ADVERTISEMENT

ಕಾಡಾನೆ ದಾಳಿ: ವ್ಯಕ್ತಿಗೆ ಗಂಭೀರ ಗಾಯ

ಆನೆಗಳ ಹಾವಳಿ ತಡೆಗೆ ಕರಡಿಗೋಡು ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 0:45 IST
Last Updated 1 ಜೂನ್ 2021, 0:45 IST
ಗಾಯಾಳು ಪೌಲೋಸ್
ಗಾಯಾಳು ಪೌಲೋಸ್   

ಸಿದ್ದಾಪುರ:ಕರಡಿಗೋಡು ಗ್ರಾಮದಲ್ಲಿ ಸೋಮವಾರ ಕಾಡಾನೆಯೊಂದು ದಾಳಿ ಮಾಡಿದ್ದರಿಂದ ಕಾವಲುಗಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕರಡಿಗೋಡು ಗ್ರಾಮದ ಇವಾಲ್ವ್ ಬ್ಯಾಕ್ ಸಂಸ್ಥೆಯ ಕಾವಲುಗಾರ, ಪಶ್ಚಿಮ ಬಂಗಾಳ ಮೂಲದ ಪೌಲೋಸ್ ಪೌಲ್ (34) ಎಂದಿನಂತೆ ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ತಮ್ಮ ಕೊಠಡಿಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದೆ. ಕಾಡಾನೆ ದಾಳಿಯಿಂದಾಗಿ ಪೌಲೋಸ್‌ನ ಬೆನ್ನು ಹಾಗೂ ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಎಡ ಕಾಲು ಮುರಿದಿದೆ.

ಸ್ಥಳೀಯರು ಪೌಲೋಸ್‌ನನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಸ್ಥಳಕ್ಕೆ ವಿರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಡಾನೆ ಹಾವಳಿ ತಡೆಗೆ ಆಗ್ರಹ: ಕರಡಿಗೋಡು ಗ್ರಾಮದಲ್ಲಿ ಕಳೆದ ಹಲವು ತಿಂಗಳುಗಳಿಂದ ಕಾಡಾನೆ ಹಾವಳಿ ಮಿತಿಮೀರಿದ್ದು, ಹಿಂಡು ಹಿಂಡಾಗಿ ಕಾಫಿ ತೋಟದಲ್ಲಿ ಬೀಡುಬಿಡುತ್ತಿವೆ. ಫಸಲನ್ನು ನಾಶ ಮಾಡುತ್ತಿದ್ದು, ಕಾರ್ಮಿಕರು ಕೂಡ ಕೆಲಸಕ್ಕೆ ತೆರಳಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ದಿನ ಕಾಡಾನೆಗಳು ತೋಟದಲ್ಲಿ ದಾಂದಲೆ ನಡೆಸುತ್ತಿದ್ದು, ಕಾಫಿ ಗಿಡಗಳನ್ನು ಹಾನಿಮಾಡುತ್ತಿವೆ’ ಎಂದು ಬೆಳೆಗಾರರು ಆರೋಪಿಸಿದ್ದಾರೆ.

‘ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಕಾರ್ಯಾಚರಣೆ ನಡೆಸಿ ಕಾಡಾನೆ ಹಿಂಡನ್ನು ಕಾಡಿಗಟ್ಟಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.