ಮಡಿಕೇರಿ: ಪಟಾಕಿ ಎಂದರೆ ಅದು ವಿಜಯ, ಸಂಭ್ರಮ, ಸಂತಸ, ಸಡಗರದ ಸಂಕೇತ. ಇತ್ತೀಚೆಗೆ ಅದು ಪ್ರತಿಷ್ಠೆಯ ಸಂಕೇತವೂ ಆಗಿದೆ. ಹಣ ಕೊಟ್ಟು ಪಟಾಕಿ ಖರೀದಿಸಿ ಅದನ್ನು ಸುಡುವ ಮೂಲಕ ಸಂಭ್ರಮಪಡುತ್ತಾರೆ. ದೀಪಾವಳಿ ಎಂದರೆ ಅದರ ಹೆಸರಿನಲ್ಲೇ ಅಡಗಿರುವ ದೀಪವನ್ನು ಬಿಟ್ಟು ಪಟಾಕಿ ಹಬ್ಬವನ್ನಾಗಿ ಆಚರಿಸುವವರೇ ಹೆಚ್ಚು.
ದೇಶದ ಉದ್ದಗಲಕ್ಕೂ ಪಟಾಕಿ ಮಾರಾಟ, ಖರೀದಿ, ಅದನ್ನು ಸುಡುವಿಕೆಯನ್ನು ಕಾಣಬಹುದು. ಇದರಿಂದ ಶಬ್ದಮಾಲಿನ್ಯ, ವಾಯುಮಾಲಿನ್ಯ, ಬೆಳಕಿನ ಮಾಲಿನ್ಯ, ಭೂಮಾಲಿನ್ಯ... ಒಂದೇ ಎರಡೇ ಅನೇಕ ಬಗೆಯ ಮಾಲಿನ್ಯಗಳು ಉಂಟಾಗುತ್ತವೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದರೂ ಪಟಾಕಿ ಸುಡುವಿಕೆಯನ್ನು ಜನರು ಬಿಟ್ಟಿಲ್ಲ.
ಹಾಗೆ ನೋಡಿದರೆ, ಬೇರೆ ಜಿಲ್ಲೆಗಳಲ್ಲಿ ಪಟಾಕಿ ಸುಡುವುದಕ್ಕೂ, ಕೊಡಗು ಜಿಲ್ಲೆಯಲ್ಲಿ ಪಟಾಕಿ ಸುಡುವುದಕ್ಕೂ ಭಾರಿ ವ್ಯತ್ಯಾಸ ಇದೆ. ಕೊಡಗು ರಾಜ್ಯದಲ್ಲೇ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಪರಿಸರವನ್ನು ಹೊಂದಿದೆ. ಬೇರೆ ಜಿಲ್ಲೆಗಳಿಗಿಂತ ಹೆಚ್ಚು ಜೀವವೈವಿಧ್ಯವನ್ನು ಹೊಂದಿದೆ. ಬೇರೆ ಜಿಲ್ಲೆಯಲ್ಲಿ ಅಪರೂಪ ಎನಿಸುವ ಅಥವಾ ಇಲ್ಲವೇ ಇಲ್ಲ ಎನಿಸುವ ಅನೇಕ ಹುಳು ಹುಪ‍್ಪಟೆಗಳು, ಚಿಟ್ಟೆ, ಪತಂಗಳು, ಕೀಟಗಳೂ ಇಲ್ಲಿವೆ. ಇಂತಹ ಪರಿಸರದಲ್ಲಿ ಪಟಾಕಿ ಸುಡುವುದರಿಂದ ಆಗುವ ಮಾಲಿನ್ಯದ ಪರಿಣಾಮ ಬೇರೆ ಜಿಲ್ಲೆಗಳಲ್ಲಿ ಆಗುವುದಕ್ಕಿಂತ ಹೆಚ್ಚು ಎಂಬುದು ಪರಿಸರವಾದಿಗಳ ಅಭಿಪ್ರಾಯ.
ಪಟಾಕಿ ಬದಲಿಗೆ ದೀಪ ಹೊತ್ತಿಸಿ, ಬೆಳಗಿಸಿ ಎಂಬ ಪರಿಸರವಾದಿಗಳ ಮಾತಿಗೆ ಇನ್ನೂ ಬೆಲೆ ಸಿಕ್ಕಿಲ್ಲ. ದೀಪಗಳು ಅಗ್ಗವಾದರೂ ದುಬಾರಿಯಾದ ಪಟಾಕಿಯನ್ನೇ ಖರೀದಿಸಿ, ಅದನ್ನು ಸುಡುವವರೇ ಹೆಚ್ಚಿದ್ದಾರೆ.
