ADVERTISEMENT

ಮಡಿಕೇರಿ | ದಸರಾ ದಶಮಂಟಪೋತ್ಸವ: ರಾರಾಜಿಸಲಿದೆ 20 ಅಡಿ ಎತ್ತರದ ಕಲಾಕೃತಿ!

ಸೀತಾಪಹರಣ, ರಾವಣ ಸಂಹಾರ ಕಥಾಹಂದರ ಹೆಣೆಯಲು ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿ ಸಜ್ಜು

ಕೆ.ಎಸ್.ಗಿರೀಶ್
Published 29 ಸೆಪ್ಟೆಂಬರ್ 2022, 20:30 IST
Last Updated 29 ಸೆಪ್ಟೆಂಬರ್ 2022, 20:30 IST
ಕೋಟೆ ಶ್ರೀಮಾರಿಯಮ್ಮ ದೇಗುಲ
ಕೋಟೆ ಶ್ರೀಮಾರಿಯಮ್ಮ ದೇಗುಲ   

ಮಡಿಕೇರಿ: ಈ ಬಾರಿಯ ವಿಜಯದಶಮಿಯಂದು ನಡೆಯಲಿರುವ ದಸರಾ ದಶಮಂಟಪೋತ್ಸವದಲ್ಲಿ 20 ಅಡಿ ಎತ್ತರದ ಕಲಾಕೃತಿಯೊಂದು ಗಮನ ಸೆಳೆಯಲಿದೆ.

ಕೋಟೆ ಶ್ರೀ ಮಾರಿಯಮ್ಮ ಯುವಕ ಮಿತ್ರ ಮಂಡಳಿಯು ತನ್ನ 47ನೇ ವರ್ಷದ ಮಂಟಪೋತ್ಸವವನ್ನು ಹಿಂದೆಂದಿಗಿಂತಲೂ ಹೆಚ್ಚು ಅದ್ದೂರಿಯಾಗಿ ನಡೆಸಲು ನಿರ್ಧರಿಸಿದೆ. ಇದಕ್ಕಾಗಿಯೇ ₹ 22 ಲಕ್ಷವನ್ನು ತೆಗೆದಿರಿಸಲಾಗಿದ್ದು, ಬೃಹತ್ ಪ್ರಮಾಣದ ಸೆಟ್‌ನ್ನು ಹಾಕಲು ಸಿದ್ಧತೆ ನಡೆಸಿದೆ.

‘ಸೀತಾಪಹರಣ ಹಾಗೂ ರಾವಣ ಸಂಹಾರ’ ಕಥಾವಸ್ತುವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಇದಕ್ಕಾಗಿಯೇ 24 ಕಲಾಕೃತಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಅತ್ಯಾಕರ್ಷಕವಾದ ಪ್ರಸ್ತುತಿಗಾಗಿ ಎಲ್ಲ ಬಗೆಯ ತಯಾರಿಗಳೂ ನಡೆಯುತ್ತಿವೆ. ಇದರ ಆರ್ಚ್‌ ಬೋರ್ಡ್‌ನ್ನು ದಿಂಡಿಗಲ್‌ನಿಂದ ತಯಾರಿಸಲಾಗುತ್ತಿದೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಮಿತಿಯ ಕಾರ್ಯದರ್ಶಿ ಕಿಶೋರ್, ‘20 ಅಡಿ ಎತ್ತರದ ಕಲಾಕೃತಿ ಈ ಬಾರಿಯ ವಿಶೇಷ ಎನಿಸಿದೆ. ಕೆಎಸ್ಆರ್‌ಟಿಸಿ ಬಸ್‌ನಿಲ್ದಾಣದ ಮುಂಭಾಗ ಸೇರಿದಂತೆ 5ರಿಂದ 6 ಕಡೆ ಪ್ರದರ್ಶನ ನೀಡಲಿದ್ದೇವೆ’ ಎಂದು ತಿಳಿಸಿದರು.

ಸಮಿತಿ ಅಧ್ಯಕ್ಷ ಬ್ರಿಜೇಶ್ ಪ್ರತಿಕ್ರಿಯಿಸಿ, ‘ಅಮೋಘ ರೀತಿಯಲ್ಲಿ ಸೀತಾಪಹರಣ ಹಾಗೂ ರಾವಣ ಸಂಹಾರವನ್ನು ಪ್ರಸ್ತುತಪಡಿಸಲು ನಿರ್ಧರಿಸಿದ್ದೇವೆ. ಇದಕ್ಕಾಗಿ ಎಲ್ಲ ಬಗೆಯ ಸಿದ್ಧತೆಗಳೂ ನಡೆದಿವೆ’ ಎಂದರು.

ತಾರಕಸುರನ ವಧೆಗಾಗಿ ಸಿದ್ಧತೆ!
ಕಳೆದ 48 ವರ್ಷಗಳಿಂದಲೂ ದಸರಾ ದಶಮಂಟಪೋತ್ಸವದಲ್ಲಿ ಭಾಗವಹಿಸುತ್ತಿರುವ ಇಲ್ಲಿನ ಕೋದಂಡ ರಾಮಮಂದಿರವು ಈ ಬಾರಿ ತಾರಕಸುರ ವಧೆ ಪ್ರಸಂಗವನ್ನು ಪ್ರಸ್ತುತಪಡಿಸಲಿದೆ.

ಶಿವಪುತ್ರನಾದ ಕಾರ್ತಿಕೇಯನು ತಾರಕಾಸುರನನ್ನು ಸಂಹರಿಸುವ ದೃಶ್ಯಗಳನ್ನು ನಯನ ಮನೋಹರವಾಗಿ ಹಾಗೂ ಅಷ್ಟೇ ರುದ್ರ ರಮಣೀಯವಾಗಿ ಕಟ್ಟಿಕೊಡಲು ಭರದ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ₹ 16 ಲಕ್ಷ ವೆಚ್ಚದಲ್ಲಿ ಬೃಹತ್ ಮಂಟಪ ಸಿದ್ಧವಾಗುತ್ತಿದೆ. ಇದರ ಆರ್ಚ್‌ ಬೋರ್ಡ್‌ ಸಹ ದಿಂಡಿಗಲ್‌ನಿಂದ ತರಿಸಲಾಗುತ್ತಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಮಿತಿ ಅಧ್ಯಕ್ಷ ಎಚ್.ಎನ್.ತಿಮ್ಮಯ್ಯ, ‘ಒಟ್ಟು 19 ಕಲಾಕೃತಿಗಳು ಮಂಟಪದಲ್ಲಿರಲಿವೆ. ದೇಗುಲದ ಮುಂಭಾಗ, ಚೌಕಿ, ಮಾರುಕಟ್ಟೆ ಸೇರಿದಂತೆ 3–4 ಪ್ರದರ್ಶನ ನೀಡಲು ಸಿದ್ಧತೆ ನಡೆಸಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.