ADVERTISEMENT

ಧರ್ಮ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು: VHP ಮುಖಂಡ ಲಿಂಗರಾಜಪ್ಪ ಅಪ್ಪ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 8:27 IST
Last Updated 19 ಅಕ್ಟೋಬರ್ 2025, 8:27 IST
<div class="paragraphs"><p>ಲಿಂಗರಾಜಪ್ಪ ಅಪ್ಪ</p></div>

ಲಿಂಗರಾಜಪ್ಪ ಅಪ್ಪ

   

ಕಲಬುರಗಿ: ‘ಧರ್ಮದ ವಿಷಯದಲ್ಲಿ ಸರ್ಕಾರ ಹಾಗೂ ರಾಜಕಾರಣಿಗಳು ಹಸ್ತಕ್ಷೇಪ ಮಾಡಬಾರದು’ ಎಂದು ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ ಒತ್ತಾಯಿಸಿದರು.

‘ಲಿಂಗಾಯತ ಮಠಾಧಿಪತಿಗಳ ವಿರುದ್ಧ ಕನೇರಿಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾಡಿದ ಟೀಕೆಗೆ ಸಂಬಂಧಿಸಿದ ವಿವಾದ ಬಗೆಗೆ ಹರಿಸುವಷ್ಟು ಶಕ್ತಿಯು ಸಮಾಜದ ಹಿರಿಯರು, ಗುರುಗಳಿಗೆ ಇದೆ. ಇದು ಧರ್ಮದ ವಿಷಯ. ಇದರಲ್ಲಿ ಸರ್ಕಾರ, ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಹಸ್ತಕ್ಷೇಪ ಮಾಡಬಾರದು’ ಎಂದು ಭಾನುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ADVERTISEMENT

‘ಕನೇರಿ ಮಠಕ್ಕೆ 1,300 ವರ್ಷಗಳ ಇತಿಹಾಸವಿದೆ. ಆ ಮಠವು ಹಿಂದೂ ವೀರಶೈವ ಲಿಂಗಾಯತ ಸಮಾಜದ ಭಕ್ತಿ ಮತ್ತು ನಂಬಿಕೆಯ ಕೇಂದ್ರವಾಗಿದೆ. ಇಂಥ ಪರಂಪರೆಯುಳ್ಳ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿಯನ್ನು ರಾಜ್ಯ ಕೆಲವು ಜಿಲ್ಲೆಗಳಿಗೆ ಪ್ರಯಾಣಿಸುವುದನ್ನು ನಿರ್ಬಂಧಿಸಿದೆ. ಸ್ವಾಮೀಜಿ ಭೇಟಿ ಮೇಲಿನ ನಿಷೇಧವನ್ನೂ ಸರ್ಕಾರ ಕೂಡಲೇ ಹಿಂಪಡೆಯಬೇಕು. ಸಮಾಜದ ಧಾರ್ಮಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು’ ಎಂದರು.

‘ಕನೇರಿ ಸ್ವಾಮೀಜಿ ಕೆಟ್ಟ ಪದಗಳನ್ನು ಬಳಸಿದ್ದು ಸರಿಯೇ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಿಂಗರಾಜಪ್ಪ ಅಪ್ಪ, ‘ಅರಿಷಡ್ವರ್ಗಗಳನ್ನು ಸ್ವಾಮೀಜಿಗಳು ಸೇರಿದಂತೆ ಸಮಾಜದ ಎಲ್ಲರೂ ಮೀರಿ ನಿಲ್ಲಬೇಕಾಗುತ್ತದೆ. ಟೀಕೆ ವಿವಾದ, ಕ್ಷಮೆ ಕೋರುವ ವಿಚಾರಕ್ಕೆ ಸಂಬಂಧಿಸಿದಂತೆ ಕನೇರಿಯ ಕಾಡಸಿದ್ಧೇಶ್ವರ ಸ್ವಾಮೀಜಿ ಸೇರಿದಂತೆ ಸಮಾಜದ ಹಿರಿಯರೊಂದಿಗೆ ಶೀಘ್ರವೇ ಚರ್ಚಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

‘ದೇಶದಲ್ಲಿ 35 ಸಾವಿರದಷ್ಟು ಹಿಂದೂ ದೇವಸ್ಥಾನಗಳು ಸರ್ಕಾರದ ವ್ಯಾಪ್ತಿಯಲ್ಲಿವೆ. ಅವುಗಳನ್ನು ಸರ್ಕಾರಗಳು ಬಿಡುಗಡೆಗೊಳಿಸಿ, ಭಕ್ತರ ಅಧೀನಕ್ಕೆ ನೀಡಬೇಕು. ಬರೀ ಹಿಂದೂ ಧರ್ಮದ ದೇವಸ್ಥಾನಗಳಷ್ಟೇ ಏಕೆ ಧಾರ್ಮಿಕ ದತ್ತಿ ಇಲಾಖೆಗೆ ವ್ಯಾಪ್ತಿಯಲ್ಲಿವೆ? ಬೇರೆಯ ಧರ್ಮಗಳ ಧಾರ್ಮಿಕ ತಾಣಗಳು ಏಕಿಲ್ಲ?’ ಎಂದು ಪ್ರಶ್ನಿಸಿದ ಅವರು, ‘ಈ ಸಂಬಂಧ ದೇಶದ ಹಲವುರ ರಾಜ್ಯಗಳಲ್ಲಿ ಮನವಿ ಸಲ್ಲಿಸಲಾಗುತ್ತಿದೆ. ಅದಕ್ಕೆ ಸ್ಪಂದಿಸದಿದ್ದರೆ, ಹೋರಾಟ ನಡೆಸಲಾಗುವುದು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಎಚ್‌ಪಿ ಮುಖಂಡರಾದ ರಾಮಚಂದ್ರ ಸುಗೂರು, ಮಲ್ಹಾರಾವ್‌ ಗಾರಂಪಳ್ಳಿ, ಆನಂದತೀರ್ಥ ದೇಶಪಾಂಡೆ, ಅಂಬಾರಾಯ ಅಂಬಲಗಿ, ವಿನುತ್ ಜೋಶಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.