ADVERTISEMENT

ಕಾಂಗ್ರೆಸ್ ವಿರುದ್ಧ ಮೋದಿ ಸರ್ಕಾರದಿಂದ ತೆರಿಗೆ ಭಯೋತ್ಪಾದನೆ: ಪ್ರಿಯಾಂಕ್

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 6:32 IST
Last Updated 30 ಮಾರ್ಚ್ 2024, 6:32 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರಗಿ: ಕಾಂಗ್ರೆಸ್ ಹಾಗೂ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳನ್ನು ಗುರಿಯಾಗಿಸಿಕೊಂಡು ಕೇಂದ್ರದ ನರೇಂದ್ರ ‌ಮೋದಿ ಸರ್ಕಾರವು ನಮ್ಮ ಪಕ್ಷಗಳ ಖಾತೆಗಳನ್ನು ಜಪ್ತಿ ಮಾಡುವ ಮೂಲಕ ತೆರಿಗೆ ಭಯೋತ್ಪಾದನೆ ಮಾಡುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಐಟಿ ಇಲಾಖೆ ₹ 14 ಲಕ್ಷ ದೇಣಿಗೆಯ ಅಸೆಸ್‌ಮೆಂಟ್ ಸಿಗುತ್ತಿಲ್ಲ ಎಂದು ₹ 1,823.08 ಕೋಟಿ ತೆರಿಗೆ ಡಿಮ್ಯಾಂಡ್ ನೋಟಿಸ್ ಕೊಟ್ಟಿದ್ದಾರೆ. ಆದರೆ ಇದೇ ಅವಧಿಯಲ್ಲಿ ಬಿಜೆಪಿ ಖಾತೆಗೆ ಹೆಸರು, ವಿಳಾಸ ಇಲ್ಲದವರಿಂದ ದೇಣಿಗೆ ಬಂದಿದೆ. ಆದರೆ ಆ ಪಕ್ಷಕ್ಕೆ ಯಾವುದೇ ‌ನೋಟಿಸ್ ಕೊಟ್ಟಿಲ್ಲ ಎಂದು ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಹಾರ ಡೈರಿ‌ ಸಿಕ್ಕಿತ್ತು. ಈಶ್ವರಪ್ಪ ಮನೆಯಲ್ಲಿ ನೋಟು ಎಣಿಸುವ ಮಷಿನ್ ಸಿಕ್ಕಿತ್ತಲ್ಲ ಅದೇನಾಯ್ತು. ಅವರ ವಿರುದ್ಧ ಏಕೆ ತನಿಖೆಗಳು ನಡೆಯಲಿಲ್ಲ ಎಂದರು.

ADVERTISEMENT

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಜರ್ಮನಿ, ಅಮೆರಿಕ ಹಾಗೂ ವಿಶ್ವಸಂಸ್ಥೆಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಬಿಜೆಪಿಗೆ ಸೋಲಿನ ಭೀತಿ ಪ್ರಾರಂಭವಾಗಿದೆ. ಆಂತರಿಕ‌ ಸರ್ವೆ ಪ್ರಕಾರ ಆ ಪಕ್ಷಕ್ಕೆ 200 ಸೀಟು‌ ಬರಲ್ಲ. 'ಅಬ್ ಕೀ ಬಾರ್ ಚಾರ್ ಸೌ ಪಾರ್' ಎಂದು ಸುಮ್ಮನೆ ಹೇಳುತ್ತಾರೆ ಎಂದು ಟೀಕಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿರುವ ಡಾ.ಉಮೇಶ ಜಾಧವ ಸಂಸದರಂತೆ ವರ್ತಿಸುವ ಬದಲು ಮೋದಿ ಅಭಿಮಾನಿ ಬಳಗದ ಅಧ್ಯಕ್ಷರಂತೆ ವರ್ತಿಸುತ್ತಿದ್ದಾರೆ. ಜಾಧವ್ ಅವರು 50 ಸಾಧನೆ ಮಾಡಿರುವಾಗಿ ಹೇಳಿದ್ದಾರೆ. ಕೇವಲ ಐದು ಸಾಧನೆ ತಿಳಿಸಲಿ ಎಂದು ಹೇಳಿದ್ದೆ. ಅದಕ್ಕೆ ಪ್ರತಿಯಾಗಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷರು ನಮ್ಮ ಕಚೇರಿಗೆ ಪತ್ರ ಕಳಿಸಿ ನಮ್ಮ ಸರ್ಕಾರ‌ದ ಸಾಧನೆ ಬಗ್ಗೆ ಮಾಹಿತಿ ಕೇಳಿ ಪತ್ರ ಬರೆದಿದ್ದರು. ಆಗ ನಮ್ಮ ಸಾಧನೆಯನ್ನು ಅವರಿಗೆ ತೋರಿಸಲು ಕಾಂಗ್ರೆಸ್ ಯುವ ಘಟಕದವರು ಅವರ ಕಚೇರಿಯ ಮುಂದೆ ಬಸ್ ತೆಗೆದುಕೊಂಡು ಹೋದರೆ ಯಾರೊಬ್ಬರೂ ಬರಲಿಲ್ಲ ಎಂದು ಟೀಕಿಸಿದರು.

