ADVERTISEMENT

ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಆದ್ಯತೆ

ಹೈಮಾಸ್ಟ್ ದೀಪಗಳ ಲೋಕಾರ್ಪಣೆಯಲ್ಲಿ ಸಂಸದ ಮಲ್ಲೇಶ್ ಬಾಬು ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 7:10 IST
Last Updated 29 ಡಿಸೆಂಬರ್ 2025, 7:10 IST
ಬಂಗಾರಪೇಟೆ ತಾಲ್ಲೂಕಿನ ದಿನ್ನೂರು ಗ್ರಾಮದಲ್ಲಿ ಹೈಮಾಸ್ಟ್ ದೀಪಗಳನ್ನು ಸಂಸದ ಎಂ.ಮಲ್ಲೇಶ್ ಬಾಬು ಹಾಗೂ ಮುಖಂಡರು ಉದ್ಘಾಟಿಸಿದರು
ಬಂಗಾರಪೇಟೆ ತಾಲ್ಲೂಕಿನ ದಿನ್ನೂರು ಗ್ರಾಮದಲ್ಲಿ ಹೈಮಾಸ್ಟ್ ದೀಪಗಳನ್ನು ಸಂಸದ ಎಂ.ಮಲ್ಲೇಶ್ ಬಾಬು ಹಾಗೂ ಮುಖಂಡರು ಉದ್ಘಾಟಿಸಿದರು   

ಬಂಗಾರಪೇಟೆ: ರೈಲ್ವೆ ಗೇಟ್ ಹಾಕಿದಾಗ ಉಂಟಾಗುವ ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ಸುಗಮ ಪ್ರಯಾಣಕ್ಕಾಗಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಸಂಸದ ಮಲ್ಲೇಶ್ ಬಾಬು ಹೇಳಿದರು.

ತಾಲ್ಲೂಕಿನ ಶ್ರೀರಂಗ ಬಂಡಹಳ್ಳಿ, ದಿನ್ನೂರು ಮತ್ತು ರಾಮಸಂದ್ರ ಗ್ರಾಮಗಳಲ್ಲಿ ಸಂಸದರ ಅನುದಾನದಲ್ಲಿ ಅಳವಡಿಸಲಾದ ಹೈಮಾಸ್ಟ್ ದೀಪಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಕಾಮಸಮುದ್ರ ರೈಲ್ವೆ ಮೇಲ್ಸೇತುವೆ ಜೊತೆಗೆ ದೇಶಿಹಳ್ಳಿ, ಸ್ಯಾನಿಟೋರಿಯಂ, ಎಸ್.ಎನ್.ರೆಸಾರ್ಟ್, ಟೇಕಲ್ ಜಂಕ್ಷನ್ ಸೇರಿ ಒಟ್ಟು ನಾಲ್ಕು ಕಡೆ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು. ಶೀಘ್ರ ಕಾಮಗಾರಿ ಪ್ರಾಂರಂಭಿಸಲಾಗುತ್ತದೆ ಎಂದರು.

ADVERTISEMENT

ಕಾಮಸಮುದ್ರ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ 20 ಗುಂಟೆ ಭೂಮಿಯನ್ನು ಹಸ್ತಾಂತರ ಮಾಡಬೇಕಾಗಿದ್ದು, ಅದಕ್ಕೆ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ಅನುಮೋದನೆ ಬೇಕಾಗಿದೆ. ಜೊತೆಗೆ ರೈಲ್ವೆ ಬೋರ್ಡ್‌ನಿಂದ ತಾಂತ್ರಿಕ ಯೋಜನೆ ಅನುಮೋದನೆ ಆಗಬೇಕಿದೆ. ಅನುಮೋದನೆ ಸಿಕ್ಕ ನಂತರ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

ಬೂದಿಕೋಟೆ ವೃತ್ತದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕುರಿತು ಸಚಿವ ವಿ.ಸೋಮಣ್ಣ ಅವರಿಗೆ ದೂರು ನೀಡಿದ ಹಿನ್ನೆಲೆ ಸಚಿವರು ಗುಣಮಟ್ಟದೊಂದಿಗೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಡಿಆರ್‌ಎಂಗೆ ಸೂಚಿಸಿದ್ದಾರೆ. ಕಾಮಗಾರಿಯ ವೇಗ ಹೆಚ್ಚಿಸಿ ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಮೇಲ್ಸೇತುವೆ ಲೋಕಾರ್ಪಣೆ ಮಾಡಲಾಗುತ್ತದೆ ಎಂದರು.

ಯಾವುದೇ ಒಂದು ಊರು ಅಥವಾ ನಗರ ಅಭಿವೃದ್ಧಿಯಾಗುತ್ತಿದೆ ಎಂದರೆ ಅದಕ್ಕೆ ಅಲ್ಲಿನ ಮೂಲಭೂತ ಸೌಕರ್ಯಗಳೇ ಸಾಕ್ಷಿ. ರಸ್ತೆ, ನೀರು ಎಷ್ಟು ಮುಖ್ಯವೋ, ರಾತ್ರಿ ವೇಳೆ ಸಂಚರಿಸುವ ಜನರಿಗೆ ಬೆಳಕಿನ ವ್ಯವಸ್ಥೆಯೂ ಅಷ್ಟೇ ಮುಖ್ಯ. ಈ ಭಾಗದಲ್ಲಿ ರಾತ್ರಿ ವೇಳೆ ಕತ್ತಲಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿ, ಈ ಹೈಮಾಸ್ಟ್ ದೀಪವನ್ನು ಲೋಕಾರ್ಪಣೆಗೊಳಿಸಿದ್ದೇವೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್, ತಾ.ಪಂ.ಮಾಜಿ ಸದಸ್ಯ ಮಾರ್ಕಂಡೇಗೌಡ, ಶಿವಕುಮಾರ್, ವೆಂಕಟೇಶ್, ಸೀತಾರಾಮಪ್ಪ, ಬಾಲಚಂದ್ರ, ಸತೀಶ್ ಕುಮಾರ್ ಗೌಡ, ಬಾಲಕೃಷ್ಣ, ಎಚ್.ಎಲ್.ಹನುಮಂತ, ಪ್ರಸನ್ನ, ಮಂಜುನಾಥ, ನಾರಾಯಣಸ್ವಾಮಿ, ಶಿವು, ಮೂರ್ತಿ, ಅಶೋಕ್, ಮುರುಗೇಶ್, ವಿಶ್ವನಾಥಗೌಡ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.