ADVERTISEMENT

ಪಥಸಂಚಲನವನ್ನು ಆರ್‌ಎಸ್‌ಎಸ್‌ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ: ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 8:21 IST
Last Updated 31 ಅಕ್ಟೋಬರ್ 2025, 8:21 IST
<div class="paragraphs"><p>ಪ್ರಿಯಾಂಕ್ ಖರ್ಗೆ</p></div>

ಪ್ರಿಯಾಂಕ್ ಖರ್ಗೆ

   

ಕಲಬುರಗಿ: ‘ಆರ್‌ಎಸ್‌ಎಸ್‌ನವರು ಪಥಸಂಚಲನೆ ವಿಚಾರವನ್ನು ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ನಗರದ ಐವಾನ್–ಇ–ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ADVERTISEMENT

‘ಅದೇ ದಿನದಂತೆ ಅಲ್ಲೇ ಪಥಸಂಚಲನ ಮಾಡುತ್ತೇವೆ ಎಂದು ಆರ್‌ಎಸ್‌ಎಸ್ ಹೇಳಿದೆ. ಈ ಬಗ್ಗೆ ಕೆಲವು ಸಂಘಟನೆಗಳು ಕೂಡಾ ಅದೇ ದಿನ ಅಲ್ಲೇ ತಾವೂ ಪಥಸಂಚಲನ ಮಾಡುವುದಾಗಿ ಅರ್ಜಿ ಸಲ್ಲಿಸಿವೆ.‌ ಪ್ರಸ್ತುತ ಈ ವಿಚಾರ ಹೈಕೋರ್ಟ್‌ನಲ್ಲಿದೆ. ಈ ವಿಷಯದಲ್ಲಿ ನ್ಯಾಯಾಲಯ ನೀಡುವ ಆದೇಶವನ್ನು ಎಲ್ಲರೂ ಪಾಲಿಸಬೇಕಾಗುತ್ತದೆ’ ಎಂದರು.

‘ಕಲಬುರಗಿ ಸೇರಿದಂತೆ ಎಲ್ಲ ಕಡೆ ಮಾಹಿತಿ ನೀಡಿದ್ದಾರೆ ಹೊರತು ಅನುಮತಿ ಕೇಳಿಲ್ಲ. ಇವರು ಕೇಳಿದ ತಕ್ಷಣ ಭದ್ರತೆ ಕೊಡಲು ಪೊಲೀಸರಿಗೇನು ಕೆಲಸ ಇಲ್ಲವಾ? ಚಿತ್ತಾಪುರದಲ್ಲಿ ಅನುಮತಿ ನಿರಾಕರಿಸಿದ್ದರಿಂದ ಹೈಕೋರ್ಟ್‌ಗೆ ಹೋದರು. ಇತರರು ಕೂಡಾ ನಮಗೂ ಅನುಮತಿ ಕೊಡಿ ಎಂದರು. ನೋಂದಣಿಯಾಗದ ಒಂದು ಸಂಸ್ಥೆಯ ಕಾರ್ಯಕರ್ತರು ಕೈಯಲ್ಲಿ ದೊಣ್ಣೆ ಹಿಡಿದು ಪಥಸಂಚಲನ ಮಾಡಿದರೆ, ಸಾರ್ವಜನಿಕರಿಗೆ ಭೀತಿ ಆಗುವುದಿಲ್ಲವಾ? ಏನಾದರೂ ಹೆಚ್ಚು‌ಕಮ್ಮಿಯಾದರೆ ಯಾರು ಜವಾಬ್ದಾರರು?’ ಎಂದು ಪ್ರಶ್ನಿಸಿದರು.

