ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಾಣಾಪುರದಲ್ಲಿ ಇತ್ತೀಚೆಗೆ ನಡೆದ ಪ್ರವಾಸಿಗರ ಮೇಲಿನ ಹಲ್ಲೆ ಪ್ರಕರಣದಲ್ಲಿ ಪರಾರಿಯಾಗಿದ್ದ ಮೂರನೇ ಆರೋಪಿ ಶರಣ ಬಸವರಾಜ ಎಂಬಾತನನ್ನು ಘಟನೆ ನಡೆದ 72 ಗಂಟೆಯಲ್ಲಿಯೇ ಬಂಧಿಸಲಾಗಿದೆ.
ವಿಶೇಷವೆಂದರೆ ಆರೋಪಿ ಘಟನೆಯ ಬಳಿಕ ಪರಾರಿಯಾಗುವ ಮುನ್ನ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿರಲಿಲ್ಲ. ಕೈಯಲ್ಲಿದ್ದ ಸಣ್ಣ ಮೊತ್ತ ಇಟ್ಟುಕೊಂಡು ರಾಯಚೂರಿನಿಂದ ತಮಿಳುನಾಡಿನ ವೇಲೂರಿಗೆ ತೆರಳಿದ್ದ.
ಫೋನ್ ಇಲ್ಲದಿದ್ದರೂ ತನ್ನ ಕುಟುಂಬದವರು, ಆಪ್ತರು ಹಾಗೂ ಸ್ನೇಹಿತರು ಹೀಗೆ ತಮ್ಮ ವಲಯದ ಕೆಲವರಿಗೆ ಫೋನ್ ಮಾಡಿದ್ದಾನೆ. ಇದರ ಮೇಲೆ ಕಣ್ಗಾವಲು ಇರಿಸಿದ್ದ ಪೊಲೀಸರು ಆರೋಪಿ ರಾಯಚೂರು ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ರೈಲು ನಿಲ್ದಾಣದ ತನಕ ನಡೆದುಕೊಂಡೇ ಹೋಗಿ ಅಲ್ಲಿಂದ ರೈಲು ಏರಿದ್ದಾನೆ. ಈ ಸುಳಿವು ಅರಿತ ಕೊಪ್ಪಳ ಸೈಬರ್ ಪೊಲೀಸ್ ಠಾಣೆಯ ಇನ್‌ಸ್ಟೆಕ್ಟರ್ ಮಹಾಂತೇಶ ಸಜ್ಜನ, ಕುಕನೂರು ಠಾಣೆಯ ಪಿಎಸ್‌ಐ ಗುರುರಾಜ, ಸಿಬ್ಬಂದಿ ಅಂದಪ್ಪ, ವಿಶ್ವನಾಥ, ಮೈಲಾರಪ್ಪ, ಗ್ಯಾನಪ್ಪ, ಮಹಿಬೂಬ, ದೇವೇಂದ್ರ, ಸದ್ದಾಂಹುಸೇನ್ ಅವರನ್ನು ಒಳಗೊಂಡ ಎರಡು ತಂಡ ನಿರಂತರ ಶೋಧನೆ ನಡೆಸಿದೆ.
ರಾಯಚೂರಿನಲ್ಲಿ ಬಸ್ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಹೋಗುವ ಮಾರ್ಗದ ಪ್ರಮುಖ ರಸ್ತೆ ಮತ್ತು ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿ ರೈಲು ಏರಿದ್ದು ದೃಢಪಟ್ಟಿದೆ. ರಾಯಚೂರಿನಲ್ಲಿದ್ದಾಗ ತನ್ನ ಗೆಳೆಯರೊಬ್ಬರಿಗೆ ಫೋನ್ ಮಾಡಿ ಹಣ ಹಾಕುವಂತೆ ಕೇಳಿದ್ದಾನೆ. ತಕ್ಷಣವೇ ಆತ ಫೋನ್ ಮಾಡಿದ ಗೆಳೆಯನನ್ನು ಪೊಲೀಸರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಹಣ ಹಾಕಲು ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡುವಂತೆ ಹೇಳಿದ್ದಾರೆ. ಹಣಕ್ಕಾಗಿ ಮೇಲಿಂದ ಮೇಲೆ ಮಾಡಿದ ಫೋನ್ ಕರೆಯ ಮೂಲ ಹಿಡಿದು ಆರೋಪಿಯನ್ನು ಬಂಧಿಸಲಾಗಿದೆ. ಫೋನ್ ಇದ್ದರೆ ಸಿಕ್ಕಿ ಬೀಳುವ ಅಪಾಯ ಹೊಂದಿದ್ದ ಆರೋಪಿಗೆ ’ಬಾಡಿಗೆ ಫೋನ್’ ಮುಳುವಾಗಿದೆ.
ಆರೋಪಿಯನ್ನೇ ಹಿಂಬಾಲಿಸಿಕೊಂಡು ಮಂತ್ರಾಲಯ ರೈಲು ನಿಲ್ದಾಣದಲ್ಲಿಯೂ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಅಲ್ಲಿ ಆತ ಇಳಿದಿರಲಿಲ್ಲ. ಇದೇ ಜಾಡು ಮುಂದುವರಿಸಿದ ಪೊಲೀಸರು ರೈಲು ತೆರಳಿದ ಮಾರ್ಗದುದ್ದಕ್ಕೂ ಮಾಹಿತಿ ಪಡೆದುಕೊಂಡಿದ್ದಾರೆ. ತಮಿಳುನಾಡು ತಲುಪಿದ ಬಳಿಕ ಆರೋಪಿ ತಮ್ಮ ಆಪ್ತರಿಗೆ ಮಾಡಿದ ಕರೆಯಿಂದಾಗಿ ಆತ ಇರುವ ಜಾಗ ದೃಢಪಟ್ಟಿದೆ.
