ಕಲಬುರಗಿಯ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಬಿಜೆಪಿಯಿಂದ ಶುಕ್ರವಾರ ಮೌನ ಪ್ರತಿಭಟನೆ ನಡೆಸಲಾಯಿತು
ಕಲಬುರಗಿ: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧ ಕೇಂದ್ರಗಳನ್ನು ಮುಚ್ಚಲು ಆದೇಶಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರದ ವಿರುದ್ಧ ಕಲಬುರಗಿ ಜಿಲ್ಲಾ ಬಿಜೆಪಿಯಿಂದ ಜಿಲ್ಲಾಸ್ಪತ್ರೆ ಆವರಣದಲ್ಲಿ ಶುಕ್ರವಾರ ಮೌನ ಪ್ರತಿಭಟನೆ ನಡೆಸಲಾಯಿತು.
ಆಸ್ಪತ್ರೆಯ ಮುಖ್ಯದ್ವಾರದ ಬಳಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಕೈಗೆ ಕಪ್ಪು ಕಟ್ಟಿಕೊಂಡು ಧರಣಿಯಲ್ಲಿ ಪಾಲ್ಗೊಂಡರು.
‘ಖಾಸಗಿ ಮೆಡಿಕಲ್ ಮಾಫಿಯಾಗೆ ಮಣಿದು ಜನೌಷಧ ಕೇಂದ್ರ ಸ್ಥಗಿತಗೊಳಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ’, ‘ಮೋದಿ ಸರ್ಕಾರದ ಯೋಜನೆಗಳ ವಿರುದ್ಧ ದ್ವೇಷ ಸಾಧಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ’ ‘ಬಡವರಿಗೆ ವರವಾಗಿರುವ ಜನೌಷಧ ಕೇಂದ್ರ ಮುಚ್ಚುತ್ತಿರುವ ಸರ್ಕಾರಕ್ಕೆ ಧಿಕ್ಕಾರ’ ಎಂಬ ಭಿತ್ತಿಫಲಕ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ‘ಬಡ ಜನರಿಗೆ ದುಬಾರಿ ಔಷಧಗಳನ್ನು ಕಡಿಮೆ ದರಕ್ಕೆ ನೀಡುತ್ತಿದ್ದ ಜನೌಷಧ ಕೇಂದ್ರ ಮುಚ್ಚುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಖಂಡನೀಯ. ಆಸ್ಪತ್ರೆ ಆವರಣದ ಕೇಂದ್ರಗಳನ್ನು ಮುಚ್ಚಸಲು ಕಾರಣವೇನು? ಮುಖ್ಯಮಂತ್ರಿ, ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಇದಕ್ಕೆ ಉತ್ತರಿಸಬೇಕು’ ಎಂದು ಆಗ್ರಹಿಸಿದರು.
‘ಎಷ್ಟೋ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳೇ ಇರಲ್ಲ. ಸರ್ಕಾರವೇನು ಎಲ್ಲ ಔಷಧ ದಾಸ್ತಾನು ಮಾಡಿ ಕುಳಿತಿರುತ್ತಾ? ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧ ನೀಡಿದರೆ, ಜನರೇಕೆ ಬಂದು ಜನೌಷಧ ಮಳಿಗೆಯಲ್ಲಿ ಖರೀದಿಸುತ್ತಾರೆ? ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಎಷ್ಟೋ ಮೆಡಿಸಿನ್ ಈ ಕೇಂದ್ರದಲ್ಲಿ ಬಡವರಿಗೆ ಕೈಗೆಟುಕುವ ದರದಲ್ಲಿ ಸಿಗುತ್ತವೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಈ ನಿರ್ಧಾರ ಪುನರ್ ಪರಿಶೀಲಿಸಬೇಕು’ ಎಂದು ಆಗ್ರಹಿಸಿದರು.
ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಮಾತನಾಡಿದರು. ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ, ಮುಖಂಡರಾದ ಶರಣಪ್ಪ ತಳವಾರ, ಸಂತೋಷ ಹಾದಿಮನಿ, ಶೋಭಾ ಬಾಣಿ, ಸುಧಾ ಹಾಲಕೈ, ಮಹಾನಂದಾ ಬಿರಾದಾರ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.