‘ಲಾಠಿ ಹಿಡಿಯುವ ವಿಚಾರದಲ್ಲಿ‌ ಎಲ್ಲಾ ಕಡೆ ಏನೂ ತಕರಾರು ಇಲ್ಲ. ಚಿತ್ತಾಪುರದಲ್ಲಿ ಮಾತ್ರವೇ ಯಾಕೆ?’ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಚಿತ್ತಾಪುರದಲ್ಲಿ ಕಾನೂನು ಇದೆ. ಹಾಗೆ ಎಲ್ಲ‌ ಕಡೆಯೂ ಇದೆ. ಆದರೆ‌ ಚಿತ್ತಾಪುರ ಯುವಕರ ಭವಿಷ್ಯದ ಪ್ರಶ್ನೆ ಬಂದಾಗ ಕಾನೂನು ಪ್ರಕಾರ ಕ್ರಮ ಜರುಗಿಸಲಾಗಿದೆ. ಈಗ ವಿಚಾರ ಹೈಕೋರ್ಟ್‌ನಲ್ಲಿದೆ. ನ್ಯಾಯಾಲಯ ಲಾಠಿ‌ ಹಿಡಿದು ಪಥಸಂಚಲನ ನಡೆಸಲು ಅನುಮತಿ ನೀಡಿದರೆ‌ ನಮ್ಮದೇನು ಅಭ್ಯಂತರವಿಲ್ಲ’ ಎಂದರು.

ಈ ಎಲ್ಲ ಬೆಳವಣಿಗೆ ನಂತರ ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆಯಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್, ‘ಮಾಡಲಿ ಬಿಡಿ. ಪ್ರಶ್ನೆ ಎತ್ತಿದ್ದು ನಾನೇ ತಾನೆ. ಬೇರೆಯವರ ಐಡಿಯಾಲಜಿ ಬಗ್ಗೆ ನಾನು ಹೇಳುವುದಿಲ್ಲ. ನನ್ನ ಐಡಿಯಾಲಜಿ, ಸಿಎಂ ಅವರ ಐಡಿಯಾಲಜಿ, ಖರ್ಗೆ ಸಾಹೇಬರ ಐಡಿಯಾಲಜಿ, ರಾಹುಲ್ ಗಾಂಧಿಯವರ ಐಡಿಯಾಲಜಿ ಸರಿ‌ ಇದೆಯಲ್ಲ, ಅಷ್ಟು ಸಾಕು’ ಎಂದರು.

‘ಸೇಡಂ‌ನಲ್ಲಿ ಕಾನೂನು ಉಲ್ಲಂಘನೆ ಮಾಡಿ ಪಥ ಸಂಚಲನ ಮಾಡಿದ್ದಾರೆ. ಅದನ್ನು ಕೋರ್ಟ್ ಗಮನಕ್ಕೆ ತರಲಾಗುವುದು’ ಎಂದ ಸಚಿವರು, ‘ಎಲ್ಲವೂ ಪರಿಗಣನೆ ಆಗುತ್ತದೆ. ಅಂದಿನ ಶಾಂತಿ ಸಭೆಯಲ್ಲಿ ಆರ್‌ಎಸ್‌ಎಸ್ ಬದಲು ಬಿಜೆಪಿಯವರಿಗೇನು ಕೆಲಸ? ಅಶೋಕ ಪಾಟೀಲ ಯಾಕೆ ಅಂದಿನ ಶಾಂತಿ ಸಭೆಗೆ ಹೋಗಿಲ್ಲ? ಅವರ ಬದಲು ಬಿಜೆಪಿಯವರು ಯಾಕೆ ಹೋಗಿದ್ದರು? ಅವರು ಶಾಂತಿ ಸಭೆಗೆ ಬಂದಿದ್ದರೋ ಅಥವಾ ಶಾಂತಿ ಭಂಗ ಉಂಟು ಮಾಡಲು ಬಂದಿದ್ದರೋ?’ ಎಂದು ಪ್ರಶ್ನಿಸಿದರು.

