸ್ವಾಮೀಜಿ ಅವರನ್ನು ಕೂರಿಸಿ ತೂಕಕ್ಕೆ ತಕ್ಕಂತೆ ಬೆಳ್ಳಿ ತುಲಾಭಾರ ಮಾಡಿದ ಭಕ್ತರು.
ನಗರದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅವರ ಪಟ್ಟಾಧಿಕಾರದ 15ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಬೆಳ್ಳಿ ತುಲಾಭಾರ’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.
ಜಾತ್ರಾ ಮಹೋತ್ಸವ ಅಂಗವಾಗಿ ಡಿ. 9ರಿಂದ ಆರಂಭವಾದ ವೇದಿಕೆ ಕಾರ್ಯಕ್ರಮ ಸೋಮವಾರ ಬೆಳ್ಳಿ ತುಲಾಭಾರದೊಂದಿಗೆ ಸಮಾಪ್ತಗೊಂಡಿತು. ತುಲಾಭಾರ ಸಂದರ್ಭದಲ್ಲಿ ಭಕ್ತರು ಪುಷ್ಪಗಳನ್ನು ಅರ್ಪಿಸಿ ನಮಿಸಿದರು.
ವಿಜಯಪುರದ ಷಣ್ಮುಖಾರೂಢ ಮಠದ ಸಿದ್ಧಾರೂಢ ಸ್ವಾಮೀಜಿ ಮಾತನಾಡಿ, ‘ಗುರುವಿನ ಸ್ಥಾನ ದೊಡ್ಡದು. ಕರುಣೆ, ಸತ್ಕಲೆ, ಶಾಂತ ಪರಿಣಿತಿ, ಸುಮುಖತ್ವ, ಸುಗುಣ, ಸುಜ್ಞಾನ ಗುಣ ಹೊಂದಿದ ಗುರುಗಳನ್ನು ಗುರುವಾಗಿ ಸ್ವೀಕರಿಸಬೇಕು’ ಎಂದರು.
‘ಶಿವಯೋಗಿ ಮಂದಿರದ 120 ವರ್ಷದ ಇತಿಹಾಸದಲ್ಲಿಯೇ ಕಿರಿ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ಹೊತ್ತವರು ಸದಾಶಿವ ಸ್ವಾಮೀಜಿ. ಭಕ್ತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಹಾವೇರಿಯಲ್ಲಿ ವೃದ್ದಾಶ್ರಮ ಬಾರದಂತೆ ನೋಡಿಕೊಳ್ಳಬೇಕು. ಅದುವೇ ಸ್ವಾಮೀಜಿಗೆ ಗೌರವ ಕೊಟ್ಟಂತೆ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ‘ವೀರಶೈವ ಲಿಂಗಾಯತ ಮಠದ ಪರಂಪರೆ, ಇಡೀ ದೇಶಕ್ಕೆ ಮಾದರಿ. ಅಂಥ ಪರಂಪರೆಯನ್ನು ಸದಾಶಿವ ಸ್ವಾಮೀಜಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎಂದರು.
‘ಮೈಸೂರಿನಿಂದ ಬೀದರ್‌ವರೆಗೂ ಅನೇಕ ವೀರಶೈವ ಮಠಾಧೀಶರು ಕೆಲಸ ಮಾಡಿದ್ದಾರೆ. ಹಾವೇರಿಯಲ್ಲಿ ಶಿವಬಸವ ಹಾಗೂ ಶಿವಲಿಂಗ ಶಿವಯೋಗಿಯವರ ಕಾಯಕ ಎಂದಿಗೂ ನಿಲ್ಲಲ್ಲ. ಅವರನ್ನು ಮರೆಸುವ ರೀತಿಯಲ್ಲಿ ಸದಾಶಿವ ಸ್ವಾಮೀಜಿ ಕೆಲಸ ಮಾಡುತ್ತಿದ್ದಾರೆ’ ಎಂದರು.
ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, ‘ಈ ಭಕ್ತ ಸಾಗರ, ಹುಕ್ಕೇರಿಮಠ ಸ್ವಾಮೀಜಿ ಅವರ ಮೇಲೆ ಇಟ್ಟಿರುವ ಪ್ರೀತಿ- ವಿಶ್ವಾಸ ತೋರಿಸುತ್ತದೆ. ಭಾರತದ ದೊಡ್ಡ ಶಕ್ತಿ ಆಧ್ಯಾತ್ಮಿಕತೆ. ಇದೇ ಕಾರಣದಿಂದ ಇಡೀ ಜಗತ್ತಿನಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನವಿದೆ’ ಎಂದರು.
‘ಕರ್ನಾಟಕ ರಾಜ್ಯದಲ್ಲಿರುವ ವೀರಶೈವ ಲಿಂಗಾಯತ ಮಠಗಳು, ಸರ್ಕಾರಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯವನ್ನು ಅಭಿವೃದ್ಧಿ ಮಾಡುತ್ತಿವೆ. ತ್ರಿವಿಧ ದಾಸೋಹದ ಮೂಲಕ ಅನ್ನ, ಅಕ್ಷರ, ಜ್ಞಾನ ದಾಸೋಹ ಮಾಡುತ್ತಿವೆ. ಎರಡನೇ ಅನುಭವ ಮಂಟಪ ಹುಕ್ಕೇರಿಮಠ. ಬಡ ಮಕ್ಕಳಿಗೆ ಜಾತಿ, ಧರ್ಮ ನೋಡದೇ ಸರ್ವರಿಗೂ ಆಶ್ರಯ ನೀಡುತ್ತಿದೆ’ ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಜಾತ್ರೆಯ ಪ್ರವಚನದಿಂದ ಮನಃಶಾಂತಿ ಸಿಕ್ಕಿದೆ. ಬದುಕು ಜೀವನ ಏನು ಎಂಬುದನ್ನು ಎಲ್ಲರೂ ಚೆನ್ನಾಗಿ ಹೇಳಿದ್ದಾರೆ. ಭಗವಂತ ನಮ್ಮನ್ನೆಲ್ಲ ಭೂಮಿಗೆ ಬಿಟ್ಟಿದ್ದು ಪರೀಕ್ಷೆ ಮಾಡಲು. ಬದುಕಿನ ಉದ್ದೇಶ ತಿಳಿದುಕೊಂಡವರು ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಇಲ್ಲದಿದ್ದರೆ, ಅನ್ನುತ್ತೀರ್ಣರಾಗುತ್ತಾರೆ’ ಎಂದರು.
‘ವೀರಶೈವ ಮಠಗಳು ನಾಲ್ಕು ನೂರು ವರ್ಷಗಳಿಂದ ಸಮಾಜಕ್ಕೆ ಮಾಡಿದ ಕೆಲಸಕ್ಕೆ ಬೆಲೆ ಕಟ್ಟಲಾಗದು. ಇವತ್ತಿನ ಎಲ್ಲ ಸಮಸ್ಯೆಗಳಿಗೆ ಬಸವಣ್ಣ ಉತ್ತರ ಕೊಟ್ಟಿದ್ದಾರೆ. ಅದನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
ರಾಣೆಬೆನ್ನೂರಿನ ವನಿತಾ ಗುತ್ತಲ ಅವರು ನೀಡಿದ ಚಿನ್ನದ ಸಿಂಹಾಸನದಲ್ಲಿ ಆಸೀನರಾದ ಸದಾಶಿವ ಸ್ವಾಮೀಜಿ ಅವರಿಗೆ ಪಾದಪೂಜೆ ಮಾಡಲಾಯಿತು. ಉಚಿತ ವಿದ್ಯಾರ್ಥಿ ನಿಲಯದ ಅಡಿಗಲ್ಲು ನೆರವೇರಿಸಲಾಯಿತು.
