ಆಳಂದ (ಕಲಬುರಗಿ ಜಿಲ್ಲೆ): ‘ನಾಲ್ಕು ಸಾರಿಗೆ ನಿಗಮಗಳಲ್ಲಿ ಖಾಲಿ ಇರುವ 2,736 ಅಧಿಕಾರಿ, ನೌಕರರ ಹುದ್ದೆಗಳ ಭರ್ತಿಗೆ ಅನುಮತಿ ನೀಡುವಂತೆ ಕೋರಿ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ₹5 ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ನಿರ್ಮಿಸಲಿರುವ ಬಸ್ ನಿಲ್ದಾಣದ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘2016ರಿಂದ 2023ರವರೆಗೆ ನೇಮಕಾತಿ ಮಾಡದ ಕಾರಣ ಬಸ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಸ್ಥೆಯಲ್ಲಿ ಒಂದು ಸಾವಿರ ಅನುಕಂಪದ ಹುದ್ದೆ ಸೇರಿದಂತೆ ಇದುವರೆಗೆ 10 ಸಾವಿರ ನೌಕರರನ್ನು ನೇಮಕಾತಿ ಮಾಡಿಕೊಂಡಿದ್ದೇವೆ’ ಎಂದರು.
‘ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಪೈಕಿ ಉತ್ತಮ ಹಣಕಾಸಿನ ಪರಿಸ್ಥಿತಿ ಹೊಂದಿರುವುದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮಾತ್ರ. ಎರಡು ವರ್ಷಗಳ ಅವಧಿಯಲ್ಲಿ ನಿಗಮಕ್ಕೆ 1,031 ಎಕ್ಸ್‌ಪ್ರೆಸ್, ಸ್ಲೀಪರ್ ಬಸ್‌ಗಳನ್ನು ಒದಗಿಸಿದ್ದೇವೆ. ಪ್ರಸಕ್ತ ವರ್ಷ ಕೆಎಸ್‌ಆರ್‌ಟಿಸಿಗೆ 900, ವಾಯವ್ಯ ಸಾರಿಗೆ ನಿಗಮಕ್ಕೆ 700, ಕೆಕೆಆರ್‌ಟಿಸಿಗೆ 400 ಬಸ್ ನೀಡಿದ್ದೇವೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದರಿಂದ ಹೆಚ್ಚಿನ ಬಸ್‌ಗಳ ಖರೀದಿಗೆ ಆರ್ಥಿಕ ನೆರವು ನೀಡುವಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಕೋರಿಕೆ ಸಲ್ಲಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.