‘ಆರ್‌ಎಸ್‌ಎಸ್ ನೋಂದಣಿ ಪತ್ರದ ವಿಚಾರ ಕುರಿತಂತೆ ಹೈಕೋರ್ಟ್‌ನಲ್ಲಿ ಸರಿಯಾದ ಸಮಯದಲ್ಲಿ ಪ್ರಶ್ನೆ ಮಾಡಲಾಗುವುದು. ಈಗ ಪಥಸಂಚಲನದ ವಿಚಾರ ಮಾತ್ರ ಬಂದಿದೆ. ಅನುಮತಿ‌ ಸಿಕ್ಕರೆ ನೋಂದಣಿ ವಿಚಾರದಲ್ಲಿಯೂ ಕಾನೂನು ಪ್ರಕಾರ ನೋಡಿಕೊಳ್ಳಲಾಗುವುದು’ ಎಂದು ಸಚಿವ ಪ್ರಿಯಾಂಕ್‌ ಹೇಳಿದರು.

‘ಸಾರ್ವಜನಿಕ ಸ್ಥಳಗಳ ಬಳಕೆಗೆ ಸಂಬಂಧಿಸಿದಂತೆ ಸರ್ಕಾರದ ಆದೇಶದ ನಂತರ, ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರು ನನ್ನ ಮೇಲೆ‌ ಮುಗಿಬಿದ್ದರು. ಬಿಜೆಪಿಗೂ ಆರ್‌ಎಸ್‌ಎಸ್‌ಗೂ ಏನು ಸಂಬಂಧ? ನಾನು ಪತ್ರ ಬರೆದ ನಂತರ ಸಾವಿರಾರು ಕರೆಗಳು ಬಂದವು. ನಾನು ಇದನ್ನು ಪ್ರಚಾರಕ್ಕೆ ಮಾಡುತ್ತಿದ್ದೇನೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ನಾನು ಸರ್ಕಾರದಲ್ಲಿ‌ ಸಚಿವನಾಗಿದ್ದೇನೆ‌. ನನಗೆ ಯಾಕೆ ಪ್ರಚಾರ? ಒಬ್ಬ ಕಾಲ್ ಮಾಡಿ ನನಗೆ ಜೀವ ಬೆದರಿಕೆ ಹಾಕಿದ್ದಾನೆ. ನನ್ನ ಕುಟುಂಬ ವರ್ಗದವರನ್ನು ಕೂಡಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದನ್ನು ಬಿಜೆಪಿಯ ಯಾರೊಬ್ಬರೂ ಖಂಡಿಸಲಿಲ್ಲ. ಪೊಲೀಸರು ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡು ಅವನನ್ನು ಬಂಧಿಸಿದ್ದಾರೆ. ನನಗೆ ಕರೆ ಮಾಡಿದ ವ್ಯಕ್ತಿ ತನ್ನ ಕಣಕಣದಲ್ಲಿಯೂ ಆರ್‌ಎಸ್‌ಎಸ್ ಇದೆ ಅಂದಿದ್ದಾನೆ. ಬಂಧಿತ ವ್ಯಕ್ತಿ ಬಡ ಕುಟುಂಬದವನು. ಆತನನ್ನು ಪ್ರಚೋದಿಸಿದವರು ಯಾರು? ಅವರಿಗೂ ಶಿಕ್ಷೆಯಾಗಬೇಕಲ್ಲವೇ?’ ಎಂದು ಪ್ರಶ್ನಿಸಿದರು.

‘ಬೇರೆ ಬೇರೆ ಕಡೆ ನಡೆದ ಪಥಸಂಚಲನದಲ್ಲಿ ಭಾಗಿಯಾದವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸರ್ವೀಸ್ ರೂಲ್ಸ್ ಪ್ರಕಾರ ಕ್ರಮ ಜರುಗಿಸಲಾಗುವುದು. ಕೇಂದ್ರ ಸರ್ಕಾರದ‌ ಆದೇಶ ರಾಜ್ಯ ಸರ್ಕಾರದ ನೌಕರರಿಗೂ ಅನ್ವಯವಾಗುತ್ತದೆ ಎಂದು‌ ಭಾವಿಸಿದ್ದಾರೆ. ಅದು ಹಾಗೆ ಆಗುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.