ADVERTISEMENT

ಕೊಪ್ಪಳ | ಶಾಲಾ ಮಕ್ಕಳಿಗೆ ‘ಪ್ರವಾಹ’ ಸಂಕಟ

ರ‍್ಯಾವಣಕಿ–ಜಾಲಿಹಾಳ ನಡುವಿನ ಹಳ್ಳದ ಸಮಸ್ಯೆಗೆ ಸಿಗದ ಪರಿಹಾರ

ನಾರಾಯಣರಾವ ಕುಲಕರ್ಣಿ
Published 20 ಜುಲೈ 2025, 0:30 IST
Last Updated 20 ಜುಲೈ 2025, 0:30 IST
ಕುಷ್ಟಗಿ ತಾಲ್ಲೂಕಿನ ರ‍್ಯಾವಣಕಿ ಬಳಿ ತುಂಬಿ ಹರಿಯುತ್ತಿರುವ ಹಳ್ಳ ದಾಟುತ್ತಿರುವ ಶಾಲಾ ವಿದ್ಯಾರ್ಥಿಗಳು
ಕುಷ್ಟಗಿ ತಾಲ್ಲೂಕಿನ ರ‍್ಯಾವಣಕಿ ಬಳಿ ತುಂಬಿ ಹರಿಯುತ್ತಿರುವ ಹಳ್ಳ ದಾಟುತ್ತಿರುವ ಶಾಲಾ ವಿದ್ಯಾರ್ಥಿಗಳು   

ಕುಷ್ಟಗಿ (ಕೊಪ್ಪಳ ಜಿಲ್ಲೆ): ಮಳೆಗಾಲ ಆರಂಭವಾದರೆ ತಾಲ್ಲೂಕಿನ ರ‍್ಯಾವಣಕಿ ಗ್ರಾಮದ ಶಾಲೆಯ ವಿದ್ಯಾರ್ಥಿಗಳಿಗೆ ‘ಪ್ರವಾಹ’ ಸಂಕಟ ಕಾಡುತ್ತದೆ. ಮಕ್ಕಳು ಜೀವ ಕೈಯಲ್ಲಿ ಹಿಡಿದು ರ‍್ಯಾವಣಕಿ–ಜಾಲಿಹಾಳದ ನಡುವಿನ ಹಳ್ಳವನ್ನು ದಾಟಿ ಶಾಲೆಗೆ ಬರಬೇಕಾಗುತ್ತದೆ.

‘ದಶಕಗಳ ಸಮಸ್ಯೆಗೆ ಇನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಸೇತುವೆ ನಿರ್ಮಿಸಿಕೊಡಿ ಎಂಬ ನಮ್ಮ ಕೂಗು ಅರಣ್ಯರೋದನವಾಗಿದೆ. ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಸೇತುವೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡುತ್ತಾರೆ. ಗೆದ್ದು ಶಾಸಕರಾದ ನಂತರ ಇತ್ತ ಕಣ್ಣೆತ್ತಿಯೂ ನೋಡುವುದಿಲ್ಲ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಜುಲೈ 16ರಂದು ರಾತ್ರಿ ಸುರಿದ ಭಾರಿ ಮಳೆಗೆ ಹಳ್ಳದಲ್ಲಿ ಪ್ರವಾಹ ಬಂದಿತ್ತು. ಗುರುವಾರವೂ ಹಳ್ಳ ತುಂಬಿ ಹರಿಯುತ್ತಿತ್ತು. ಪಕ್ಕದ ಜಾಲಿಹಾಳ, ಶಿರಗುಂಪಿ, ದೋಟಿಹಾಳದಲ್ಲಿರುವ  ಶಾಲಾ– ಕಾಲೇಜು ವಿದ್ಯಾರ್ಥಿಗಳು ಜೀವ ಭಯದಲ್ಲೇ ಹಳ್ಳವನ್ನು ದಾಟಿಕೊಂಡು ಹೋದರು ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

‘ರ‍್ಯಾವಣಕಿಯಲ್ಲಿ 5ನೇ ತರಗತಿವರೆಗೆ ಮಾತ್ರ ಶಾಲೆಯಿದೆ. ನಂತರದ ವಿದ್ಯಾಭ್ಯಾಸಕ್ಕೆ ಮಕ್ಕಳು ಪಕ್ಕದ ಊರುಗಳಿಗೆ ಹೋಗುತ್ತಾರೆ. ಮಳೆಗಾಲದಲ್ಲಿ ಹಳ್ಳದಾಟುವುದೇ ದೊಡ್ಡ ಸಮಸ್ಯೆ. ಪ್ರವಾಹ ಸಂಕಟದಿಂದ ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಳಾಗುತ್ತಿದೆ’ ಎಂದು ಗೋವಿಂದಪ್ಪ ಕ್ಯಾದಗುಂಪ್ಪಿ, ಅಮರೇಗೌಡ ಪೊಲೀಸಪಾಟೀಲ, ನಾಗರಾಜ ಗುಮಗೇರಿ, ವೀರಭದ್ರಪ್ಪ ವಿವರಿಸಿದರು.

‘ಈ ಹಿಂದೆ ಹಳ್ಳಕ್ಕೆ ಸಿಮೆಂಟ್‌ ಕೊಳವೆಗಳನ್ನು ಅಳವಡಿಸಿ, ತಾತ್ಕಾಲಿಕ ದಾರಿ ಮಾಡಲಾಗಿತ್ತು. ಆದರೆ, ಹೆಚ್ಚು ನೀರು ಬಂದು ಅವು ಕೊಚ್ಚಿ ಹೋಗಿವೆ. ರಸ್ತೆ, ಹಳ್ಳದ ಸಮಸ್ಯೆಯಿಂದ ಸಾರಿಗೆ ಸಂಸ್ಥೆಯ ಬಸ್‌ ಕೂಡ ಬರುವುದಿಲ್ಲ. ಹಿಂದಿನ ಶಾಸಕ ಅಮರೇಗೌಡ ಬಯ್ಯಾಪುರ, ಹಾಲಿ ಶಾಸಕ ದೊಡ್ಡನಗೌಡ ಪಾಟೀಲರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥ ಚಂದಪ್ಪ ಪೂಜಾರ ದೂರಿದರು.

₹25 ಕೋಟಿ ಅಗತ್ಯವಿದ್ದರೂ ಸರ್ಕಾರ ₹15 ಕೋಟಿ ಬಿಡುಗಡೆ ಮಾಡಿತ್ತು. ಪೂರ್ಣ ಅನುದಾನ ಬಾರದಿದ್ದರೆ ಕೆಕೆಆರ್‌ಡಿಬಿ ಅನುದಾನದಲ್ಲಿ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ
ದೊಡ್ಡನಗೌಡ ಪಾಟೀಲ ಶಾಸಕ
ಮಳೆಗಾಲದಲ್ಲಿ ಹಳ್ಳಕ್ಕೆ ಪ್ರವಾಹ ಬರುವುದರಿಂದ ಮಕ್ಕಳು ಶಾಲೆಗೆ ಹೋಗುವುದು ದುಸ್ತರವಾಗುತ್ತಿದೆ. ಮಕ್ಕಳು ಹಳ್ಳ ದಾಟುವಾಗ ಅನಾಹುತ ಸಂಭವಿಸಿದರೆ ಯಾರು ಹೊಣೆ?
ಚಂದಪ್ಪ ಪೂಜಾರ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.