ಇಂತಹ ಹೊತ್ತಿನಲ್ಲಿ ಕೊಡಗಿನಲ್ಲಿ ಪಟಾಕಿಗಳಿಂದಾಗುವ ಮಾಲಿನ್ಯದ ಪರಿಣಾಮಗಳನ್ನು ಯುವಜನರಿಗೆ, ಹಿರಿಯರಿಗೆ ಹೇಳುವದಕ್ಕಿಂತ ಮಕ್ಕಳಲ್ಲಿ ಅರಿವು ಮೂಡಿಸಿ ಅವರು ಈಗ ಹಾಗೂ ಮುಂದೆ ಪಟಾಕಿ ಬೇಡ ಎನ್ನುವಂತೆ ಮಾಡುವ ಪ್ರಯತ್ನಗಳೂ ಬೇರೆ ಜಿಲ್ಲೆಗಳಿಗಿಂತ ಅತ್ಯಂತ ಹೆಚ್ಚು ಕೊಡಗಿನಲ್ಲಿ ನಡೆಯುತ್ತಿರುವುದು ವಿಶೇಷ ಎನಿಸಿದೆ.
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಶಿಕ್ಷಣ ಇಲಾಖೆಯ ಜೊತೆಗೆ ರಾಷ್ಟ್ರೀಯ ಹಸಿರು ಪಡೆಯ ಇಕೊ ಕ್ಲಬ್ ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಡಗು ಜಿಲ್ಲಾ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ, ರೋವರ್ಸ್ ಮತ್ತು ರೇಂಜರ್ಸ್ ಘಟಕಗಳು, ಎನ್‍ಎಸ್‍ಎಸ್ ಘಟಕಗಳು ಪ್ರತಿ ವರ್ಷವೂ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿವೆ. ಈ ಮೂಲಕ ಮುಂದಿನ ತಲೆಮಾರು ಪಟಾಕಿಗಳನ್ನು ತಿರಸ್ಕರಿಸುವಂತೆ ಮಾಡುವ ಪ್ರಯತ್ನಗಳನ್ನು ಮಾಡುತ್ತಿದೆ.
ಈಗ ಸುಪ್ರೀಂಕೋರ್ಟ್ ಕೇವಲ ಹಸಿರು ಪಟಾಕಿಗಳಿಗಷ್ಟೇ ಅವಕಾಶ ಕೊಟ್ಟಿದೆ. ಆದರೆ, ಹಸಿರು ಬಣ್ಣದ ಒಳಗೆ ಇರುವ ಕೆಂಪು ಅರ್ಥಾತ್ ಹಾನಿಕಾರಕ ಪಟಾಕಿಗಳ ಮಾರಾಟವನ್ನು ಕಂಡು ಹಿಡಿಯುವುದು, ತಡೆಯುವುದು ಯಾರು ಎನ್ನುವುದು ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು ಎಂಬ ಗಾದೆ ಮಾತಿನಂತಾಗಿದೆ.
ಈ ಕೆಲಸ ಪೊಲೀಸರದ್ದು ಎಂದು ನಗರಸಭೆಯವರು, ನಗರಸಭೆಯವರು ಮಾಲಿನ್ಯ ನಿಯಂತ್ರಣ ಮಂಡಳಿಯದ್ದೆಂದು ಮಾಲಿನ್ಯ ನಿಯಂತ್ರಣ ಮಂಡಳಿಯವರು ತಮ್ಮಲ್ಲಿ ಸಿಬ್ಬಂದಿ ಇಲ್ಲವೆಂದು ಹೀಗೆ ತಪಾಸಣೆ ಮತ್ತು ತಡೆಯುವ ಜವಾಬ್ದಾರಿಯನ್ನು ಯಾರೂ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ, ಹಸಿರು ಪಟಾಕಿಯ ಹೆಸರಿನಲ್ಲಿ ಹಾನಿಕಾರಕ ಪಟಾಕಿಗಳ ಮಾರಾಟ ಅವ್ಯಾಹತವಾಗಿ ನಡೆದಿದೆ. ಇದಕ್ಕೆ ಗಗನದಲ್ಲಿ ಸಿಡಿಯುವ, ನೆಲದ ಮೇಲೆ ಅಬ್ಬರಿಸುವ, ವಿಪರೀತ ಹೊಗೆ ಸೂಸುವ ಪಟಾಕಿಗಳ ದಹನವೇ ಸಾಕ್ಷಿಯಾಗಿದೆ.
ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ಧ ಹಾಗೂ ವಾಯು ಮಾಲಿನ್ಯ ನಿಯಂತ್ರಣದಲ್ಲಿಟ್ಟು ಹಬ್ಬವನ್ನು ‘ಹಸಿರು ದೀಪಾವಳಿ-ಸ್ವಸ್ಥ ದೀಪಾವಳಿ ಪರಿಸರ ಸ್ನೇಹಿ ದೀಪಾವಳಿ’ಯನ್ನಾಗಿ ಆಚರಿಸಲು ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಕೋರಿದ್ದಾರೆ. ಯಾವುದೇ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ ಅದಕ್ಕೆ ಕಾರಣರಾದವರ ಮೇಲೆ ಕಾಯ್ದೆಯನುಸಾರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗುವುದು ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಡಳಿತವು 2025 ನೇ ಸಾಲಿನ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ಧ ವಾಯು ಮಾಲಿನ್ಯ ನಿಯಂತ್ರಣದಲ್ಲಿಡಲು ಹಾಗೂ ಸಾರ್ವಜನಿಕ ಆಸ್ತಿ ಮತ್ತು ಅರೋಗ್ಯ ಸಂರಕ್ಷಣೆಯ ಹಿತದೃಷ್ಠಿಯಿಂದ ಕೇಂದ್ರ ಸರ್ಕಾರದ ಪರಿಸರ (ಸಂರಕ್ಷಣಾ) ನಿಯಮಾವಳಿ 1986 ತಿದ್ದುಪಡಿ 1999 ಮತ್ತು 2000 ಅಡಿಯಲ್ಲಿ ನಿಗದಿಪಡಿಸಿರುವ ಮಾನಕಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದಲ್ಲಿ ಅನುಮತಿಸಿರುವ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಇತರ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ. ಪಟಾಕಿ ಮಾರಾಟ ಮಾಡುವವರು ಹಾಗೂ ಪಟಾಕಿ ಸಂಗ್ರಹಿಸುವ ಗೋದಾಮುಗಳನ್ನು ಸಂಬಂಧಪಟ್ಟ ಎಲ್ಲಾ ಇಲಾಖೆಯ ಅನುಮತಿ ಪಡೆಯತಕ್ಕದ್ದು ಎಂದು ಅವರು ಆದೇಶಿಸಿದ್ದಾರೆ. 125 ಡೆಸಿಬಲ್‍ಗಳಿಗಿಂತ ಹೆಚ್ಚು ಶಬ್ಧ ಉಂಟುಮಾಡುವ ಪಟಾಕಿಗಳ ದಾಸ್ತಾನು ಮಾರಾಟ ಹಾಗೂ ಉಪಯೋಗಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸುಪ್ರೀಂಕೋರ್ಟ್ ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದೆ. ಸುಪ್ರೀಂಕೋರ್ಟ್ ಸೂಚನೆಯನ್ನು ಚಾಚೂತಪ್ಪದೇ ಪಾಲಿಸಬೇಕು ಎಂದು ಅವರು ಹೇಳಿದ್ದಾರೆ. ಸುಪ್ರೀಂಕೋರ್ಟ್ ಹಾಗೂ ಹಸಿರು ನ್ಯಾಯ ಪೀಠದ ಆದೇಶದಂತೆ ಎಲ್ಲಾ ಹಸಿರು ಪಟಾಕಿಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಹಾಗೂ ಕ್ಯೂಆರ್ ಕೋಡ್ ಇರುವ ಹಸಿರು ಪಟಾಕಿ (ಕಡಿಮೆ ಮಾಲಿನ್ಯ ಉಂಟುಮಾಡುವ) ಗಳನ್ನು ಮಾತ್ರ ಮಾರಾಟ ಮಾಡಬೇಕಿದೆ. ದಿನದ ಯಾವುದೇ ಸಮಯದಲ್ಲಿ ನಿಶಬ್ಧವಲಯಗಳೆಂದು ಘೋಷಿಸಲಾಗಿರುವ ಸ್ಥಳಗಳಲ್ಲಿ (ಆಸ್ಪತ್ರೆ ಶಾಲೆ ಪ್ರಾರ್ಥನಾಮಂದಿರ ವೃದ್ಧಾಶ್ರಮ ಇತ್ಯಾದಿಗಳು) ಸುತ್ತ ಮುತ್ತ ಯಾವುದೇ ರೀತಿಯ ಶಬ್ದ ಉಂಟುಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ 15 ವರ್ಷಗಳಿಂದಲೂ ಮಾಲಿನ್ಯಕಾರಕ ಪಟಾಕಿ ಸುಡುವುದರಿಂದ ಉಂಟಾಗುವ ಅನಾಹುತಗಳು ಪರಿಸರ ಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಪ್ರತಿ ವರ್ಷ ಜಿಲ್ಲೆಯ ಬಹುತೇಕ ಎಲ್ಲ ಶಾಲಾ ಕಾಲೇಜುಗಳಲ್ಲಿಯೂ ಈ ಜಾಗೃತಿ ಅಭಿಯಾನ ನಡೆಯುತ್ತಿದೆ. ಇದರಿಂದ ಬೇರೆ ಜಿಲ್ಲೆಗೆ ಹೋಲಿಸಿದರೆ ಕೊಡಗಿನ ಮಕ್ಕಳಲ್ಲಿ ಹೆಚ್ಚಿನ ಪರಿಸರ ಜಾಗೃತಿ ಇದೆ. ಪಟಾಕಿಯನ್ನು ಖರೀದಿಸಿ ಸುಡುವುದರಿಂದ ಹಣ ವ್ಯರ್ಥ. ಈ ಹಣವನ್ನು ಬೇಕಾದ ಅಗತ್ಯಗಳನ್ನು ಪೂರೈಸಲು ಬಳಕೆ ಮಾಡಬಹುದು.-ಟಿ.ಜಿ.ಪ್ರೇಮಕುಮಾರ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ.