ಬೀಚ್‌ನಲ್ಲಿ ನಿದ್ದೆ: ಕೃತ್ಯ ನಡೆದ ದಿನ ಧರಿಸಿದ್ದ ಉಡುಪನ್ನೇ ಶರಣಬಸವರಾಜ ಧರಿಸಿ ಉಟ್ಟಬಟ್ಟೆಯಲ್ಲಿಯೇ ಊರು ಬಿಟ್ಟಿದ್ದ. ವೆಲ್ಲೂರಿನ ಸಮೀಪ ಬೀಚ್ ದಡದಲ್ಲಿ ಸಿಕ್ಕಿದ್ದ ಟೋಪಿ ಧರಿಸಿ ಕರವಸ್ತ್ರ ಕಟ್ಟಿಕೊಂಡು ಮಲಗಿದ್ದ. ಉಟ್ಟ ಬಟ್ಟೆ, ಫೋನ್ ಕರೆ, ಪೊಲೀಸರು ಕಟ್ಟಿದ್ದ ’ಮಾಹಿತಿ ಹಂಚಿಕೆಯ ತಂಡ’ ಒದಗಿಸಿದ ವಿವರದಿಂದ ಆರೋಪಿ ಪತ್ತೆಯಾಗಿದ್ದಾನೆ.
‘ಪರಾರಿಯಾಗುವ ಆರೋಪಿ ಬಳಿ ಫೋನ್ ಇದ್ದರೆ ಈಗಿನ ತಂತ್ರಜ್ಞಾನದ ಕಾಲದಲ್ಲಿ ಪತ್ತೆ ಹೆಚ್ಚುವುದು ಕಷ್ಟವಲ್ಲ. ಆದರೆ ಫೋನ್ ಬಳಕೆ ಇಲ್ಲದ ಕಾರಣ ಆರೋಪಿ ಪತ್ತೆ ಸವಾಲಾಗಿತ್ತು. ಎಲ್ಲ ಪೊಲೀಸರ ನೆರವಿನೊಂದಿಗೆ, ತಾಂತ್ರಿಕ ತಂಡದ ಸಹಕಾರದೊಂದಿಗೆ ಆರೋಪಿ ಪತ್ತೆ ಸಾಧ್ಯವಾಯಿತು’ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರೊಬ್ಬರು ಅನುಭವ ಹಂಚಿಕೊಂಡರು.
ಆರೋಪಿಯಿಂದ ಸ್ಥಳ ಮಹಜರು
ಗಂಗಾವತಿ: ಪತ್ತೆಯಾಗಿರುವ ಮೂರನೇ ಆರೋಪಿಯ ಶರಣಬಸವರಾಜನನ್ನು ಕರೆದುಕೊಂಡು ಹೋಗಿ ಗಂಗಾವತಿ ತಾಲ್ಲೂಕಿನ ಸಾಣಾಪುರದ ಸಮೀಪ ಘಟನೆ ನಡೆದ ಸ್ಥಳ ಮಹಜರು ಮಾಡಲಾಯಿತು. ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಜಿಲ್ಲೆಯ ಪ್ರವಾಸಿಗರ ಹಿತರಕ್ಷಣೆಗೆ ಸಹಾಯವಾಣಿ
ಕೊಪ್ಪಳ: ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಜನರಿಗೆ ಮಾಹಿತಿ ಒದಗಿಸಲು ಹಾಗೂ ಭದ್ರತೆ ಹಿತದೃಷ್ಟಿಯಿಂದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯು ಸಹಾಯವಾಣಿ ಆರಂಭಿಸಿದೆ. ಇತ್ತೀಚೆಗೆ ಸಾಣಾಪುರದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ಜಿಲ್ಲೆಯು ಐತಿಹಾಸಿಕ ಪ್ರೇಕ್ಷಣಿಯ ಸ್ಥಳಗಳನ್ನು ಹೊಂದಿದ್ದು, ದೇಶ ಹಾಗೂ ವಿದೇಶಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಆದ್ದರಿಂದ ಜಿಲ್ಲಾಡಳಿತ ಭವನದಲ್ಲಿ ಸಹಾಯವಾಣಿ ಮತ್ತು ಮಾಹಿತಿ ಕೇಂದ್ರ ಆರಂಭಿಸಲಾಗಿದೆ. ಈ ಕೇಂದ್ರದಲ್ಲಿ ಆರೋಗ್ಯ, ಪೊಲೀಸ್, ಅಗ್ನಿಶಾಮಕ, ಅರಣ್ಯ, ಅಬಕಾರಿ, ಪ್ರವಾಸೋದ್ಯಮ ಮತ್ತು ಪುರಾತತ್ವ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರವಾಸಿಗರಿಗೆ ಆಪತ್ತು ಎದುರಾದರೆ ಮತ್ತು ತುರ್ತು ಸಂದರ್ಭದಲ್ಲಿ ಮಾಹಿತಿ ಒದಗಿಸಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ತನಕ ಸಹಾಯವಾಣಿ ಕರ್ತವ್ಯ ನಿರ್ವಹಿಸಲಿದೆ. ಪ್ರವಾಸಿಗರು 08539–225311 ಕರೆ ಮಾಡಬಹುದು ಎಂದು ಜಿಲ್ಲಾ ಪ್ರವಾಸೋದ್ಯಮ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.