ಹುಕ್ಕೇರಿಮಠದ ಕೀರ್ತಿ ರಾಜ್ಯದಾದ್ಯಂತ ಪ್ರಚಾರವಾಗಿದೆ. ಸದಾಶಿವ ಸ್ವಾಮೀಜಿ ಜಾತ್ಯಾತೀತರಾಗಿ ಎಲ್ಲ ವರ್ಗದವರನ್ನು ಪ್ರೀತಿಸುತ್ತಾರೆ. ಎಲ್ಲ ಗ್ರಾಮಗಳಲ್ಲಿ ಸಂಚರಿಸಿ ಜನರನ್ನು ಜಾಗೃತರಾಗಿ ಮಾಡಿದ್ದಾರೆ.ಬಸವರಾಜ, ಶಿವಣ್ಣನವರ ಶಾಸಕ
‘ಮದ್ಯ ಮುಕ್ತ ಸಮಾಜದ ಸಂಕಲ್ಪಕ್ಕೆ ಬೆಂಬಲ’ ‘ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಯುವಜನತೆ ದಾರಿ ತಪ್ಪುತ್ತಿದ್ದಾರೆ. ಮದ್ಯದ ದಾಸರಾಗಿರುವ ಯುವಕರಿಗೆ ಕನ್ಯೆ ಸಿಗುತ್ತಿಲ್ಲ. ಸದಾಶಿವ ಸ್ವಾಮೀಜಿ ಗ್ರಾಮಗಳಲ್ಲಿ ಸಂಚರಿಸಿ ಮದ್ಯ ಚಟ ಬಿಡಿಸಲು ಯುವಕರಲ್ಲಿ ಜಾಗೃತಿ ಮೂಡಿಸಿದ್ದಾರೆ’ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 'ದಾರಿ ತಪ್ಪುತ್ತಿರುವ ಯುವ ಜನಾಂಗವನ್ನು ರಕ್ಷಿಸಲು ಸದಾಶಿವ ಸ್ವಾಮೀಜಿ ಅವರು ಸಂಕಲ್ಪ ಮಾಡಿದರೆ ಅವರ ಜೊತೆಗೆ ಇಡೀ ಭಕ್ತ ಸಮೂಹವೇ ಬೆಂಬಲವಾಗಿ ನಿಲ್ಲಲಿದ್ದಾರೆ. ಸ್ವಾಮೀಜಿ ಸಂಕಲ್ಪ ಮಾಡಿ ಸಮಾಜಕ್ಕೆ ಒಂದು ಸಂದೇಶ ನೀಡಲಿ' ಎಂದು ಕೋರಿದರು.
ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಇಂದು ಹುಕ್ಕೇರಿಮಠ ಜಾತ್ರಾ ಮಹೋತ್ಸವ ಅಂಗವಾಗಿ ಡಿ.30ರಂದು ಶಿವಬಸವ ಶಿವಯೋಗಿ ಹಾಗೂ ಶಿವಲಿಂಗ ಶಿವಯೋಗಿಯವರ ಪುಣ್ಯ ಸ್ಮರಣೋತ್ಸವ ಜರುಗಲಿದೆ. ಬೆಳಿಗ್ಗೆ 8 ಗಂಟೆಗೆ ಗದ್ದುಗೆ ಪೂಜೆ ನಡೆಯಲಿದೆ. 12 ಗಂಟೆಗೆ ಮಹಾ ಗಣಾರಾಧನೆಯಿದೆ. ಸಂಜೆ 4 ಗಂಟೆಗೆ ಶಿವಯೋಗಿಗಳ ಚಿತ್ರದ ಮೆರವಣಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಳ್ಳಿ ಸಿಂಹಾಸನದಲ್ಲಿ ಆಸೀನರಾದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅವರಿಗೆ ಭಕ್ತರು ನಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.