ಸ್ವಚ್ಛ ಭಾರತ ಸ್ವಚ್ಛ ಪರಿಸರ ಬೇಕು. ಕೊಡಗಿನಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿದೆ. ನಾವು ಇದನ್ನು ಹಾಗೆಯೇ ಕಾಪಾಡಿಕೊಳ್ಳಬೇಕು. ಈ ಶುದ್ಧ ಗಾಳಿಯನ್ನು ನಾವು ಉಳಿಸಿಕೊಳ್ಳಬೇಕು. ಇದಕ್ಕೆ ನಮ್ಮಲ್ಲಿ ಮೊದಲು ಅರಿವು ಬರಬೇಕು. ಇದಕ್ಕಾಗಿ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಮಾಲಿನ್ಯ ಹೆಚ್ಚು ಮಾಡದ ಹಸಿರು ಪಟಾಕಿಗಳ ಕಡೆಗೆ ಮಕ್ಕಳ ಗಮನ ಸೆಳೆಯುತ್ತಿದ್ದೇವೆ. ಪಟಾಕಿಯಿಂದ ವಯಸ್ಸಾದವರು ರೋಗಿಗಳು ಪ್ರಾಣಿ ಪಕ್ಷಿಗಳಿಗೆ ತೀರಾ ತೊಂದರೆಯಾಗುತ್ತದೆ. ಹೀಗಾಗಿ ಕಡಿಮೆ ಶಬ್ದ ಮಾಡುವ ಪಟಾಕಿ ಹಚ್ಚಿರಿ. ಸಾಧ್ಯವಾದರೆ ಪಟಾಕಿಯನ್ನು ತ್ಯಜಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ.-ಕೆ.ಟಿ.ಬೇಬಿ ಮ್ಯಾಥ್ಯೂ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಪ್ರಧಾನ ಆಯುಕ್ತ.
‘ಕ್ಯೂಆರ್’ ಕೋಡ್ ಇರುವಂತಹ ಹಸಿರು ಪಟಾಕಿ ಮಾರಾಟ ಮಾಡಲು ಮಾತ್ರವೇ ಜಿಲ್ಲಾಡಳಿತ ಪರವಾನಗಿ ನೀಡಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ದೀಪಾವಳಿಗೂ ಮುಂಚೆ ಮತ್ತು ಹಬ್ಬದ ನಂತರ ಸತತ 15 ದಿನಗಳ ಕಾಲ ಗಾಳಿ ನಿರಂತರವಾಗಿ ಗಾಳಿಯ ಗುಣಮಟ್ಟವನ್ನು ಮಾಪನ ಮಾಡುತ್ತಿದ್ದೇವೆ. ದೀಪಾವಳಿ ಹಬ್ಬದ 3 ದಿನಗಳಂದು ಸಂಜೆ 6ರಿಂದ ರಾತ್ರಿ 12 ಗಂಟೆಯವರೆಗೆ ಶಬ್ದಮಾಪನ ಮಾಡುತ್ತೇವೆ. ಎಲ್ಲ ಅಂಗಡಿಗಳಿಗೂ ಭೇಟಿ ನೀಡಿ ಹೆಚ್ಚು ಶಬ್ದ ಉಂಟು ಮಾಡುವ ಪಟಾಕಿಗಳನ್ನು ಪರೀಕ್ಷಿಸುತ್ತೇವೆ.-ರಘುರಾಮ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.