ಈಗಲೂ ಕಾಲ‌ ಮಿಂಚಿಲ್ಲ. ಪಕ್ಷದಿಂದಲೇ ಎ.ಸಿ.‌ ಬಸ್ ಮಾಡುತ್ತೇವೆ. ಅವರು ಬಯಸಿದಲ್ಲಿ ಅಭಿವೃದ್ಧಿಯ ಬಹಿರಂಗ ಚರ್ಚೆಗೆ ಅವರನ್ನು ಕರೆದುಕೊಂಡು ಹೋಗುತ್ತೇವೆ ಎಂದು ಸವಾಲು ಹಾಕಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಸಂಸದರಾಗಿದ್ದಾಗ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಓದಿದ ಪ್ರಿಯಾಂಕ್ ಅವರು, ಸಂಸದ ಜಾಧವ ಅವರು ತಮ್ಮ ಕಾಲದಲ್ಲಿ ಕಟ್ಟಿಸಿದ ಒಂದು ಕಟ್ಟಡವನ್ನಾದರೂ ತೋರಿಸಲಿ ಎಂದರು.

ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಜಿಲ್ಲೆಯ ಭೀಮಾ ನದಿಗೆ ನೀರು ಹರಿಸುವ ಕುರಿತು ಮಹಾರಾಷ್ಟ್ರಕ್ಕೆ ಪತ್ರ ಬರೆದರೂ ಇನ್ನೂ ಸ್ಪಂದನೆ ಸಿಕ್ಕಿಲ್ಲ. ಈ ಬಗ್ಗೆ ರಾಜ್ಯದಿಂದ ನಿಯೋಗ ಹೋಗುವ ಚಿಂತನೆ ಇದೆ. ಚುನಾವಣಾ ‌ಆಯೋಗದ ಅನುಮತಿ ‌ಪಡೆಯಬೇಕಿದೆ ಎಂದರು.

ಭೀಮಾ ನದಿಗೆ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಡಾ.ಉಮೇಶ ಜಾಧವ ಅವರು ಜವಾಬ್ದಾರಿಯಿಂದ ವರ್ತಿಸಬೇಕು. ಹೋರಾಟಗಾರರ ಬಿಪಿ ಚೆಕ್ ಮಾಡಲು ಸರ್ಕಾರಿ ವೈದ್ಯರಿದ್ದಾರೆ. ಜಾಧವ ಅವರು ಬಿಪಿ ಚೆಕ್ ಮಾಡುವ ಅಗತ್ಯವಿಲ್ಲ. ಅದರ ಬದಲು ಮಹಾರಾಷ್ಟ್ರದಲ್ಲಿ ಅವರದೇ ಸರ್ಕಾರ‌ ಇದೆಯಲ್ಲ. ಅವರೊಂದಿಗೆ ಮಾತನಾಡಿ ನೀರು ಹರಿಸಲಿ ಎಂದು ಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಶಾಸಕ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಕುಮಾರ ಮೋದಿ, ಡಾ. ಕಿರಣ್ ದೇಶಮುಖ, ಪ್ರವೀಣ ಹರವಾಳ, ಭೀಮನಗೌಡ ಪರಗೊಂಡ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.